

ತಮಿಳುನಾಡು: ಸೂಪರ್ಸ್ಟಾರ್ ರಜನಿಕಾಂತ್ ನಟಿಸಿದ ಹಾಗೂ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ 'ಜೈಲರ್' ಬಾಕ್ಸ್ಆಫೀಸ್ನಲ್ಲಿ 650 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಅದ್ಭುತ ಯಶಸ್ಸು ಕಂಡ ಬೆನ್ನಲ್ಲೇ ಚಿತ್ರ ತಯಾರಕರು 'ಜೈಲರ್ 2' ಚಿತ್ರವನ್ನು ಶೀಘ್ರವೇ ತೆರೆಗೆ ತರುವುದಾಗಿ ತಿಳಿಸಿದ್ದರು. ಈ ಮಾಹಿತಿ ಹೊರಬೀಳುತ್ತಿದ್ದಂತೆ 'ತಲೈವಾ' ಅಭಿಮಾನಿಗಳು ಥ್ರಿಲ್ ಆಗಿದ್ದರು. ಇದೀಗ ಸಿನಿಮಾದ ರಿಲೀಸ್ ಯಾವಾಗ ಎಂದು ಯೋಚಿಸುತ್ತಿದ್ದ ಫ್ಯಾನ್ಸ್ಗೆ ಹೊಸ ಸುಳಿವೊಂದು ಸಿಕ್ಕಿದೆ.
ಜೈಲರ್ ಸೀಕ್ವೆಲ್ ಘೋಷಿಸಿದ ನೆಲ್ಸನ್ ದಿಲೀಪ್ಕುಮಾರ್ ಸದ್ಯ ಚಿತ್ರೀಕರಣದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ. ಇದು ಅಭಿಮಾನಿಗಳಿಗೆ ಗೊಂದಲ ಮೂಡಿಸಿದ್ದೇ ಆದರೂ ಸಿಕ್ಕಿರುವ ಸುಳಿವಿನಿಂದ ಕೊಂಚ ಸಂತಸಪಟ್ಟಿದ್ದಾರೆ. 'ಜೈಲರ್ 2' ಚಿತ್ರದಲ್ಲಿ ಕಾಮಿಡಿಯನ್ ಆಗಿ ನಟಿಸುತ್ತಿರುವ ಯೋಗಿ ಬಾಬು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂಬುದನ್ನು ತಿಳಿಸಿದ್ದಾರೆ.
"ಪ್ರಸ್ತುತ ನೆಲ್ಸನ್ ಅವರು ಚಿತ್ರ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಮತ್ತು ರಜನಿಕಾಂತ್ ಸರ್ ನಡುವಿನ ಕಾಮಿಡಿ ದೃಶ್ಯದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈ ಕಾಮಿಡಿ ಟ್ರ್ಯಾಕ್ ಖಂಡಿತ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಶೀಘ್ರವೇ 'ಜೈಲರ್ 2' ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ ನಿರೀಕ್ಷಿಸಿ. ಸಿನಿಮಾ 2025ರ ಮೇ ಅಥವಾ ಜೂನ್ ತಿಂಗಳಲ್ಲಿ ತೆರೆಕಾಣಬಹುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).