

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯಿಂದ ನಟ ಅನಿರುದ್ಧ್ ಅವರನ್ನು ಕಿತ್ತು ಹಾಕುವುದಕ್ಕೆ ಯಾರ ಒತ್ತಡವೂ ಇರಲಿಲ್ಲ ಎಂದು ಆ ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.
'ಜೊತೆ ಜೊತೆಯಲಿ' ತಂಡದೊಂದಿಗಿನ ವಿವಾದದ ಬಳಿಕ ಆ ಧಾರಾವಾಹಿಯಿಂದ ಹೊರಬಂದ ಅನಿರುದ್ಧ್ ಅವರಿಗೆ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ಕಿರುತೆರೆ ನಿರ್ಮಾಪಕರ ಸಂಘ ಹೇಳಿದೆ. ಇದರ ನಡುವೆಯೇ ಹಿರಿಯ ನಟ-ನಿರ್ದೇಶಕ ಎಸ್.ನಾರಾಯಣ್, ಉದಯ ಟಿವಿಗಾಗಿ ನಿರ್ದೇಶಿಸುತ್ತಿರುವ 'ಸೂರ್ಯವಂಶ' ಎಂಬ ಧಾರಾವಾಹಿಯಲ್ಲಿ ಅನಿರುದ್ಧ್ ಜತೆಗೆ ಕೆಲಸ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಕಿರುತೆರೆ ನಿರ್ಮಾಪಕರ ಸಂಘವು ಇದನ್ನು ತೀರ್ಮಾನಿಸಿದೆ. ಈ ಪ್ರಕರಣವು ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳಕ್ಕೆ ಹೋಗಿದೆ. ಇಂದು ನಡೆಯುವ ಸಭೆಯಲ್ಲಿ ಈ ಪ್ರಕರಣ ಇತ್ಯರ್ಥವಾಗುವ ನಿರೀಕ್ಷೆ ಇದೆ.
ಈ ಕುರಿತು ಮಾತನಾಡಿದ್ದ ಅನಿರುದ್ಧ್, ''ಜೊತೆ ಜೊತೆಯಲಿ' ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಮಾತಾಡುತ್ತಾ ತಮಗೆ ಒತ್ತಡ ಇದೆ ಎಂದು ಹೇಳಿದ್ದರು. ಅವರಿಗೆ ಒತ್ತಡ ಹಾಕಿದ್ದು ಯಾರು? ಯಾವ ಕಾರಣಕ್ಕೆ ನನಗೆ ಧಾರಾವಾಹಿಯಲ್ಲಿ ಮುಂದುವರೆಯುವುದಕ್ಕೆ ಬಿಡಲಿಲ್ಲ. ಅವರು ನನಗೆ ಒಂದೇ ಒಂದು ಬಾರಿ ಕರೆ ಮಾಡಿ ಕರೆದಿದ್ದರೂ ನಾನು ಹೋಗುತ್ತಿದ್ದೆ. ಆದರೆ, ಅವರು ನನ್ನನ್ನು ಕರೆಯಲಿಲ್ಲ' ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಆರೂರು ಜಗದೀಶ್, 'ನನಗೆ ಯಾರು ಒತ್ತಡ ಹಾಕಿಲ್ಲ. ಕೆಲಸದ ಒತ್ತಡ ಇತ್ತೇ ವಿನಃ ಅನಿರುದ್ದ್ ಅವರನ್ನು ತೆಗೆದುಹಾಕಬೇಕು ಎಂಬ ಒತ್ತಡ ಇರಲಿಲ್ಲ. ನಮ್ಮ ನಡುವೆ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯ ಇದ್ದಿದ್ದರಿಂದ ಎಪಿಸೋಡ್ ಬ್ಯಾಕಿಂಗ್ ಆಗಿರಲಿಲ್ಲ. ಹಾಗಾಗಿ, ಶೂಟಿಂಗ್ ಮಾಡುವ ಒತ್ತಡವಿತ್ತೇ ಹೊರತು, ಬೇರೆ ಯಾರ ಒತ್ತಡವೂ ಇರಲಿಲ್ಲ' ಎಂದು ಹೇಳಿಕೊಂಡಿದ್ದಾರೆ.