

ನವದೆಹಲಿಯಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಮಾಲೋಚನಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು, ದಾಳಿಯ ನಂತರವೇ ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು. ದಾಳಿ ಮಾಡಿದ ಬಳಿಕ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಮಾಹಿತಿ ಒದಗಿಸಲಾಯ್ತು ಎಂದು ಜೈಶಂಕರ್ ಸಮಿತಿಗೆ ತಿಳಿಸಿದ್ದಾರೆ.
ನವದೆಹಲಿ: ಭಾರತ ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂಬ ಕಾಂಗ್ರೆಸ್ ಪಕ್ಷದ ಆರೋಪವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಪ್ರಾಮಾಣಿಕ ಮತ್ತು ತಪ್ಪು ಹೇಳಿಕೆ ಎಂದು ಕರೆದಿದ್ದಾರೆ.
ಆಪರೇಷನ್ ಸಿಂಧೂರ್ ಆರಂಭವಾದ ಅರ್ಧ ಗಂಟೆಯೊಳಗೆ, ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಯಿತು. ಇಸ್ಲಾಮಾಬಾದ್ ಪ್ರಾರಂಭಿಸಿದ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ನೇರ ಸಂವಹನದ ನಂತರ ಎರಡೂ ದೇಶಗಳ ನಡುವಿನ ಕದನ ವಿರಾಮ ಜಾರಿಗೆ ಬಂದಿತು ಎಂದು ಜೈಶಂಕರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಭಾರತದ 'ಆಪರೇಷನ್ ಸಿಂಧೂರ್' ಬಗ್ಗೆ ಪಾಕಿಸ್ತಾನ ಹರಡುತ್ತಿರುವ ಯಾವುದೇ ನಕಲಿ ಸುದ್ದಿಗಳನ್ನು ಹೋಗಲಾಡಿಸಲು ಸರ್ಕಾರ ತನ್ನ ಕೈಲಾದಷ್ಟು ಪ್ರಯತ್ನಿಸಿದೆ ಎಂದು ಸಭೆಯಲ್ಲಿ ಜೈಶಂಕರ್ ಸಮಿತಿಗೆ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಮತ್ತು ಎನ್‌ಡಿಎ ಸದಸ್ಯರ ನಡುವೆ ವಾಗ್ವಾದ ನಡೆದ ನಂತರ ಜೈಶಂಕರ್ ಅವರ ಹೇಳಿಕೆ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
(ಏಜೆನ್ಸೀಸ್)
ಸಿಂಧೂ ನದಿ ನೀರು ಒಪ್ಪಂದದ ವಿಷಯದಲ್ಲಿ, ಸರ್ಕಾರವು ಒಪ್ಪಂದವನ್ನು ಮುಂದುವರಿಸಲು ಯೋಜಿಸುತ್ತಿದೆಯೇ ಅಥವಾ ಅದರ ಅಮಾನತು ಸಾಂಕೇತಿಕವಾಗಿದೆಯೇ ಎಂಬುದರ ಕುರಿತು ನಿಯೋಗದ ಸದಸ್ಯರು ಸ್ಪಷ್ಟತೆ ಕೋರಿದರು. ಒಪ್ಪಂದವು ಪ್ರಸ್ತುತ ಸ್ಥಗಿತಗೊಂಡಿದೆ ಮತ್ತು ಮುಂದಿನ ಹಂತಗಳ ಕುರಿತು ಸಂಸತ್ ಸದಸ್ಯರಿಗೆ ವಿವರಿಸಲಾಗುವುದು ಎಂದು ಸರ್ಕಾರ ಪ್ರತಿಕ್ರಿಯಿಸಿದೆ.