

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಇರುವ ಎಲ್ಲ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ನಿಲುವಿನ ಪರವಾಗಿಲ್ಲ. ಸ್ವತಂತ್ರ ಕಾಶ್ಮೀರದ ಕನಸು ಕಂಡವರು ಪಾಕಿಸ್ತಾನ, ಚೀನಾದ ಹಿಡನ್ ಅಜೆಂಡಾ ನೋಡಿ ಇತ್ತೀಚಿನ ವರ್ಷಗಳಲ್ಲಿ ಅವುಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ! ಗಿಲ್ಗಿಟ್-ಬಾಲ್ಟಿಸ್ತಾನದ ಸ್ವಾಯತ್ತೆ ಮತ್ತು ವಿಲೀನ ವಿಚಾರಗಳಲ್ಲಿ ಭಿನ್ನಮತ ತೋರಿದ್ದೀಗ ಬಹಿರಂಗವಾಗಿದೆ.
ಈ ರೀತಿ ಭಿನ್ನಮತ ಇದೇ ಮೊದಲ ಸಲವೇನಲ್ಲ. ಆದಾಗ್ಯೂ, ಈ ಭಾರಿ ಪ್ರತ್ಯೇಕತಾದಿಗಳ ಬಣಗಳ ಸಂಖ್ಯೆ ಸ್ವಲ್ಪ ಹೆಚ್ಚಾದ ಕಾರಣ ಸುದ್ದಿ ದೊಡ್ಡ ಪ್ರಮಾಣದಲ್ಲೇ ಬಹಿರಂಗವಾಗಿದೆ. ಗೀಲಾನಿ ಬಣ, ಜೆಕೆಎಲ್ಎಫ್ ಬಣಗಳ ಪ್ರತಿನಿಧಿಗಳು ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಹಿಂದೆಯೂ ಪಾಕ್ ಅಧ್ಯಕ್ಷ ಪರ್ವೇಜ್ ಮುಷಾರಫ್ ಅವರ 4 ಅಂಶಗಳ ಕಾರ್ಯಸೂಚಿಯನ್ನೂ ಗೀಲಾನಿ ತಳ್ಳಿಹಾಕಿದ್ದರು. ಇದೇ ಕಾರಣಕ್ಕೆ ಗೀಲಾನಿಯವರ ಇಸ್ಲಮಾಬಾದ್ ಮತ್ತು ಪಿಒಕೆ ಕಚೇರಿಗಳನ್ನು ಪಾಕ್ ಸರ್ಕಾರ ಮುಚ್ಚಿಸಿತ್ತು.
ಇದಾದ ನಂತರದಲ್ಲಿ ಗೀಲಾನಿಯ ಪ್ರತಿನಿಧಿ ಸ್ಥಾನವನ್ನೂ ಐಎಸ್ಐ ವಜಾಗೊಳಿಸಿತ್ತು. ಗೀಲಾನಿಯ ಪ್ರತಿನಿಧಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ತಾನೂ ರಾಜಕೀಯಕ್ಕೆ ಇಳಿದ. ಐಎಸ್ಐ ಕುತಂತ್ರದ ವಿರುದ್ಧ ಹೋರಾಟ ನಡೆಸಲು ಕೈ ಜೋಡಿಸುವಂತೆ ಇತರೆ ಪ್ರತ್ಯೇಕತಾವಾದಿಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು ಕೂಡ ಈಗ ಬಯಲಾಗಿದೆ.
ಈ ಹೋರಾಟ ನಡೆಸುವ ಸಲುವಾಗಿಯೇ ಜೆಕೆಎಲ್ಎಫ್ನ ರಫೀಕ್ ಧರ್, ಹುರಿಯತ್ ಮಿರ್ವೇಜ್ ಗ್ರೂಪ್ನ ಫೈಝ್ ನಖಾಶ್ಬಂದಿ, ಹಿಜ್ಬುಲ್ ಕಮಾಂಡರ್ ಸಲಾಹುದಿನ್, ಜಮಾತ್ ಏ ಇಸ್ಲಾಮಿಯ ನಬಿ ನೌಶರಿ ಸೇರಿ ಆರು ಸದಸ್ಯರ ಕೋರ್ ಕಮಿಟಿಯನ್ನೂ ರಚಿಸಿಕೊಂಡಿದ್ದಾರೆ. ಈ ಗುಂಪು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರದ ಪ್ರಧಾನ ಮಂತ್ರಿ ರಾಜಾ ಫರೂಕ್ ಹೈದರ್ನನ್ನು ಬೆಂಬಲಿಸುತ್ತಿದೆ. ಇದರೊಂದಿಗೆ ಐಎಸ್ಐ ಕೂಡ ಈ ಗುಂಪಿನ ವಿರುದ್ಧ ಕತ್ತಿಮಸೆಯಲಾರಂಭಿಸಿತು. ಪ್ರತ್ಯೇಕತಾವಾದಿಗಳು, ಪಾಕಿಸ್ತಾನ, ಚೀನಾ ಇವುಗಳ ಕಳ್ಳಾಟ ಬಹುತೇಕ ಬಯಲಾಗಿದ್ದು, ಅವನತಿಯ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. (ಏಜೆನ್ಸೀಸ್)