

ಕೋಲಾರ/ಮುಳಬಾಗಿಲು: ಭೂವ್ಯಾಜ್ಯ ಪ್ರಕರಣವೊಂದರ ಸಂಬಂಧ ಆದೇಶ ಹೊರಡಿಸಲು ರೈತರೊಬ್ಬರಿಂದ 5 ಲಕ್ಷ ರೂ. ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಮುಳಬಾಗಿಲು ಹಾಲಿ ಗ್ರೇಡ್-1 ತಹಸೀಲ್ದಾರ್ ಬಿ.ಎಸ್ ವೆಂಕಟಾಚಲಪತಿ ಅವರಿಗೆ 3 ವರ್ಷ ಜೈಲು ಶಿಕ್ಷೆ 7 ಲಕ್ಷ ರೂ. ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ಏನಿದು ಪ್ರಕರಣ?: 2017ರಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಸೀಲ್ದಾರ್ ಆಗಿ ವೆಂಕಟಾಚಲಪತಿ ಕಾರ್ಯನಿರ್ವಹಿಸುತ್ತಿದ್ದರು. ಗೊಟ್ಟಿಗೆರೆ ರೈತ ಎಚ್.ಪಿ ಮಂಜುನಾಥ್ ಅವರ ತಂದೆ ಹೆಸರಿನಲ್ಲಿದ್ದ 1.37 ಎಕರೆ ಜಮೀನಿನ ಭೂ ವ್ಯಾಜ್ಯ ತಕರಾರು ಪ್ರಕರಣದ (ಆರ್ಆರ್ಟಿ) ವಿಚಾರಣೆಯನ್ನು ವೆಂಕಟಾಚಲಪತಿ ನಡೆಸುತ್ತಿದ್ದರು. ಮಂಜುನಾಥ್ ಪರವಾಗಿ ಆದೇಶ ಹೊರಡಿಸಲು ತಹಸೀಲ್ದಾರ್ ಆಪ್ತ ಸಹಾಯಕ ಬಿ.ಆರ್.ಮಧುಸೂದನ್ ಮುಖಾಂತರ 15 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಬೇಡಿಕೆಯಿಂದ ಬೇಸತ್ತ ಮಂಜುನಾಥ್ ಎಸಿಬಿಯಲ್ಲಿ ದೂರು ನೀಡಿದ್ದರು. ಡಿ.18ರಂದು ಸಂಜೆ ಕಂದಾಯ ಭವನದ ಕಾರು ಪಾರ್ಕಿಂಗ್ ಬಳಿ ದೂರುದಾರರಿಂದ ಮಧುಸೂದನ್ 5 ಲಕ್ಷ ರೂ. ಲಂಚ ಸ್ವೀಕರಿಸುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿ, ಬಳಿಕ ಚೇಂಬರ್ನಲ್ಲಿದ್ದ ತಹಸೀಲ್ದಾರ್ ವೆಂಕಟಾಚಲಪತಿ ಅವರನ್ನು ವಶಕ್ಕೆ ಪಡೆದಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ, ಪ್ರಾಸಿಕ್ಯೂಶನ್ ಸಾಕ್ಷ್ಯಾಧಾರ ಹಾಗೂ ವಾದವನ್ನು ಪುರಸ್ಕರಿಸಿ ತಹಸೀಲ್ದಾರ್ ವೆಂಕಟಾಚಲಪತಿಗೆ 3 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂ.ದಂಡ, ಎರಡನೇ ಅಪರಾಧಿ ಮಧುಸೂದನ್ಗೆ ಮೂರು ವರ್ಷ ಜೈಲು, 40 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಹೊನ್ನಯ್ಯ ನಾಯ್ಕ ವಾದಿಸಿದ್ದರು.