

ದಿಸ್ಪುರ್: ಅಸ್ಸಾಮಿನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಚಳುವಳಿಕಾರ ಅಖಿಲ್ ಗೊಗೊಯಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ನೂತನವಾಗಿ ರಚಿಸಲಾಗಿರುವ ತಮ್ಮ ರಾಜಕೀಯ ಪಕ್ಷ, ರಾಯ್ಜೋರ್ ದಳದ ಅಭ್ಯರ್ಥಿಯಾಗಿ ಸಿಬಸಾಗರ್ ಕ್ಷೇತ್ರದಲ್ಲಿ ಗೊಗೊಯಿ ಕಣಕ್ಕಿಳಿಯಲಿದ್ದಾರೆ.
2019 ರ ಡಿಸೆಂಬರ್ನಲ್ಲಿ ಸಿಟಿಜನ್ಶಿಪ್ ಅಮೆಂಡ್ಮೆಂಟ್ ಕಾಯ್ದೆ(ಸಿಎಎ)ಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಯುಎಪಿಎ ಕಾನೂನಿನಡಿ ಅಖಿಲ್ ಗೊಗೊಯಿ ಅವರನ್ನು ಬಂಧಿಸಲಾಗಿತ್ತು. ಆಗಿನಿಂದ ಜೈಲಿನಲ್ಲಿರುವ ಗೊಗೊಯ್ ಇದೀಗ ತಮ್ಮದೇ ರಾಜಕೀಯ ಪಕ್ಷವನ್ನು ಹುಟ್ಟಿಹಾಕಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಸೆಣಸಾಟ ನಡೆಸುವ ಸಿದ್ಧತೆಯಲ್ಲಿದ್ದಾರೆ.
ರಾಯ್ಜೋರ್ ದಳದಿಂದ ಅಸ್ಸಾಂನ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕಣಕ್ಕಿಳಿಸಲಾಗುತ್ತಿರುವ ಅಭ್ಯರ್ಥಿಗಳ ವಿವರ ನೀಡಿದ ಕಾರ್ಯಾಧ್ಯಕ್ಷ ಭಾಸ್ಕೊ ಡೆ ಸಾಯ್ಕಿಯಾ ಈ ಮಾಹಿತಿ ನೀಡಿದ್ದಾರೆ. ಮೊದಲನೇ ಹಂತದಲ್ಲಿ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು, ಎರಡನೇ ಹಂತಕ್ಕೆ 6 ಕ್ಷೇತ್ರಗಳ ಅಭ್ಯರ್ಥಿಗಳ ವಿವರವನ್ನೂ ಅವರು ನೀಡಿದ್ದಾರೆ.
"ನಾವು 17 ಸೀಟುಗಳಿಗೆ ಮಾತ್ರ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇವೆ. ಬಿಜೆಪಿಯನ್ನು ಸೋಲಿಸಲು, ಅನಗತ್ಯವಾಗಿ ಮತಗಳ ವಿಭಜನೆಯಾಗದಿರಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಆ್ಯಂಟಿ-ಸಿಎಎ ಸರ್ಕಾರ ಬರಬೇಕೆಂಬುದು ನಮ್ಮ ಪ್ರಯತ್ನವಾಗಿದೆ" ಎಂದು ಸಾಯ್ಕಿಯಾ ಹೇಳಿದ್ದಾರೆ. ಅಸ್ಸಾಂನಲ್ಲಿ ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ನಲ್ಲಿ ಚುನಾವಣೆ ಘೋಷಿಸಲಾಗಿದೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ