ಜಮ್ಮು-ಕಾಶ್ಮೀರ ಸಿಎಂ ಒಮರ್ ಪ್ರಮಾಣ; ಸುರೇಂದರ್ ಚೌಧರಿ ಡಿಸಿಎಂ

Omar Abdullah
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿ ಆಗಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದುಕೊಂಡ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ 2019ರ ನಂತರದ ಮೊದಲ ಚುನಾಯಿತ ಸರ್ಕಾರದ ಸಿಎಂ ಆಗಿ ಅವರು ಅಧಿಕಾರ ವಹಿಸಿ ಕೊಂಡಿದ್ದಾರೆ. ಇವರೊಂದಿಗೆ ಜಮ್ಮು ಪ್ರದೇಶದ ಮೂವರು ಹಾಗೂ ಕಾಶ್ಮೀರ ಕಣಿವೆ ಪ್ರದೇಶದ ಇಬ್ಬರು ಸಚಿವರೂ ಪ್ರಮಾಣವಚನ ಸ್ವೀಕರಿಸಿದರು. ಇವರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಒಮರ್ ಅಬ್ದುಲ್ಲಾ ಎರಡನೇ ಬಾರಿಗೆ ಸಿಎಂ ಆದಂತಾಗಿದೆ. ಇದಕ್ಕೂ ಮುನ್ನ 2009-2014ರ ಅವಧಿಯಲ್ಲಿ ಒಮರ್ ಸಿಎಂ ಆಗಿದ್ದರು. ಹಿಂದೆ ಇವರ ತಂದೆ ಫಾರೂಕ್ ಅಬ್ದುಲ್ಲಾ, ತಾತ ಶೇಖ್ ಅಬ್ದುಲ್ಲಾ ಕೂಡ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದರು.

ಜಮ್ಮು ಪ್ರದೇಶದ ನೌಷೆರಾ ವಿಧಾನಸಭಾ ಕ್ಷೇತ್ರದ ಸುರೇಂದರ್ ಚೌಧರಿ ಅವರನ್ನು ಉಪ ಮುಖ್ಯಮಂತ್ರಿ ಆಗಿ ಆರಿಸಿ ಕೊಂಡಿರುವುದು ಆಡಳಿತದಲ್ಲಿ ಪ್ರಾದೇಶಿಕ ಸಮತೋಲನ ಕಾಪಾಡುವ ನಿಲುವನ್ನು ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಎನ್​ಸಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹೊಸ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ತೆಗೆದುಕೊಳ್ಳದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಆರು ವರ್ಷಗಳ ಕೇಂದ್ರದ ನೇರ ಆಡಳಿತದಿಂದ ಮುಕ್ತಿ ಹೊಂದಿ ರಚನೆ ಆಗಿರುವ ಜಮ್ಮು-ಕಾಶ್ಮೀರದ ನೂತನ ಸರ್ಕಾರದಲ್ಲಿ ಗರಿಷ್ಠ 9 ಮಂದಿ ಸಚಿವರು ಇರಲಿದ್ದಾರೆ.

ಇಂದು ಹರಿಯಾಣ ಸಿಎಂ ಅಧಿಕಾರಕ್ಕೆ: ಹರಿಯಾಣದ ನೂತನ ಬಿಜೆಪಿ ಸರ್ಕಾರದ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬೆನ್ನಿಗೆ ಅವರು ನೂತನ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಗುರುವಾರ ಅವರು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸೈನಿ ಅವರು ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಘೋಷಿಸಿತ್ತು.

Omar Abdullah
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net