

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಂಪರ್ಕವಿಲ್ಲದ ಎಲ್ಲ ಪ್ರದೇಶಗಳಿಗೂ ಶೀಘ್ರದಲ್ಲಿ ರೈಲ್ವೆ ಸಂಪರ್ಕ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶ್ರೀನಗರ ಮತ್ತು ರಾಂಬನ್ ನಡುವಿನ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಪ್ರಾಯೋಗಿಕ ಚಾಲನೆಗಳು ಪ್ರಾರಂಭವಾಗಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಸಂಪರ್ಕವಿಲ್ಲದ ಎಲ್ಲ ಪ್ರದೇಶಗಳಿಗೂ ರೈಲು ಮೂಲಕ ಸಂಪರ್ಕಿಸಲು ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಕಣಿವೆಯ ರಾಂಬನ್, ದೋಡಾ, ಕಿಶ್ತವಾಢ್ ಹಾಗೂ ಕಾಶ್ಮೀರಕ್ಕೆ ನವದೆಹಲಿಯಿಂದಲೇ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ನಿಮ್ಮ ಕನಸನ್ನು ನಾನು ಈಡೇರಿಸುತ್ತೇನೆ" ಎಂದು ಭರವಸೆ ನೀಡಿದರು.
ಶ್ರೀನಗರದಿಂದ ರಾಂಬನ್ಗೆ ಶೀಘ್ರದಲ್ಲೇ ರೈಲು ಸಂಚಾರ ಆರಂಭಗೊಳ್ಳಲಿದೆ, ರೈಲು ಮಾರ್ಗದ ಕೆಲಸ ಪೂರ್ಣಗೊಂಡಿದೆ, ನಿಲ್ದಾಣ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ಆರಂಭಗೊಂಡಿದೆ ಎಂದು ಅವರು ಹೇಳಿದರು.
ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (USBRL) ಯೋಜನೆಯು ಮುಕ್ತಾಯದ ಹಂತದಲ್ಲಿದ್ದು ಕಾಶ್ಮೀರ ಮತ್ತು ದೇಶದ ಉಳಿದ ಭಾಗಗಳ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸಲು ಸಜ್ಜಾಗಿದೆ. ಯುಎಸ್ಬಿಆರ್ಎಲ್ ಯೋಜನೆಯ ಒಟ್ಟು 272 ಕಿಮೀಗಳಲ್ಲಿ 161 ಕಿಮೀ ಈಗಾಗಲೇ ಹಂತ ಹಂತವಾಗಿ ಕಾರ್ಯಾರಂಭಗೊಂಡಿದೆ.