

ಕೈಲಾಂಚ : ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್‌ಗೆ ಸಣ್ಣದಾಗಿ ವಿರೋಧ ಆರಂಭವಾಗಿದೆ. ಈ ಯೋಜನೆಯಡಿ ನೀರಿನ ಮೀಟರ್ ಅಳವಡಿಸುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ. ಜತೆಗೆ ಕೆಲವು ಕಡೆ ಕೊಳವೆಮಾರ್ಗ ಅಳವಡಿಕೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಕೈಗೊಂಡಿರುವುದು ವಿರೋಧದ ಧ್ವನಿಯನ್ನು ಗಟ್ಟಿಯಾಗಿಸುತ್ತಿದೆ.
ಗ್ರಾಮೀಣ ಭಾಗದಲ್ಲಿ ಶುದ್ಧ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಆರಂಭಿಸಿದೆ. ಈ ಬಗ್ಗೆ ಜಿಪಂ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಿ, ಸಹಕಾರ ಪಡೆದುಕೊಳ್ಳಬೇಕಿತ್ತು. ಆದರೆ, ಅಧಿಕಾರಿಗಳು ಈ ಕೆಲಸ ಮಾಡದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.
ಬನ್ನಿಕುಪ್ಪೆ, ವಿಭೂತಿಕೆರೆ, ಕೈಲಾಂಚ, ಹುಣಸನಹಳ್ಳಿ, ಹುಲಿಕೆರೆ-ಗುನ್ನೂರು ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಈಗಾಗಲೆ ಕಾಮಗಾರಿ ಆರಂಭವಾಗಿದೆ.
ದೇವರದೊಡ್ಡಿ, ಅಂಕನಹಳ್ಳಿ, ಕಾಡನಕುಪ್ಪೆ, ಅಂಜನಾಪುರ ಗ್ರಾಮಗಳಲ್ಲಿ ಬಹುತೇಕ ಮುಗಿದಿದೆ. ಲಕ್ಕೋಜನಹಳ್ಳಿಯಲ್ಲಿ ಮಾತ್ರ ಕೆಲಸ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.ವಿಭೂತಿಕೆರೆ, ಕೆ.ಜಿ. ಹೊಸಹಳ್ಳಿಯಲ್ಲಿ ಕೊಳವೆಮಾರ್ಗ ಅಳವಡಿಕೆ ಕಾಮಗಾರಿ ಅರೆಬರೆಯಾಗಿದೆ. ವಿಭೂತಿಕೆರೆಯಲ್ಲಿ ಕಾಂಕ್ರೀಟ್ ರಸ್ತೆಗಳಿದ್ದು, ಎರಡೂ ಬದಿಗಳಲ್ಲಿ ಹಾಕಬೇಕಿದ್ದ ಕೊಳವೆಮಾರ್ಗವನ್ನು ಒಂದೇ ಬದಿಯಲ್ಲಿ ಹಾಕಲಾಗಿದೆ. ನೀರಿನ ಸಂಪರ್ಕಕ್ಕಾಗಿ ಕಾಂಕ್ರೀಟ್ ರಸ್ತೆ ಅಗೆಯುವುದು ಅನಿವಾರ್ಯವಾಗಿದ್ದು, ರಸ್ತೆ ಹಾಳಾಗುತ್ತದೆ ಎಂಬುದು ಗ್ರಾಮಸ್ಥರ ಅಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಾಮಗಾರಿ ತಡೆದಿದ್ದಾರೆ.
ಕಾಮಗಾರಿಗೆ ಅವಕಾಶ ಕೊಡದ ಗ್ರಾಮಸ್ಥರು : ನೀರಿನ ಮೀಟರ್ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಗುನ್ನೂರಿನ ಜನರು ತಮ್ಮೂರಿಗೆ ಈ ಯೋಜನೆಯೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ತಾಲೂಕು ಮತ್ತು ಜಿಪಂ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದರೂ ಏನೊಂದು ಪ್ರಯೋಜನವಾಗಿಲ್ಲ.
ಬಿಂದಿಗೆ ತುಂಬಲು ಗಂಟೆ ಬೇಕು : ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನು ಉಪಕಸುಬಾಗಿ ರೂಢಿಸಿಕೊಳ್ಳಲಾಗಿದೆ. ಮನೆಯ ಜತೆಗೆ ಜಾನುವಾರುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸಲಾಗುತ್ತದೆ. ಆದರೆ, ಮನೆಗಳಿಗೆ ಸಂಪರ್ಕ ಕೊಡುವಾಗ ಸಣ್ಣ ಗಾತ್ರದ ಪೈಪುಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಬಿಂದಿಗೆ ನೀರು ತುಂಬಲು ಗಂಟೆ ಬೇಕಾಗುತ್ತದೆ. ಮೀಟರ್ ಸಿಕ್ಕಾಪಟ್ಟೆ ಓಡಿ, ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.
ಯೋಜನೆ ಬಗ್ಗೆ ಕೆಲವು ಗ್ರಾಮಗಳಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಅವುಗಳ ನಿವಾರಣೆಗೆ ಜನರ ಜತೆ ಚರ್ಚಿಸಲಾಗುತ್ತಿದೆ. ಎಲ್ಲರಿಗೂ ಸಮಾನವಾಗಿ ನೀರು ಸಿಗುವಂತೆ ಮಾಡುವುದು ಜಲಜೀವನ್ ಮಿಷನ್‌ನ ಉದ್ದೇಶ. ಶ್ರೀನಿವಾಸ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಎಇಇ
ಕಷ್ಟದಲ್ಲೇ ಜೀವನ ಸಾಗಿಸುವ ಗ್ರಾಮಸ್ಥರು ನೀರಿನ ವಂತಿಗೆ, ಮನೆ ಕಂದಾಯ ಸೇರಿ ಹಲವು ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ನೀರಿಗೂ ಮೀಟರ್ ಅಳವಡಿಸಿ ಶುಲ್ಕ ಪಾವತಿಸು ಎಂದರೆ ಕಷ್ಟವಾಗುತ್ತದೆ. ಹಾಗಾಗಿ ಜಲಜೀವನ್ ಮಿಷನ್ ಬದಲು ಈಗಿರುವ ನೀರು ಪೂರೈಕೆ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಶಂಕರ್ ಗುನ್ನೂರು ಗ್ರಾಮೀಣ ಜನರು ಬಳಸುವ 10 ಪಟ್ಟು ್ಚ ನೀರನ್ನು ಜಾನುವಾರುಗಳಿಗೆ ಬಳಸಲಾಗುತ್ತದೆ. ಇದರ ಅರಿವಿದ್ದೂ, ಜಿಪಂ ಅಧಿಕಾರಿಗಳು ಮನೆಗಳಿಗಷ್ಟೇ ಬಳಸಲಾಗುತ್ತದೆ ಎಂಬಂತೆ ಷರಾ ಬರೆದಿದ್ದಾರೆ. ನೀರಿನ ಮೀಟರ್ ಅಳವಡಿಸುವುದು ಅವೈಜ್ಞಾನಿಕ ನಿರ್ಧಾರವಾಗಿದೆ. ನಾಗರಾಜು ಅಂಕನಹಳ್ಳಿ