ಬರಿದಾಗುತ್ತಿದೆ ಜಂಬದಹಳ್ಳ ಒಡಲು

jambadahalla
ಜಂಬದಹಳ್ಳ ಜಲಾಶಯದ ಕೋಡಿ ಮೂಲಕ ನೀರು ಸೋರಿಕೆ ಆಗುತ್ತಿರುವುದು.
Published on

ತರೀಕೆರೆ: ಬೇಸಿಗೆ ಆರಂಭದಿಂದ ಅಂತ್ಯದವರೆಗೂ ಜಮೀನುಗಳಿಗೆ ನೀರುಣಿಸಿ ರೈತರ ಕಷ್ಟ ನೀಗಿಸುವ ಜಂಬದಹಳ್ಳ ಜಲಾಶಯದ ಸಾಕಷ್ಟು ಪ್ರಮಾಣದ ನೀರು ತೂಬು ಹಾಗೂ ಕೋಡಿ ಮೂಲಕ ವ್ಯರ್ಥವಾಗಿ ಹರಿಯುತ್ತಿದೆ.

ಎರಡ್ಮೂರು ದಶಕಗಳಿಂದ ನಡೆಸಿದ ಹೋರಾಟದ ಲವಾಗಿ ಅನುಷ್ಠಾನಗೊಂಡಿದ್ದ ಹೋದಿರಾಯನಹಳ್ಳ ಪಥ ಪರಿವರ್ತನೆ ಯೋಜನೆ ಮೂಲಕ ನೂರಾರು ರೈತರ ಜೀವನಾಡಿಯಾಗಿರುವ ಜಂಬದಹಳ್ಳ ಜಲಾಶಯದ ಒಡಲು ಸೇರುತ್ತದೆ. ಅಲ್ಲಿಂದ ಅಚ್ಚುಕಟ್ಟು ಪ್ರದೇಶದ ರೈತರ 3,158 ಹೆಕ್ಟರ್ ಭೂ ಪ್ರದೇಶಕ್ಕೆ ಹರಿದು ಹೋಗಬೇಕಿರುವ ನೀರು ದುರ್ಬಲವಾಗಿರುವ ಕೋಡಿ ಮತ್ತು ತೂಬುಗಳ ಸೋರಿಕೆಯಿಂದ ಎಲ್ಲೆಂದರಲ್ಲಿ ಹರಿದು ಹೋಗುತ್ತಿದೆ.
ಈ ಹಿಂದೆ ಕುಂಭದ್ರೋಣ ಮಳೆ ಸುರಿದರೂ ಭರ್ತಿಯಾಗದ ಜಂಬದಹಳ್ಳ ಜಲಾಶಯ ಹೋದಿರಾಯನಹಳ್ಳ ಪಥ ಪರಿವರ್ತನೆ ಯೋಜನೆ ಪೂರ್ಣಗೊಂಡ ಬಳಿಕ ಸಾಧಾರಣ ಮಳೆಗೂ ತುಂಬಿಕೊಳ್ಳುತ್ತಿದೆ. ಹೋದಿರಾಯನ ಹಳ್ಳ ಮಾತ್ರವಲ್ಲ, ಸುತ್ತಮುತ್ತಲ ಗಿರಿಶ್ರೇಣಿಗಳಿಂದ ಒಡಲು ತುಂಬಿಸಿಕೊಳ್ಳುತ್ತಿರುವ ಜಲಾಶಯ ಪ್ರಸಕ್ತ ವರ್ಷ 15 ಅಡಿಯಷ್ಟು ಭರ್ತಿಯಾಗಿದ್ದು ಪೂರ್ಣಗೊಳ್ಳಲು 3 ಅಡಿಯಷ್ಟೇ ಬಾಕಿಯಿದೆ.
ಕಳೆದ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರುವ ಎಡ ನಾಲೆ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಬೇಸಿಗೆ ಸಮಯದಲ್ಲಿ ನೀರುಣಿಸುವ ಬಲ ಬದಿಯ ನಾಲೆಯಲ್ಲಿ ದೊಡ್ಡ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ದಿನೇದಿನೆ ಇಳಿಕೆಯಾಗುತ್ತಿದೆ.
ಜಮೀನಿಗೆ ನೀರುಣಿಸುವ ಜತೆಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಸುತ್ತಮುತ್ತ ಪರಿಸರದಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳಿಂದ ಜಲಾಶಯ ಕಳೆಗುಂದುತ್ತಿದೆ. ಅಲ್ಲದೆ ನಿರ್ವಹಣೆ ಹೊಣೆ ಹೊತ್ತ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷೃದಿಂದ ಜಲಾಶಯದ ಒಡಲು ಬರಿದಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಸೂಕ್ತ ನಿರ್ವಹಣೆ ಮೂಲಕ ನಿರಂತರ ಪೋಲಾಗುತ್ತಿರುವ ನೀರನ್ನು ತಡೆಗಟ್ಟುವ ಪ್ರಯತ್ನಕ್ಕೆ ಮುಂದಾಗಬೇಕಿದೆ.
ರಾಮಕೃಷ್ಣ ಹೆಗಡೆ ಅವಧಿಯಲ್ಲಿ ಚಾಲನೆಗೊಂಡಿದ್ದ ಹೋದಿರಾಯನಹಳ್ಳ ಪಥ ಪರಿವರ್ತನಾ ಯೋಜನೆ ಅರಣ್ಯ ಇಲಾಖೆಯ ಅಡೆತಡೆಯಷ್ಟೇ ಅಲ್ಲ, ಸತತ ಎದುರಾದ ಅನೇಕ ವಿಘ್ನಗಳನ್ನು ಎದುರಿಸಿ ಐದಾರು ವರ್ಷಗಳ ಹಿಂದೆ ಪೂರ್ಣಗೊಂಡಿದೆ. ಅತ್ಯಂತ ಪ್ರಯೋಜನಕಾರಿ ಯೋಜನೆ. ಆದರೆ ನಿರ್ವಹಣೆ ಕೊರತೆಯಿಂದ ರೈತರಿಗೆ ತೊಂದರೆಯಾಗುತ್ತಿದೆ.
ಸೋರಿಕೆ ತಡೆಗಟ್ಟಿದರಷ್ಟೇ ನೀಗಲಿದೆ ಬವಣೆ: ಸಕಾಲದಲ್ಲಿ ಭರ್ತಿಯಾದರೆ ಅಚ್ಚುಕಟ್ಟು ಪ್ರದೇಶದ 3 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಜಂಬದಹಳ್ಳ ಜಲಾಶಯ ಕಳೆದ ಐದಾರು ವರ್ಷಗಳಿಂದ ಜೀವಕಳೆ ಪಡೆದುಕೊಳ್ಳುತ್ತಿದೆ. ಜಲಾಶಯದಲ್ಲಿ ಸಂಗ್ರಹವಾಗುವ 1 ಟಿಎಂಸಿ ನೀರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಸೀತಾಪುರ ಕಾವಲ್, ದುಗ್ಲಾಪುರ, ಚಿಕ್ಕಾತ್ತೂರು, ಸಿದ್ದರಹಳ್ಳಿ, ಬಿ.ಸಿದ್ದರಹಳ್ಳಿ, ಯಲುಗೆರೆ, ಜಂಬದಹಳ್ಳ, ಸಿಡುಕನಹಳ್ಳಿ, ಸ್ಟೇಷನ್ ದುಗ್ಲಾಪುರ ಭಾಗದ ರೈತರ ಬವಣೆ ನೀಗಿಸಿ ಪಟ್ಟಣ ಸಮೀಪದ ದಳವಾಯಿಕೆರೆ ಹಾಗೂ ಕಟ್ಟೇಹೊಳೆ ಹಳ್ಳದ ಒಡಲು ಕೂಡ ಭರ್ತಿಯಾಗಲು ನೆರವಾಗುತ್ತಿದೆ.
ಗಿಡಗಂಟಿಗಳಿಂದ ನಾಲೆ ಆವೃತ: ಜಲಾಶಯ ನಿರ್ಮಾಣವಾದಾಗಲೇ ನಿರ್ಮಿಸಲಾಗಿದ್ದ ಎಡ ಬದಿಯ ನಾಲೆ ನಿಷ್ಕ್ರೀಯವಾಗಿದ್ದರೆ, ಸದ್ಯದ ಪರಿಸ್ಥಿತಿಯಲ್ಲಿ ಸಕ್ರಿಯವಾಗಿರುವ ಬಲ ಬದಿಯ ನಾಲೆಯಲ್ಲಿ ಕಸಕಡ್ಡಿ, ಹೂಳು ತುಂಬಿಕೊಂಡಿರುವುದು ಮಾತ್ರವಲ್ಲ, ಗಿಡಗಂಟಿ ಬೆಳೆದು ಸರಾಗವಾಗಿ ನೀರು ಹರಿದು ಹೋಗದಂತಾಗಿದೆ.
ರೈತರಿಂದಲೇ ಕಾಯಕಲ್ಪ: ಗೌಳಿಗರ ಕ್ಯಾಂಪ್ ಬಳಿ ಇರುವ ಹೋದಿರಾಯನ ಹಳ್ಳದಲ್ಲಿ ಇತ್ತೀಚೆಗೆ ಮಣ್ಣು ಕುಸಿದು ಜಂಬದಹಳ್ಳ ಜಲಾಶಯದ ಒಳ ನೀರಿನ ಹರಿವಿಗೆ ಅಡಚಣೆಯಾಗಿತ್ತು. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳನ್ನು ನಂಬಿಕೊಳ್ಳದ ಅಚ್ಚುಕಟ್ಟು ಪ್ರದೇಶದ 50ಕ್ಕೂ ಹೆಚ್ಚು ರೈತರು ತಲಾ 500 ರೂ. ಭರಿಸಿ ಮಣ್ಣು ತೆರವು ಮಾಡಿಸಿದ್ದಾರೆ. ಜಲಾಶಯಕ್ಕೆ ಸುಗಮವಾಗಿ ನೀರು ಹರಿಸಿ ಒಡಲು ತುಂಬಿಸಿದ್ದಾರೆ.
ಕೋಡಿ ಎತ್ತರಿಸಲಿ ಅಧಿಕಾರಿಗಳು: ಜಂಬದಹಳ್ಳ ಜಲಾಶಯದ ಮೂಲಕ ಸಹಸ್ರಾರು ಹೆಕ್ಟೇರ್ ಜಮೀನಿಗೆ ನೀರು ಹರಿಯುವುದರಿಂದ ಈ ಭಾಗದ ರೈತರು ಸಮೃದ್ಧ ಬೆಳೆ ಬೆಳೆದು ಉತ್ತಮ ಜೀವನ ನಡೆಸುವಂತಾಗಿದೆ. 2 ವರ್ಷಗಳಿಂದ ಕೋಡಿ ಮತ್ತು ತೂಬಿನಲ್ಲಿ ಭಾರಿ ಪ್ರಮಾಣದ ನೀರು ಸೋರಿಕೆಯಾಗುತ್ತಿರುವುದರಿಂದ ಜಲಾಶಯ ಬರಿದಾಗುವ ಆತಂಕ ಕಾಡಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀರು ಸೋರಿಕೆ ತಡೆಗಟ್ಟುವ ಜತೆಗೆ ಜಲಾಶಯದ ಕೋಡಿ ಎತ್ತರಿಸಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿಸಬೇಕು. ಜಲಾಶಯವನ್ನು ಸರ್ಕಾರ ಮತ್ತಷ್ಟು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಅಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿದ್ದರಹಳ್ಳಿ ಗ್ರಾಮದ ಅಚ್ಚುಕಟ್ಟು ಪ್ರದೇಶದ ರೈತ ಎಚ್.ಒ.ದಯಾನಂದ್ ಒತ್ತಾಯಿಸಿದ್ದಾರೆ.
ರೈತರ ಸಹಕಾರದಿಂದ ಜಂಬದಹಳ್ಳ ಜಲಾಶಯದ ಕೋಡಿ ಮತ್ತು ತೂಬಿನ ಮೂಲಕ ಸೋರಿಕೆಯಾಗುತ್ತಿದ್ದ ಭಾರಿ ಪ್ರಮಾಣದ ನೀರನ್ನು ತಾತ್ಕಾಲಿಕ ದುರಸ್ತಿಯಿಂದ ತಡೆಗಟ್ಟಲಾಗಿದೆ. ನಿರ್ವಹಣೆಗೆ ಬೇಕಾದ ಅನುದಾನವಿದ್ದರೂ ಶಾಶ್ವತ ಪರಿಹಾರಕ್ಕೆ ಅಗತ್ಯ ಅನುದಾನ ಇಲ್ಲ. ತೂಬಿನ ಗೇಟ್ ಹಳೆಯದಾಗಿದೆ. ಅದಕ್ಕೆ ರಬ್ಬರ್ ಸೀಲ್ ಅಳವಡಿಸಿದರೆ ನೀರಿನ ಸೋರಿಕೆ ಶಾಶ್ವತವಾಗಿ ತಡೆಗಟ್ಟಬಹುದು ಎನ್ನುತ್ತಾರೆ ಕರ್ನಾಟಕ ನಿರಾವರಿ ನಿಗಮ ಬಿ.ಆರ್.ಪ್ರಾಜೆಕ್ಟ್ ಎಇಇ ಎಂ.ಸುರೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net