

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಗಡಿಯಲ್ಲಿ ಡಿ. 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ ಸಂಬಂಧ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯೋಧರನ್ನು ಅವಮಾನಿಸುವಂತಹ ಪದಬಳಕೆ ಸರಿಯಲ್ಲ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್, ರಾಜಕೀಯವಾಗಿ ಟೀಕೆ-ಟಿಪ್ಪಣಿಗಳು ಸರ್ವೆಸಾಮಾನ್ಯ. ಆದರೆ, ಇದೇ ಧಾಟಿಯಲ್ಲಿ ಸೇನೆಯನ್ನು ಟೀಕಿಸಿದ್ದು ಸರಿಯಲ್ಲ. ರಾಹುಲ್ ಗಾಂಧಿ ‘ಪಿಟಾಯಿ’ ಎಂಬ ಪದವನ್ನು ಯೋಧರಿಗೆ ಬಳಸಿದ್ದು ಅಗೌರವ ಸೂಚಿಸುವಂತಹದ್ದು ಎಂದರು.
‘ಸರ್ಕಾರ ಉದಾಸೀನ ಮಾಡುತ್ತಿದೆ ಎಂದು ರಾಹುಲ್ ಹೇಳುತ್ತಿದ್ದಾರೆ. ಆದರೆ, ಗಡಿಗೆ ಸೇನೆಯನ್ನು ಕಳುಹಿಸಿದ್ದು ಯಾರು? ಈಗ ಹಿಂದೆಂದಿಗಿಂತಲೂ ಹೆಚ್ಚಿನ ಸೇನೆ ದೇಶದ ಪೂರ್ವ, ಈಶಾನ್ಯ ಸರಹದ್ದಿನಲ್ಲಿ ಇದೆ. ಚೀನಾ ಜತೆಗೆ ಸಂಬಂಧ ಚೆನ್ನಾಗಿದ್ದಿದ್ದರೆ ಗಡಿಯಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಸೇನೆ ವಾಪಸು ಪಡೆಯಿರಿ ಎಂದು ನಾವೇಕೆ ಹೇಳುತ್ತಿದ್ದೆವು?’ ಎಂದರು. ‘ಚೀನಾ ವಿಷಯದಲ್ಲಿ ನನಗೆ ಆಳವಾದ ಅರಿವು ಇದೆ. ಸಲಹೆಯನ್ನು ಯಾರು ನೀಡುತ್ತಾರೆಂಬುದನ್ನು ಅವಲಂಬಿಸಿ ಅವರಿಗೆ ಗೌರವ ಕೊಡುವೆ ಮತ್ತು ತಲೆ ಬಾಗುವೆ’ ಎಂದರು.
ಚೀನಾ ಗಡಿ ಸಂಘರ್ಷ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಳೆದ ವಾರದಿಂದ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು ಸೋಮವಾರ ಕೂಡ ಶೂನ್ಯ ವೇಳೆಯಲ್ಲಿ ಈ ಬೇಡಿಕೆಯನ್ನು ಮುಂದುವರಿಸಿ ಕಲಾಪಕ್ಕೆ ಅಡ್ಡಿ ಮಾಡಿದವು. ಇದಕ್ಕೆ ಸರ್ಕಾರ ಒಪ್ಪದಿದ್ದಾಗ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದವು. ಲೋಕಸಭೆಯಲ್ಲೂ ಪ್ರತಿಪಕ್ಷಗಳ ಸದಸ್ಯರು ಸದನದಿಂದ ಹೊರನಡೆದರು.
ರಾಹುಲ್ ಗಾಂಧಿ ಹೇಳಿದ್ದೇನು?: ತವಾಂಗ್ನ ಯಾಂಗ್ಸ್ ್ಟಲಯದ ಗಡಿಯಲ್ಲಿ ಭಾರತದ ಸೈನಿಕರ ಮೇಲೆ ನುಗ್ಗಿದ್ದ ಚೀನಾ ಸೇನೆ, ಅವರನ್ನು ಹೊಡೆಯಿತು. ಸರ್ಕಾರ ಏನು ನಿದ್ರೆ ಮಾಡುತ್ತಿದೆಯೇ? ಚೀನಾ ಉದ್ದೇಶ ಸ್ಪಷ್ಟವಾಗಿದೆ. ಅದು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡಿದೆ ಆದರೆ, ಸರ್ಕಾರ ಗಡಿಯಲ್ಲಿನ ಬೆಳವಣಿಗೆಯನ್ನು ಉಪೇಕ್ಷಿಸುತ್ತಿದೆ. ವಿದೇಶಾಂಗ ಸಚಿವರು ಈ ಸೂಕ್ಷ್ಮತೆಯನ್ನು ಆಳವಾಗಿ ಆರ್ಥ ಮಾಡಿಕೊಳ್ಳಬೇಕು ಎಂದು ರಾಹುಲ್ ಹೇಳಿದ್ದರು.
ದೇಶಕ್ಕಿಂತ ಯಾವುದೂ ದೊಡ್ಡದಲ್ಲ. ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಚರ್ಚೆಯಾಗಬೇಕು. ಚೀನಾ ನಮ್ಮ ಭೂಮಿಯನ್ನು ಒತ್ತುವರಿ ಮಾಡುತ್ತಿರುವಾಗ ಅದನ್ನು ಬಿಟ್ಟು ಬೇರೆಯಾವುದರ ಬಗ್ಗೆ ಮಾತನಾಡಬೇಕು? | ಎಂ.ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ
ಕಡಲ್ಗಳ್ಳತನ ತಡೆ ಮಸೂದೆಗೆ ಒಪ್ಪಿಗೆ: ಕಡಲ ಸುರಕ್ಷತೆ ಮತ್ತು ಕಡಲ್ಗಳ್ಳತನ ತಡೆಯುವ ಮಸೂದೆಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ. ಸಮುದ್ರದಲ್ಲಿ ನಡೆಯುವ ದರೋಡೆ, ಸುಲಿಗೆ ಯಂಥ ಅಪರಾಧಕ್ಕೆ ಜೀವಾವಧಿ ಶಿಕ್ಷೆಯ ಜತೆಗೆ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರೆ ಮರಣದಂಡನೆ ವಿಧಿಸಲೂ ಹೊಸ ತಿದ್ದುಪಡಿಯಲ್ಲಿ ಅವಕಾಶ ಇದೆ. ಕಡಲ್ಗಳ್ಳತನ ತಡೆ ಮಸೂದೆಯನ್ನು ಸರ್ಕಾರ 2019ರಲ್ಲೇ ಮಂಡಿಸಿತ್ತು. ವಿರೋಧ ಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ಇದನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಒಪ್ಪಿಸಿತ್ತು. ಈ ಅಧಿವೇಶನದಲ್ಲಿ ಕೆಲವು ತಿದ್ದುಪಡಿಯನ್ನು ಸೇರಿಸಲಾಗಿದೆ.
ಸಲಿಂಗಿಗಳ ವಿವಾಹಕ್ಕೆ ವಿರೋಧ: ಸಲಿಂಗಿಗಳ ವಿವಾಹವು ಕೂಡದು ಎಂದು ಬಿಜೆಪಿಯ ಹಿರಿಯ ಸದಸ್ಯ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯ ಶೂನ್ಯವೇಳೆ ಕಲಾಪದಲ್ಲಿ ವಿರೋಧಿಸಿದರು. ಕೆಲವು ಎಡಪಂಥೀಯ ಚಿಂತಕರು ಹೋರಾಟಗಾರರು ಮತ್ತು ಸಲಿಂಗಿಗಳು ಒಂದೇ ಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಇದನ್ನು ಮಾನ್ಯ ಮಾಡಬಾರದು. ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಇಂಥ ಮದುವೆಯ ಬಗ್ಗೆ ನ್ಯಾಯಾಂಗ ಕೂಡ ಯಾವುದೇ ತೀರ್ಪನ್ನು ನೀಡಿಲ್ಲ. ಈ ವಿಷಯದ ಬಗ್ಗೆ ಸೀಮಿತ ಸಂಖ್ಯೆ ಜಡ್ಜ್ಗಳು ನಿರ್ಧರಿಸುವುದಕ್ಕಿಂತ ಸಂಸತ್ನಂತಹ ವಿಶಾಲ ವೇದಿಕೆಯಲ್ಲಿ ಚರ್ಚೆಯಾಬೇಕು ಎಂದರು. ಪವಿತ್ರವಾದ ವಿವಾಹ ಬಂಧನವನ್ನು ಹಾಳುಗೆಡವುವ ಮತ್ತು ದಾಂಪತ್ಯದ ಮಹತ್ವ ಕುಗ್ಗಿಸುವ ಸಲಿಂಗಿಗಳ ಮದುವೆಗೆ ಮಾನ್ಯತೆ ನೀಡುವುದು ಸಮಾಜಕ್ಕೆ ತಪು್ಪ ಸಂದೇಶ ಕೊಡುತ್ತದೆ. ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲೂ ಇಂಥದಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಹಣಕಾಸು ಸಚಿವರ ಉತ್ತರ: ವಸೂಲಾಗದ 10,09,511 ಕೋಟಿ ರೂ ಮೊತ್ತದ ಸಾಲವನ್ನು ಬ್ಯಾಂಕ್ಗಳು ರೈಟ್ ಆಫ್ ಮಾಡಿವೆ. ಹಾಗೆಂದ ಮಾತ್ರಕ್ಕೆ ಈ ಸಾಲಗಳನ್ನು ವಸೂಲು ಮಾಡುವುದೇ ಇಲ್ಲವೆಂದೇನೂ ಅಲ್ಲ. ಪ್ರತಿ ವರ್ಷ ಬ್ಯಾಂಕ್ ಬ್ಯಾಲೆನ್ಸ್ಶೀಟ್ಗೆ ಹೊರೆಯಾಗಿದ್ದ ಅನುತ್ಪಾದಕ ಆಸ್ತಿ (ಎನ್ಪಿಎ) ಲೆಡ್ಜರ್ನಿಂದ ತೆಗೆಯಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದರು. ನೋಟುಗಳ ವಾರ್ಷಿಕ ಚಲಾವಣೆ ಪ್ರಮಾಣ ಶೇ.7.98ರಷ್ಟು ಏರಿಕೆ ಆಗಿ, ಇದರ ಮೌಲ್ಯ 32.92 ಲಕ್ಷ ಕೋಟಿ ರೂ. ಆಗಿದೆ ಎಂದರು.
907 ಕೋಟಿ ರೂ. ಕ್ರಿಪ್ಟೊ ಮುಟ್ಟುಗೋಲು: ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅನ್ವಯ ಜಾರಿ ನಿರ್ದೇಶನಾಲಯ 907 ಕೋಟಿ ರೂ. ಮೌಲ್ಯದ ಕ್ರಿಪ್ಟೊಕರೆನ್ಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದರು. ಸಾರ್ವಜನಿಕ ವಲಯದ ಬ್ಯಾಂಕ್ ಖಾಸಗೀಕರಣ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಮತ್ತು ನಿಯಂತ್ರಣ ಪ್ರಾಧಿಕಾರದ ಅಭಿಪ್ರಾಯ ಪಡೆದ ನಂತರ ತೀರ್ವನಿಸಲಾಗುವುದು ಹಣಕಾಸು ಖಾತೆಯ ಇನ್ನೊಬ್ಬ ರಾಜ್ಯ ಸಚಿವ ಭಗವತ್ ಕರಾಡ್ ಹೇಳಿದರು.