

ನವದೆಹಲಿ: ಚುಟುಕು ವಿಶ್ವ ಸಮರದಲ್ಲಿನ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ಐಸಿಸಿ ನಡೆಸುವ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಅಫ್ಘಾನಿಸ್ತಾನ ತಂಡದ ಪರಿಶ್ರಮವನ್ನು ಕ್ರೀಡಾವಲಯದಲ್ಲಿ ಹಾಡಿ ಹೊಗಳಲಾಗುತ್ತಿದೆ. 2017ರಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಕ್ರೀಡಾವಲಯದಲ್ಲಿ ಅಂಡರ್ಡಾಗ್ಸ್ ಎಂದು ಕರೆಯಲಾಗುತ್ತಿತ್ತು. 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್ಗೇರಿರುವ ಅಫ್ಘಾನಿಸ್ತಾನ ತಂಡದ ಯಶಸ್ಸಿನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಬಹುದಾಗಿದೆ.
ಹೌದು ಅಫ್ಘಾನಿಸ್ತಾನದ ಯಶಸ್ಸಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಈ ಹಿಂದೆ ಕ್ರಿಕೆಟ್ ಶಿಶು ಎಂದು ಕರೆಯಲ್ಪಡುತ್ತಿದ್ದ ಅಫ್ಘಾನಿಸ್ತಾನ ತಂಡಕ್ಕೆ ಬಿಸಿಸಿಐ ಪೋಷಿಸಿದ ಪರಿಣಾಮ ಇಂದು ಬಲಿಷ್ಠ ತಂಡಗಳಿಗೆ ಸೋಲುಣಿಸುವಷ್ಟು ಬೆಳೆದಿದ್ದು, ಇದಕ್ಕೆ ಬಿಸಿಸಿಐ ನೀಡಿರುವ ಬೆಂಬಲವೇ ಕಾರಣ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಕಾರಣಗಳು ಹೀಗಿವೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಗ್ರೇಟರ್ ನೋಯ್ಡಾದಲ್ಲಿರುವ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಅನ್ನು 2015ರಲ್ಲಿ ತಾತ್ಕಾಲಿಕವಾಗಿ ಬಿಟ್ಟುಕೊಟ್ಟ ಪರಿಣಾಮ ತನ್ನ ಹೋಮ್ ಗ್ರೌಂಡ್ಅನ್ನು ಶಾರ್ಜಾದಿಂದ ಭಾರತಕ್ಕೆ ಸ್ಥಳಾಂತರಿಸಿತು. ಬಳಿಕ 2017ರಲ್ಲಿ ಐರ್ಲೆಂಡ್ ವಿರುದ್ಧ ಆಂತರಾಷ್ಟ್ರೀಯ ಸರಣಿಯನ್ನು ಆಡಿತ್ತು.
ಗ್ರೌಂಡ್ ಮಾತ್ರವಲ್ಲದೇ ಅಫ್ಘಾನಿಸ್ತಾನ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರರಾದ ಲಾಲ್ಚಂದ್ ರಜಪೂತ್, ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜಾ ಅವರನ್ನು ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ ಅಜಯ್ ಜಡೇಜಾ ಅವರು ಅಫ್ಘಾನಿಸ್ತಾನದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು.
ಇದಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ನಲ್ಲಿ ಅಫ್ಘಾನಿಸ್ತಾನ ತಂಡದ ಆಟಗಾರರು ಭಾಗಿಯಾಗುತ್ತಿದ್ದು, ಇದು ಅವರ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದಲ್ಲದೆ ಅಫ್ಘಾನಿಸ್ತಾನ ತಂಡದ ಆಟಗಾರರು ವಿಶ್ವದಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗಿಯಾಗುತ್ತಿದ್ದು, ಇದು ಅವರ ಉತ್ತಮ ಪ್ರದರ್ಶನಕ್ಕೆ ಸಹಕಾರಿಯಾಗುತ್ತಿದೆ. ಈ ಮೂಲಕ ಬಿಸಿಸಿಐ ಅಫ್ಘಾನಿಸ್ತಾ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.