ಪ್ಯಾಲೆಸ್ತೀನ್ ಪರ ಓವೈಸಿ​ ಘೋಷಣೆಗೆ ಬಿಜೆಪಿ ಸಂಸದರ ಟಕ್ಕರ್; ಇದು ಸಂವಿಧಾನದ ಮೌಲ್ಯಕ್ಕೆ ವಿರುದ್ಧ ಎಂದ ವಿಪಕ್ಷ ನಾಯಕರು

Asaduddin Garg
Published on

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವನೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಸಾಧಿಸಿದ್ದು, ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ನೂತನನಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಈ ವೇಳೆ ಎಐಎಂಎಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಬಿಜೆಪಿ ಸಂಸದರು ಕೌಂಟರ್ ಕೊಟ್ಟಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಹೈದರಾಬಾದ್​ ಕ್ಷೇತ್ರದ ಸಂಸದರಾಗಿ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಓವೈಸಿ ಕೊನೆಯಲ್ಲಿ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ್ದಾರೆ. ಕೂಡಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದರು ಗದ್ದಲವನ್ನು ಎಬ್ಬಿಸಿದರು. ಈ ವೇಳೆ ಹಂಗಾಮಿ ಸ್ಪೀಕರ್​ ರಾಧಾಮೋಹನ್ ಸಿಂಗ್, ಘೋಷಣೆಯನ್ನು ದಾಖಲೆಯಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು.

ಓವೈಸಿ ನಂತರ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಛತ್ರ ಪಾಲ್ ಸಿಂಗ್ ಗಂಗ್ವಾರ್ ಕೊನೆಯಲ್ಲಿ ಜೈ ಹಿಂದೂ ರಾಷ್ಟ್ರ ಎಂದು ಘೋಷಣೆ ಕೂಗಿದರು. ಇದಾದ ಬಳಿಕ ಗಾಜಿಯಾಬಾದ್​ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಅತುಲ್​ ಗರ್ಗ್​ ತಮ್ಮ ಭಾಷಣದ ಕೊನೆಯಲ್ಲಿ ನರೇಂದ್ರ ಮೋದಿ ಜಿಂದಾಬಾದ್​ ಎಂದು ಘೋಷಣೆ ಕೂಗಿದರು. ಇದಕ್ಕೆ ವಿಪಕ್ಷಗಳ ಸದಸ್ಯರು ಆಕ್ಷೇಪಿಸುತ್ತಿದ್ದಂತೆ ಹೆಡ್ಗೆವಾರ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್, ಬಿಜೆಪಿ ಸಂಸದರು ಪ್ರಮಾಣವಚನದ ಬಳಿಕ ಘೋಷಣೆ ಕೂಗಿರುವುದು ಸಂವಿಧಾನದ ಮೌಲ್ಯಕ್ಕೆ ವಿರುದ್ಧವಾಗಿದ್ದು, ಕೂಡಲೇ ಅವರ ವಿರುದ್ಧ ಸಭಾಧ್ಯಕ್ಷರು ಕಠಿಣ ಕ್ರಮ ಜರುಗಿಸಬೇಕೆಂದು ಅಖಿಲೇಶ್​ ಆಗ್ರಹಿಸಿದ್ದಾರೆ. ಸಂಸತ್ತಿನಲ್ಲಿ ಘೋಷಣೆ ಕೂಗಿರುವುದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಎನ್​ಡಿಎ-ಇಂಡಿಯಾ ಕೂಟದ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net