

ನವದೆಹಲಿ: ಸಿಎಎ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿಕೊಂಡಿದ್ದ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ದೆಹಲಿ ಪೊಲೀಸರಿಂದ ಕೋಟಿ ಕೋಟಿ ನಷ್ಟವಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. 2.66 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿರುವುದಾಗಿ ವಿದ್ಯಾಲಯವು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ದಾಖಲೆ ನೀಡಿದೆ.
ಮೂರು ದಿನಗಳ ಹಿಂದೆ ಜಾಮಿಯಾ ವಿಶ್ವವಿದ್ಯಾಲಯದ ಸಮನ್ವಯ ಸಮಿತಿಯು ದೆಹಲಿ ಪೊಲೀಸರು ತಮ್ಮ ವಿದ್ಯಾಲಯದ ರೀಡಿಂಗ್ ಹಾಲ್ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹರಿಬಿಟ್ಟಿತ್ತು. ಇದಕ್ಕೆ ಪ್ರತಿ ಎನ್ನುವಂತೆ ದೆಹಲಿ ಪೊಲೀಸರು ಆ ರೀತಿಯಲ್ಲಿ ನುಗ್ಗಿ ಹೊಡೆಯುವುದಕ್ಕೆ ಅಲ್ಲಿದ್ದ ವಿದ್ಯಾರ್ಥಿಗಳೇ ಕಾರಣ, ಆ ವಿದ್ಯಾರ್ಥಿಗಳು ತಮ್ಮ ಮೇಲೆ ಕಲ್ಲು ಎಸೆದು ಅಡಗಿ ಕುಳಿತಿದ್ದರಿಂದ ಹಾಗೆ ಮಾಡಿದ್ದಾಗಿ ತಿಳಿಸಿದ್ದರು. ಹಾಗೆಯೇ ವಿದ್ಯಾರ್ಥಿಗಳು ಬಾಲ್ಕನಿಯಲ್ಲಿ ನಿಂತು ಕಲ್ಲು ಎಸೆಯುತ್ತಿದ್ದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಈ ವಾದ ವಿವಾದವು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಜಾಮಿಯಾ ವಿಶ್ವವಿದ್ಯಾಲಯವು ದೆಹಲಿ ಪೊಲೀಸರು ತಮ್ಮ ಕಾಲೇಜಿನ 2.66 ಕೋಟಿ ಮೌಲ್ಯದ ಆಸ್ತಿಯನ್ನು ಹಾನಿ ಮಾಡಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ.
4.75 ಲಕ್ಷ ಮೌಲ್ಯದ 25 ಸಿಸಿಟಿವಿಯನ್ನು ದೆಹಲಿ ಪೊಲೀಸರು ಹಾಳು ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 41,25 ಲಕ್ಷ ಮೌಲ್ಯದ 75 ಬಾಗಿಲುಗಳು, 22.5 ಲಕ್ಷದ 220 ಕಿಟಕಿಗಳು, 15 ಲಕ್ಷ ಮೌಲ್ಯದ ರೇಲಿಂಗ್, 14 ಲಕ್ಷದ ಟೇಬಲ್ಗಳು, 7 ಲಕ್ಷ ಬೆಲೆಬಾಳುವ 175 ಕುರ್ಚಿಗಳು, 6 ಲಕ್ಷ ಮೌಲ್ಯದ ಶೌಚಾಲಯ ವಸ್ತುಗಳು, 7.5 ಲಕ್ಷ ಬೆಲೆಯ ಸಸ್ಯಗಳು, 8 ಲಕ್ಷದ ಟೈಲ್ಸ್, 4.5 ಲಕ್ಷದ ಅಲ್ಯೂಮಿನಿಯಂ ಡೋರ್ಗಳು ಪೊಲೀಸರ ಲಾಠಿ ಚಾರ್ಜ್ನಿಂದಾಗಿ ಹಾನಿಗೊಳಗಾಗಿದೆ ಎಂದು ವಿವಿ ತಿಳಿಸಿದೆ.
ಉಳಿದಂತೆ ಗೋಡೆಯ ಬಣ್ಣ (22.5 ಲಕ್ಷ), 165 ಲೈಟ್ಗಳು (12.4 ಲಕ್ಷ), ಕನ್ನಡಿಗಳು ಸೇರಿದಂತೆ ಹಲವು ಸಣ್ಣ ಪುಟ್ಟ ವಸ್ತುಗಳನ್ನೂ ಸಹ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಒಟ್ಟು 2,66,16,390 ರೂಪಾಯಿ ನಷ್ಟವಾಗಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)