ಜಲಜಾಕ್ಷಿ ಅಮಾನತು ಆದೇಶ ರದ್ದು :  ಡಾ.ಅಂಬೇಡ್ಕರ್ ಪೋಟೋ ಹಾಕಿಲ್ಲವೆಂಬ ಆರೋಪ

highcourt
Published on

ಬೆಂಗಳೂರು: ಸಂವಿಧಾನ ದಿನದ ಅಂಗವಾಗಿ ವಿಧಾನಪರಿಷತ್ತಿನ ಸಚಿವಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಾಕಿಲ್ಲ ಎಂಬ ಆರೋಪದಡಿ ವಿಧಾನ ಪರಿಷತ್ತಿನ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಅಮಾನತು ಆದೇಶ ರದ್ದುಗೊಳಿಸುವಂತೆ ಕೋರಿ ಕೆ.ಜೆ.ಜಲಜಾಕ್ಷಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ನರೇಂದ್ರಪ್ರಸಾದ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರ ವಾದವೇನಿತ್ತು?

ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಅಂಬೇಡ್ಕರ್ ಅವರ ಫೋಟೊ ಇರಿಸುವ ಬಗ್ಗೆ ನಿರ್ದಿಷ್ಟವಾಗಿ ಹೇಳಿರಲಿಲ್ಲ. ಶಿಷ್ಠಾಚಾರ ಉಲ್ಲಂಘನೆ, ಕರ್ತವ್ಯ ಲೋಪ ಆಗಿರುವ ಬಗ್ಗೆ ನೀಡಲಾಗಿದ್ದ ನೋಟಿಸ್‌ಗೆ ವಿವರವಾಗಿ ಉತ್ತರಿಸಿದ್ದೇನೆ. ಅಲ್ಲದೆ ಕಾರ್ಯಕ್ರಮದ ಆಯೋಜಕಿ ನಾನಾಗಿರಲಿಲ್ಲ.

ಪ್ರಕರಣಕ್ಕೆ ನಾನು ಹೊಣೆ ಅಲ್ಲ ಎಂದು ಕೆ.ಜೆ. ಜಲಜಾಕ್ಷಿ ಅರ್ಜಿಯಲ್ಲಿ ಹೇಳಿದ್ದಾರೆ. ಜತೆಗೆ ಸಭಾಪತಿಯವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಿದ್ದರು.

ಆದರೆ, ಕೆಲವು ಸಂಘಟನೆಗಳು ಜು.3ರಂದು ದೂರು ನೀಡಿ ಒತ್ತಡ ತಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಒಂದು ವರ್ಷದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಅದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಆದ್ದರಿಂದ, ಅಮಾನತು ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net