ಜೈಲಿನ ಸಿಬ್ಬಂದಿಯ ಕಳ್ಳಾಟ ಬಯಲು!

Published on

ಬೆಂಗಳೂರು: ಪೊಲೀಸರ ತನಿಖೆ ವೇಳೆ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ನೀಡಿದ್ದ ಜೈಲಿನ ಸಿಬ್ಬಂದಿಯ ಕಳ್ಳಾಟ ಬಯಲಾಗಿದೆ.
ನಟ ದರ್ಶನ್ ಸೇರಿ ಇತರರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪೊಲೀಸರು ೧೫ ರಿಂದ ೨೦ ಅಧಿಕಾರಿ-ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. ಎಲ್ಲರ ಹೇಳಿಕೆಯನ್ನು ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ತನಿಖೆ ವೇಳೆ ಜೈಲಿನ ಅಧಿಕಾರಿ ಮತ್ತು ಸಿಬಂದಿಯೇ ದರ್ಶನ್ ಮತ್ತು ಇತರರಿಗೆ ವಿಶೇಷ ಆತಿಥ್ಯ ನೀಡಿರುವುದಾಗಿ ಗೊತ್ತಾಗಿದೆ. ಜೈಲಿನ ಸಿಬ್ಬಂದಿಯೇ ನಟ ದರ್ಶನ್ ಮತ್ತು ರೌಡಿಶೀಟರ್‌ಗಳಿಗೆ ಟೇಬಲ್, ಚೇರ್ ಕಾಫಿ ಮಗ್ ಮತ್ತು ಸಿಗರೇಟ್ ನೀಡಿರುವುದು ತನಿಖೆಯ ವೇಳೆ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ಸೇರಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಚಂದ್ರಗುಪ್ತ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ ಸೇರಿ ಸಜಾ ಬಂಧಿಗಳ ಜತೆ ಸೇರಿ ಜೈಲಿನ ಆವರಣದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದರು. ಇದರ ೆಟೋ ವೈರಲ್ ಆಗಿತ್ತು. ಈ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಸೇರಿ ೯ ಮಂದಿಯನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ, ದರ್ಶನ್ ಹಾಗೂ ರೌಡಿಶೀಟರ್‌ಗಳ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿತ್ತು. ಜತೆಗೆ ಜೈಲಿನ ಮೂವರು ಅಧಿಕಾರಿ-ಸಿಬ್ಬಂದಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ಈ ಮೂರು ಪ್ರಕರಣಗಳಲ್ಲಿ ಇಬ್ಬರು ಇನ್‌ಸ್ಪೆಕ್ಟರ್ ಹಾಗೂ ಒಬ್ಬರು ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು.ಈ ಮಧ್ಯೆ ಜೈಲಿನಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಜತೆಗೆ ಮಾಜಿ ಕೈದಿಗಳು ಕೂಡ ಜೈಲಿನ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಶೀಘ್ರದಲ್ಲೇ ವರದಿ ನೀಡುವಂತೆ ಸೂಚಿಸಿ ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ನೇತೃತೃದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಜೈಲಿಗೂ ಭೇಟಿ ನೀಡಿ ಸಮಗ್ರ ತನಿಖೆ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net