

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯುಸಿರೆಳೆಯುತ್ತಿದೆ. ಈ ಸುಂದರ ಪ್ರದೇಶವನ್ನು ನಾಶಪಡಿಸಿದ ರಾಜವಂಶದ ರಾಜಕೀಯವನ್ನು ಎದುರಿಸಲು ನಮ್ಮ ಸರ್ಕಾರ ಹೊಸ ನಾಯಕತ್ವವನ್ನು ಸಿದ್ಧಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ದೋಡಾ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನಾವು ಮತ್ತು ನೀವು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಸುರಕ್ಷಿತ ಮತ್ತು ಸಮೃದ್ಧ ಭಾಗವನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಸೆಪ್ಟೆಂಬರ್ 18 ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನಡೆಸಿದ ಮೊದಲ ಚುನಾವಣಾ ರ‍್ಯಾಲಿ ಇದಾಗಿದೆ.
ಭಾರತೀಯ ಜನತಾ ಪಕ್ಷದ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ನೀಡುತ್ತದೆ. ಹಾಗೂ ಬಿಜೆಪಿಯ ಸಂಕಲ್ಪ ಮತ್ತು ನಿಮ್ಮ ಬೆಂಬಲವು ಜೆ & ಕೆ ಅನ್ನು ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧಗೊಳಿಸುತ್ತದೆ ಎಂದು ಮೋದಿ ಭರವಸೆ ನೀಡಿದರು.
ಹೊಸ ನಾಯಕತ್ವ ಬೆಳೆಯಲು ಬಿಡಲಿಲ್ಲ: "ಸ್ವಾತಂತ್ರ್ಯದ ನಂತರ, ಜಮ್ಮು ಮತ್ತು ಕಾಶ್ಮೀರವು ವಿದೇಶಿ ಶಕ್ತಿಗಳ ಗುರಿಯಾಯಿತು ಮತ್ತು ರಾಜವಂಶದ ರಾಜಕೀಯವು ಈ ಸುಂದರ ಪ್ರದೇಶವನ್ನು ಒಳಗಿನಿಂದ ಟೊಳ್ಳಾಗಿಸಿತು. ರಾಜಕೀಯ ರಾಜವಂಶಗಳು ತಮ್ಮ ಮಕ್ಕಳನ್ನು ಮುಂದಿಟ್ಟುಕೊಂಡು ಹೊಸ ನಾಯಕತ್ವ ಬೆಳೆಯಲು ಬಿಡಲಿಲ್ಲ. "ನಾವು 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ" ಯುವ ನಾಯಕತ್ವದ ತರಲು ಕೇಂದ್ರ ಸರ್ಕಾರವು ಗಮನಹರಿಸಿದೆ ಎಂದು ಅವರು ಹೇಳಿದರು.‘
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಅವರ ಚುನಾವಣಾ ಭರವಸೆಗಳು ಕಾರ್ಯರೂಪಕ್ಕೆ ಬಂದರೆ, ಹಿಂದಿನಂತೆ ಶಾಲೆಗಳಿಗೆ ಬೆಂಕಿ ಹಚ್ಚುವ ಮತ್ತು ಕಲ್ಲು ತೂರಾಟ ದಿನನಿತ್ಯದ ದಿನಗಳಿಗೆ ಹಿಂದಿರುಗುತ್ತದೆ ಎಂದು ಹೇಳಿದರು.
"ಕಾಂಗ್ರೆಸ್, PDP ಮತ್ತು NC 370 ನೇ ವಿಧಿಯನ್ನು ಮರುಸ್ಥಾಪಿಸಲು ಬಯಸುತ್ತಿವೆ. ಮೂರು ಕುಟುಂಬಗಳು ಮತ್ತೊಮ್ಮೆ ಪಹಾಡಿಗಳ ಮೀಸಲಾತಿಯನ್ನು ಕಸಿದುಕೊಳ್ಳುತ್ತವೆ ಎಂದರ್ಥ. ಅವರ ಪ್ರಣಾಳಿಕೆ ಜಾರಿಯಾದರೆ ಮತ್ತೊಮ್ಮೆ ಶಾಲೆಗಳಿಗೆ ಬೆಂಕಿ ಹಚ್ಚುತ್ತಾರೆ, ಮಕ್ಕಳ ಕೈಗೆ ಕಲ್ಲು ಕೊಡುತ್ತಾರೆ, ಧರಣಿ ನಡೆಸುತ್ತಾರೆ. ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಯೇ ನಫ್ರತ್ ಕಿ ದುಕಾನ್ ಪೆ ಮೊಹಬ್ಬತ್ ಕಿ ದುಕಾನ್ ಕಾ ಬೋರ್ಡ್ ಲಗಾ ಕರ್ ಕೆ ಘುಮ್ತೇ ಹೈ ,” ಎಂದು ಪ್ರಧಾನಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಮೂರು ಜಿಲ್ಲೆಗಳ 8 ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.