

ಮುಂಬೈ: ಮುಂಬೈನಲ್ಲಿ ನಿನ್ನೆ ರಾತ್ರಿಯಿಂದ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ನಗರದ ಕೆಲವು ಭಾಗಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿದೆ. ಮುಂಬೈನಲ್ಲಿ ನಿರಂತರ ಮಳೆಯಾದ ಕಾರಣ ವರ್ಲಿ ಮೆಟ್ರೋ ನಿಲ್ದಾಣವು ನೀರಿನಿಂದ ತುಂಬಿ ತುಳುಕುತ್ತಿದೆ. ನೀರು ಮೆಟ್ರೋ ನಿಲ್ದಾಣದ ಗೇಟ್‌ಗಳ ಮುಖಾಂತರ ಪ್ಲಾಟ್‌ಫಾರ್ಮ್ ಒಳಗೆ ನುಗ್ಗಿದೆ.
ಮುಂಬೈ ನಾರ್ತ್ ಸೆಂಟ್ರಲ್‌ನ ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್, ಮೆಟ್ರೋ ನಿಲ್ದಾಣದ ಪ್ರವಾಹದ ಸ್ಥಿತಿಯ ಬಗ್ಗೆ ರಾಜ್ಯದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಮಳೆಯಿಂದಾಗಿ ಪ್ರಯಾಣಿಕರು ಪ್ರಯಾಣಿಸಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಯಿತು. ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ರೈಲುಗಳು ಮತ್ತು ವಿಮಾನಗಳ ಸಂಚಾರ ವಿಳಂಬವಾಗಿದೆ. ಕಳೆದ ವಾರದಿಂದ ನಗರದಲ್ಲಿ ಮಳೆಯಾಗುತ್ತಿದೆ. ಇದು ಈ ವಾರವೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ಲಾಟ್‌ಫಾರ್ಮ್ ಸಂಪೂರ್ಣವಾಗಿ ಕೆಸರು ನೀರಿನಿಂದ ತುಂಬಿರುವುದನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗಿದೆ. ಪ್ರಯಾಣಿಕರು ಮಡಿಸಿದ ಪ್ಯಾಂಟ್ ಮತ್ತು ಚಪ್ಪಲಿಗಳೊಂದಿಗೆ ನೀರಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.
(ಏಜೆನ್ಸೀಸ್)
ಹೊಸದಾಗಿ ಉದ್ಘಾಟನೆಗೊಂಡ ಮುಂಬೈ ಮೆಟ್ರೋ ನಿಲ್ದಾಣ ನೀರಿನಿಂದ ತುಂಬಿದೆ. ಛಾವಣಿಯಿಂದ ನೀರು ಸೋರಿಕೆಯಾಗುವುದನ್ನು ಕಾಣಬಹುದು, ಮೆಟ್ಟಿಲುಗಳ ಮೂಲಕ ನೀರು ಹರಿಯುತ್ತಿದೆ. ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ, ಈ ಬಗ್ಗೆ ತಪಾಸಣೆಯನ್ನುಏಕೆ ಮಾಡಲಾಗಿಲ್ಲ, ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಏಕೆ ತೆಗೆದುಕೊಳ್ಳಲಿಲ್ಲ, ಇದಕ್ಕೆ ಸರ್ಕಾರ ಉತ್ತರಿಸಬೇಕು, ನಮಗೆ ಪ್ರಚಾರದ ಉದ್ಘಾಟನೆಗಳು ಬೇಕಾಗಿಲ್ಲ, ಆದರೆ ಮೂಲಭೂತ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಬೇಕು ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.