

ಜಗಳೂರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಗ್ರಾಪಂ ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು. ತಾಲೂಕಿನ 21 ಗ್ರಾಮ ಪಂಚಾಯಿತಿಗಳ 297 ಸ್ಥಾನಗಳಿಗೆ ಸ್ಪರ್ಧಿಸಿದ್ದ 774 ಅಭ್ಯರ್ಥಿಗಳ ಭವಿಷ್ಯ ಹೊರಬಿತ್ತು. 11 ಕೊಠಡಿಗಳು, 42 ಎಣಿಕೆ ಟೇಬಲ್‌ಗಳಲ್ಲಿ ಬೆಳಗ್ಗೆ 8ರಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮತ ಎಣಿಕೆ ಆರಂಭವಾಯಿತು. 10.30 ಗಂಟೆಯೊಳಗೆ ಮೊದಲ ಸುತ್ತಿನ ಎಣಿಕೆಯಲ್ಲಿ 42 ಏಕ ಸದಸ್ಯತ್ವ ಸ್ಥಾನ ಮುಗಿಯಿತು. ಮಧ್ಯಾಹ್ನದ ವೇಳೆ ಮೂರು ಸುತ್ತಿನ ಎಣಿಕೆ ಮುಕ್ತಾಯವಾಯಿತು. ಪೂರ್ಣ ಮತ ಎಣಿಕೆ ಮುಗಿಯುವಷ್ಟರಲ್ಲಿ ರಾತ್ರಿಯಾಯಿತು.
ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಜನ ಕಾಲೇಜಿನ ಮುಂಭಾಗದಲ್ಲಿ ಜಮಾಯಿಸಿದ್ದರು. ಕಾಲೇಜಿನ ಗೇಟ್‌ಬಳಿ ನಿಂತಿದ್ದ ಪೊಲೀಸರು ಮತ ಎಣಿಕೆ ಕೊಠಡಿಗೆ ತೆರಳಲು ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡುತ್ತಿದ್ದರು. ಗೆದ್ದು ಹೊರ ಬರುತ್ತಿದ್ದ ಅಭ್ಯರ್ಥಿಗಳ ಬೆಂಬಲಿಗರು ಕೇಕೆ, ಸಿಳ್ಳೆ ಹೊಡೆದು ಹೂವಿನ ಮಾಲೆ ಹಾಕಿ ಜೈಕಾರ ಹಾಕಿ ಕುಣಿದರು.
ಸಿದ್ದೀಹಳ್ಳಿ ಗ್ರಾಮದ ರಾಧಾ ಮತ್ತು ಕವಿತಾ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮತ ಎಣಿಕೆ ಆರಂಭದಿಂದಲೂ ಇಬ್ಬರು ಸರಿ ಸಮನಾಗಿಯೇ ಮತ ಪಡೆಯುತ್ತಿದ್ದರು. ಕೊನೆಯಲ್ಲಿ ಕವಿತಾ 356 ಮತಗಳು ಪಡೆದ ಗೆಲುವು ಸಾಧಿಸಿದರು.
ಕಿಲಾಕಣಕುಪ್ಪೆ ಗ್ರಾಮದ ಅಭ್ಯರ್ಥಿ ಸಣ್ಣ ಓಬಯ್ಯ ಹಾಗೂ ಫೈರೋಜ್ ಖಾನ್ ಮೊದಲು ಸಮಬಲ ಸಾಧಿಸಿದ್ದರು. ಮರು ಎಣಿಕೆ ವೇಳೆ ಎರಡು ಮತಗಳ ಅಂತರದಲ್ಲಿ ಸಣ್ಣ ಓಬಯ್ಯ ಜಯಶೀಲರಾದರು. ಸೊಕ್ಕೆ ಗ್ರಾಪಂನ 3ನೇ ವಾರ್ಡ್‌ನ ಅಭ್ಯರ್ಥಿ ಸ್ವಾತಿ ತಿಪ್ಪೇಸ್ವಾಮಿ ಅವರ 429 ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.