

ತಮಿಳುನಾಡು: ಸೂಪರ್‌ಸ್ಟಾರ್, ತಲೈವಾ ಅಭಿನಯದ ರಜನಿಕಾಂತ್ 'ಜೈಲರ್' ಚಿತ್ರ ಬಿಡುಗಡೆಗೊಂಡು ಇದೀಗ ಸಿನಿಪ್ರೇಕ್ಷಕರಿಂದ ಮತ್ತು ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ಪಡೆದುಕೊಂಡಿದ್ದು, ಚಿತ್ರ ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳಿಪಟ ಮಾಡಿದೆ. ರಿಲೀಸ್ ಆಗಿ ಮೂರು ದಿನಗಳ ಬಳಿಕ ಸಿನಿಮಾ ಮಾಡಿದ ಕಲೆಕ್ಷನ್ ಮೊತ್ತ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಕೇವಲ 3 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 220 ಕೋಟಿ ರೂ.ಗಳ ಗಳಿಕೆಯನ್ನು ತಲುಪಿದೆ. ಅಮೆರಿಕಾದಲ್ಲಿ ಮೊದಲ ದಿನವೇ ಜೈಲರ್ ಅದ್ದೂರಿ ಪ್ರದರ್ಶನ ಕಾಣುವುದರ ಜತೆ 1 ಮಿಲಿಯನ್ ಡಾಲರ್ ಕ್ಲಬ್ ಸೇರಿತು. ಈ ಮುಖೇನ ಹೊಸ ದಾಖಲೆಯನ್ನು ಕೂಡ ನಿರ್ಮಿಸಿತು. ವಿದೇಶಗಳಲ್ಲಿಯೂ ಸಹ ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಜನಮನ್ನಣೆ ಲಭಿಸುತ್ತಿರುವುದನ್ನು ಕಂಡು ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಜೈಲರ್ ಚಿತ್ರದಲ್ಲಿ ಶಿವರಾಜ್ಕುಮಾರ್, ವಿನಾಯಕನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಮೋಹನ್‌ಲಾಲ್, ಜಾಕಿ ಶ್ರಾಫ್, ಮಿರ್ನಾ ಮೆನನ್, ಸುನೀಲ್ ಮತ್ತು ಯೋಗಿ ಬಾಬು ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).