

ಬೆಂಗಳೂರು: ಮುಂದಿನ ವರ್ಷ ಪುನೀತ್ ಅಭಿನಯದಲ್ಲಿ ಹೊಸ ಚಿತ್ರ ಪ್ರಾರಂಭ ಮಾಡುವುದಾಗಿ ಇತ್ತೀಚೆಗಷ್ಟೇ ಹೇಳಿದ್ದ ಸಂತೋಷ್ ಆನಂದ್ರಾಮ್ ಬುಧವಾರ ಒಂದು ಸರ್ಪ್ರೖೆಸ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನವೇ ಅವರು ಜಗ್ಗೇಶ್ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರವನ್ನು ಶುರು ಮಾಡಲಿದ್ದಾರೆ. ಅದೇ ‘ರಾಘವೇಂದ್ರ ಸ್ಟೋರ್ಸ್’.
ಸಂತೋಷ್ ನಿರ್ದೇಶನದ ಹಿಂದಿನ ಎರಡು ಚಿತ್ರಗಳನ್ನು ನಿರ್ವಿುಸಿದ್ದ ಹೊಂಬಾಳೆ ಫಿಲಂಸ್ ಈ ಚಿತ್ರವನ್ನೂ ನಿರ್ವಿುಸುತ್ತಿದೆ. ಬುಧವಾರ ಮಧ್ಯಾಹ್ನ 3:10ಕ್ಕೆ ಹೊಂಬಾಳೆ ಫಿಲಂಸ್ನ 12ನೇ ಚಿತ್ರದ ಘೋಷಣೆಯಾಗಲಿದೆ ಎಂದು ಮೊದಲೇ ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ, ‘ರಾಘವೇಂದ್ರ ಸ್ಟೋರ್ಸ್’ ಘೋಷಣೆಯಾಗಿದೆ. ಜತೆಗೆ, ಜಗ್ಗೇಶ್ ಅವರ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಬಾಣಸಿಗನ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳುತ್ತಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಸಂದೇಶವಿರುವ, ಹಾಸ್ಯ-ರಾಜಕೀಯಗಳನ್ನೊಳಗೊಂಡ ಹೊಸತನದ ಚಿತ್ರ ಇದಾಗಿರಲಿದೆಯಂತೆ. ಸಂತೋಷ್ ಆನಂದರಾಮ್ ಈ ಚಿತ್ರವನ್ನು ಭಾವನೆ, ಮನರಂಜನೆ ಹಾಗೂ ಸಂವೇದನೆಯ ಪಾಕಶಾಲೆ ಎಂದು ಬಣ್ಣಿಸುತ್ತಾರೆ. ಅಷ್ಟೇ ಅಲ್ಲ, ಜಗ್ಗೇಶ್ ಈ ಚಿತ್ರದಲ್ಲಿ ಇದುವರೆಗೂ ಮಾಡಿರದ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ. ಈ ಚಿತ್ರದ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳುವ ನಿರೀಕ್ಷೆ ಇದ್ದು, ನವೆಂಬರ್ 22ರಂದು ಚಿತ್ರೀಕರಣ ಪ್ರಾರಂಭವಾಗಲಿದೆ.