

ಬೆಂಗಳೂರು: ಲೈಂಗಿಕ ದೌರ್ಜುನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಎಸ್‌ಐಟಿ ಕಸ್ಟಡಿ ಅಂತ್ಯವಾಗಿದ್ದರಿಂದ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ೪೨ ನೇ ಎಸಿಎಂಎಂ ಕೋರ್ಟ್‌ಗೆ ಸೋಮವಾರ ಹಾಜರುಪಡಿಸಲಾಗಿತ್ತು. ಕೋರ್ಟ್ ಪ್ರಜ್ವಲ್ಗೆ ಜೂ. ೨೪ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ೧೦ ದಿನಗಳ ಕಾಲ ಎಸ್‌ಐಟಿ ಕಸ್ಟಡಿಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ೧೪ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಅವರ ಪುತ್ರ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.
ಬಸವನಗುಡಿ ಮನೆಯಲ್ಲಿ ಮಹಜರು:
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ನನ್ನು ಕರೆದೊಯ್ದು ಬಸವನಗುಡಿ ಮನೆಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಮಾಡಿರುವ ಸಂತ್ರಸ್ಥೆ ಹೇಳಿಕೆ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ ಭವಾನಿ ರೇವಣ್ಣ ಮನೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ. ಬಸವನಗುಡಿ ಮನೆಯಲ್ಲಿ ಮಹಜರು ನಡೆಸುವಾಗ ಎಸ್‌ಐಟಿ ತಂಡ ಕೆಲ ವಸ್ತುಗಳನ್ನು ಎವಿಡೆನ್ಸ್ ಆಗಿ ಪರಿಗಣಿಸಿದೆ. ಮಹಜರು ಪ್ರಕ್ರಿಯೆ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಶಾಸಕ ಎಚ್.ಡಿ ರೇವಣ್ಣ ಅವರ ಬಸವನಗುಡಿ ಮನೆಗೆ ಕಂಪ್ಯೂಟರ್ ಸಮೇತ ಅಧಿಕಾರಿಗಳು ಆಗಮಿಸಿದ್ದರು. ಸ್ಥಳ ಮಹಜರು ಮಾಡಿದ ಬಳಿಕ ಆರೋಪಿಯ ಹೇಳಿಕೆಯನ್ನು ಎಸ್‌ಐಟಿ ತಂಡ ದಾಖಲಿಸಿಕೊಂಡಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸಿಲ್ಲ. ಹೀಗಾಗಿ ಮನೆಯ ಕೆಲ ಜಾಗಗಳನ್ನು ಎವಿಡೆನ್ಸ್ ಆಗಿ ಅಧಿಕಾರಿಗಳು ಪರಿಗಣಿಸಿದ್ದಾರೆ. ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ, ಅಶ್ಲೀಲ ವಿಡಿಯೋದಲ್ಲಿರುವ ಜಾಗಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸಂತ್ರಸ್ಥೆ ನೀಡಿರುವ ದೂರಿನ ಮೇರೆೆಗೆ ಈ ಸ್ಥಳ ಮಹಜರು ಪ್ರಕ್ರಿಯೆ ನಡೆದಿದೆ. ಅಶ್ಲೀಲ ವಿಡಿಯೋದಲ್ಲಿರುವ ಜಾಗಕ್ಕೂ ಬಸವನಗುಡಿ ಮನೆಯಲ್ಲಿರುವ ಜಾಗಕ್ಕೂ ತಾಳೆ ಆಗಿದ್ದಿಯೇ ಎಂದು ಪರಿಶೀಲನೆ ನಡೆಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.