ಸೆಲೆಬ್ರಿಟಿಗಳ ಫೋಟೋ, ವಿಡಿಯೋ, ಧ್ವನಿಯನ್ನು ಎಐ (ಕೃತಕ ಬುದ್ಧಿಮತ್ತೆ) ಮೂಲಕ ತಿರುಚಿ ಟ್ರೋಲ್ ಮಾಡಲು ಅಥವಾ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ& ಅಭಿಷೇಕ್ ದಂಪತಿ, ಪ್ರೀತಿ ಜಿಂಟಾ ಸೇರಿ ಹಲವು ತಾರೆಯರು ವೈಯಕ್ತಿಕ ಹಕ್ಕುಗಳ ಸಂರಕ್ಷಣೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ಕೆಲವರು ಫೇಕ್ ಫೋಟೋ ಹಂಚಿಕೊಂಡವರ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದೂ ಆಗಿದೆ. ಆದರೂ, ಇಂತಹ ಎಐ ಫೇಕ್ ಕಂಟೆಂಟ್ ವೈರಲ್ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇತ್ತೀಚೆಗಷ್ಟೆ "ಅಂಗಮಲೆ ಡೈರೀಸ್', "ಮಧುರ ರಾಜ', "ಸಚಿನ್' ಸೇರಿ ಹಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ, "ಜೈಲರ್ 2' ಮೂಲಕ ಕಾಲಿವುಡ್ ಡೆಬ್ಯೂ ಮಾಡಿರುವ ಕೇರಳ ಮೂಲದ ನಟಿ ಆ್ಯನಾ ರಾಜನ್ ಕೂಡ ಇಂತಹ ನಕಲಿವೀರರಿಗೆ ಸಿಲುಕಿದ್ದಾರೆ. ಅವರ ಫೋಟೋನ ಅಶ್ಲೀಲವಾಗಿ ಎಡಿಟ್ ಮಾಡಿ, ಜಾಲತಾಣದಲ್ಲಿ ವೈರಲ್ ಮಾಡಲಾಗಿದ್ದು, ಅದರ ಲಿಂಕ್ ಹಂಚಿಕೊಂಡಿರುವ ಆ್ಯನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ಫೋಟೋವನ್ನು ಅಶ್ಲೀಲವಾಗಿ ನನ್ನ ತೇಜೋವಧೆ ಮಾಡುವಂತೆ ಎಡಿಟ್ ಮಾಡಲಾಗಿದ್ದು, ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನ್ನ ಖಾಸಗೀತನವನ್ನು ಉಲ್ಲಂಘಿಸಲಾಗಿದ್ದು, ನಾಚಿಕೆಗೇಡಿನ ವಿಷಯ. ಹೀಗೆ ಅಶ್ಲೀಲವಾಗಿ ಎಡಿಟ್ ಮಾಡಿರುವವರ ವಿರುದ್ಧ ನಾನು ಪೊಲೀಸರಿಗೆ ದೂರು ನೀಡಲಿದ್ದೇನೆ, ಕಾನೂನು ಕ್ರಮ ಕೈಗೊಳ್ಳಲಿದ್ದೇನೆ. ನಕಲಿಕೋರರಿಗೆ ಬುದ್ಧಿ ಕಲಿಸುವವರೆಗೂ, ನನಗೆ ನ್ಯಾಯ ಸಿಗುವವರೆಗೂ ಹೋರಾಡಲಿದ್ದೇನೆ' ಎಂದು ಆ್ಯನಾ ಗುಡುಗಿದ್ದಾರೆ.