ಜಲಜೀವನ್ ತಪಾಸಣೆ ಹೊಣೆ ಚೆನ್ನೈ ಕಂಪನಿಗೆ

201808050112079803_CivalapperiIn-the-joint-drinking-water-projectIn_SECVPF
Published on

ಬೆಂಗಳೂರು: ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯ ವ್ಯಾಪಿ ಮನೆ ಮನೆಗೆ ನಳ ಸಂಪರ್ಕ ಪೂರೈಸಲು ಪ್ರಗತಿಯಲ್ಲಿರುವ ಕಾಮಗಾರಿಗಳ ಗುಣಮಟ್ಟ ತಪಾಸಣೆಗೆ ಸರ್ಕಾರ ಮುಂದಾಗಿದೆ.

ಚೆನ್ನೈನ ಬ್ಯೂರೋ ವೆರೈಟಸ್ ಕಂಪನಿಗೆ ಕಾಮಗಾರಿಗಳ ವಿಸ್ತೃತ ತಪಾಸಣೆ ಕೈಗೊಳ್ಳಲು ಜವಾಬ್ದಾರಿ ನೀಡಿದ್ದು, ಯಾವೆಲ್ಲ ರೀತಿ ದೂರುಗಳು ಬಂದಿವೆ, ತನಿಖೆ ಯಾವ ಆಯಾಮದಲ್ಲಿ ನಡೆಯಬೇಕೆಂದು ಕಂಪನಿಗೆ ಸೂಚಿಸಲಾಗಿದೆ.

ಈ ಕಂಪನಿ ಸೇವೆ ಪಡೆದುಕೊಳ್ಳಲು ಆರ್ಥಿಕ ಇಲಾಖೆಯು ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪಾರದರ್ಶಕತೆಯಿಂದ ವಿನಾಯಿತಿ ನೀಡಿದೆ.

ಜಲಜೀವನ್ ಮಿಷನ್ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಲಮೂಲಗಳನ್ನು ಬಳಸಿಕೊಂಡು ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ನೀರೊದಗಿಸುವ ಯೋಜನೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ಅನುಷ್ಠಾನವಾಗುತ್ತಿದೆ. 2023ರಲ್ಲಿ ಯೋಜನೆ ಮುಗಿಯಬೇಕಿತ್ತು. ಆದರೆ, ರಾಜ್ಯ ಸರ್ಕಾರ ಕಾಲಾವಕಾಶ ಕೇಳಿದ್ದರಿಂದ 2024ರಲ್ಲಿ ಮುಗಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು.

ಪ್ರತಿ ಗ್ರಾಮೀಣ ಮನೆಗಳಿಗೆ ದೂರದೃಷ್ಟಿಯ ಉದ್ದೇಶದಲ್ಲಿ ಕುಡಿಯುವ ನೀರಿನ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ರೂಪಿತವಾದ ಮಹಾ ಯೋಜನೆ. ಮನೆಗಳೊಂದಿಗೆ ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ಕ್ಷೇಮ ಕೇಂದ್ರಗಳು ಇತ್ಯಾದಿಗಳು ಸಹ ಸೇರಿಕೊಳ್ಳುತ್ತವೆ. ಸಹಜವಾಗಿ ಕೇಂದ್ರ ಸರ್ಕಾರ ಯೋಜನೆ ಬಗ್ಗೆ ಸಾಕಷ್ಟು ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಕೆಲವು ಕಡೆ ಜಲಮೂಲದ ಲಭ್ಯತೆ ಇಲ್ಲದ್ದು ಸಮಸ್ಯೆಯಾಗಿದ್ದರೆ ಮತ್ತೆ ಕೆಲವು ಕಡೆ ಯೋಜನೆ ರೂಪಿಸುವಾಗಿನ ಇಂಜಿನಿಯರಿಂಗ್ ಸಮಸ್ಯೆ ಎದುರಾಗಿದೆ.

ಜಲಜೀವನ್ ಮಿಷನ್ ಯೋಜನೆಯಿಂದ ಸಮಸ್ಯೆಯಾಗುತ್ತಿದೆ, ಯೋಜನೆ ಸರಿಯಾಗಿ ನಡೆಯುತ್ತಿಲ್ಲ, ಕಾಮಗಾರಿ ಕಳಪೆಯಾಗಿದೆ, ಅರ್ಧಂಬರ್ಧ ಕಾಮಗಾರಿ ನಡೆದಿದೆ, ರಸ್ತೆ ಅಗೆದು ಹಾಕಲಾಗಿದೆ. ಕೂಡಲೇ ಇದಕ್ಕೊಂದು ಮುಕ್ತಿಕೊಡಿ ಎಂದು ಕಾಂಗ್ರೆಸ್‌ನ ಹಲವು ಶಾಸಕರು ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು. ಈ ವೇಳೆ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಾರದಿಂದ ಭರವಸೆ ಕೂಡ ಸಿಕ್ಕಿತ್ತು.

ಯೋಜನೆ ಜಾರಿಯಲ್ಲಿರುವ ಎಲ್ಲಾ ಗ್ರಾಂಗಳ ಕಾಮಗಾರಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದರೆ ಅದೊಂದು ದೊಡ್ಡ ಕಸರತ್ತು ಎನಿಸಿಕೊಳ್ಳಲಿದೆ. ಇದು ಇನ್ನೊಂದಿಷ್ಟು ಸಮಸ್ಯೆಗೂ ಕಾರಣವಾಗಬಹುದು ಎಂದರಿತ ಸರ್ಕಾರ ರಾಜ್ಯಾದ್ಯಂತ ಸುಮಾರು ಶೇ.5ರಿಂದ 10 ರಷ್ಟು ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಜಾಗತಿಕ ಮಟ್ಟದ ತಪಾಸಣೆ ಸಂಸ್ಥೆಯ ಹುಡುಕಾಟದಲ್ಲಿತ್ತು.

ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಥರ್ಡ್‌ಪಾರ್ಟಿ ತನಿಖೆ ನಡೆಸಲಾಗಿದೆ. ಅದರ ಅರ್ಧಂರ್ಬಧ ಮಾಹಿತಿ ಸರ್ಕಾರದ ಬಳಿ ಇದೆ. ಆದರೂ ಒಂದು ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಕೈಹಾಕಲಾಗಿದೆ. ಜತೆಗೆ ವಿವಿಧ ಕಾರಣಗಳಿಂದ ಶೀಘ್ರವಾಗಿ ಪ್ರಕರಣ ತನಿಖೆಗೊಳಪಡಿಸಿ ಪ್ರಾಥಮಿಕ ವರದಿ ಪಡೆದುಕೊಳ್ಳುವ ಮಹತ್ವದ ಉದ್ದೇಶದಿಂದ 4ಜಿ ರಿಯಾಯಿತಿ ಪಡೆದುಕೊಳ್ಳಲು ಸಹ ನಿರ್ಧರಿಸಲಾಗಿತ್ತು.

2019ರಲ್ಲಿ ಕರ್ನಾಟಕದಲ್ಲಿ 1.01 ಕೋಟಿ ಕುಟುಂಬಗಳಿತ್ತು. 24.51 ಲಕ್ಷ ಕುಟುಂಬಗಳು ಮನೆಗೆ ನಲ್ಲಿ ಸಂಪರ್ಕ ಹೊಂದಿತ್ತು. 2023ರ ಸೆಪ್ಟೆಂಬರ 1ರ ಅಂಕಿಅಂಶದ ಪ್ರಕಾರ 69.89 ಲಕ್ಷ ಕುಟುಂಬಗಳು ನಲ್ಲಿ ಸಂಪರ್ಕ ಹೊಂದಿವೆ. ಕರ್ನಾಟಕವು ಯೋಜನೆ ಬಳಸಿಕೊಳ್ಳುವಲ್ಲಿ ಹಿಂದೆಬಿದ್ದಿರುವುದು ಸ್ಪಷ್ಟವಾಗಿದೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಯೋಜನೆ ಅನುಷ್ಠಾನವನ್ನು ಮೂರು ರೀತಿ ವರ್ಗೀಕರಿಸಲಾಗಿದೆ. ಮೊದಲ ವರ್ಗದಲ್ಲಿ ಶೇ.75ಕ್ಕಿಂತ ಹೆಚ್ಚು ಪ್ರಗತಿ ಕಾಣಿಸಿದ ರಾಜ್ಯಗಳ ಪಟ್ಟಿ ಇದ್ದು, ಅದರಲ್ಲಿ ಕರ್ನಾಟಕ ಇಲ್ಲ. ಶೇ.50ರಿಂದ ಶೇ.75ರವರೆಗೆ ಪ್ರಗತಿ ತೋರಿರುವ ಎರಡನೇ ಪಟ್ಟಿಯಲ್ಲಿ ಕರ್ನಾಟಕವಿದೆ. ಆ ಪಟ್ಟಿಯಲ್ಲೂ 10ನೇ ಸ್ಥಾನದಲ್ಲಿದೆ. ಈ ಹಿಂದೆ ಕೇಂದ್ರ ಜಲಶಕ್ತಿ ಸಚಿವರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯದ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವೇಗಗೊಳಿಸುವಂತೆ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net