ಜಮ್ಮು & ಕಾಶ್ಮೀರ ಚುನಾವಣೆ ಅಬ್ದುಲ್ಲಾ, ಮುಫ್ತಿ ಗಾಂಧಿ ಕುಟುಂಬದ ಆಡಳಿತವನ್ನು ಕೊನೆಗೊಳಿಸಲಿದೆ; ಅಮಿತ್ ಷಾ

amith sha eletion rally
Published on

ಶ್ರೀನಗರ: 2024 ರ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು (ಸೆಪ್ಟೆಂಬರ್ 21) ಜಮ್ಮು-ಕಾಶ್ಮೀರದ ಮೆಂಧರ್ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಮೆಂಧಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಷಾ, ಈ ಚುನಾವಣೆಯು ಜಮ್ಮು-ಕಾಶ್ಮೀರದಲ್ಲಿ ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ. ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬದ ಆಡಳಿತ ಈ ಚುನಾವಣೆಯ ಮೂಲಕ ಕೊನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಮೂರು ಕುಟುಂಬಗಳು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದ್ದವು. ಒಂದು ವೇಳೆ 2014ರಲ್ಲಿ ಮೋದಿ ಸರ್ಕಾರ ಬರದೇ ಇರುತ್ತಿದ್ದರೆ ಆಗ ಪಂಚಾಯಿತಿ ಬ್ಲಾಕ್ ಮತ್ತು ಜಿಲ್ಲಾ ಚುನಾವಣೆಗಳು ನಡೆಯುತ್ತಿರಲಿಲ್ಲ ಎಂದು ಅಮಿತ್ ಷಾ ವಾಗ್ದಾಳಿ ನಡೆಸಿದರು.

"1947 ರಿಂದ ಪಾಕಿಸ್ತಾನದ ವಿರುದ್ಧ ಹೋರಾಡಿದ ಪ್ರತಿಯೊಂದು ಯುದ್ಧದಲ್ಲಿ, ಈ ನೆಲ, ಜಮ್ಮು ಮತ್ತು ಕಾಶ್ಮೀರದ ಸೈನಿಕರು ಭಾರತವನ್ನು ರಕ್ಷಿಸಿದ್ದಾರೆ. ಜಮ್ಮು-ಕಾಶ್ಮೀರದ ಈ ಚುನಾವಣೆ ಇಲ್ಲಿನ 3 ಕುಟುಂಬಗಳ ಆಡಳಿತವನ್ನು ಕೊನೆಗೊಳಿಸುವ ಚುನಾವಣೆಯಾಗಿದೆ. ಮೋದಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಿತು ಎಂದು ಅಮಿತ್ ಷಾ ಹೇಳಿದ್ದಾರೆ.

ಇಂದು, ನರೇಂದ್ರ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಿದೆ ಮತ್ತು ಯುವಕರಿಗೆ ಕಲ್ಲುಗಳ ಬದಲಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಒಬಿಸಿ, ಹಿಂದುಳಿದ ವರ್ಗಗಳು, ಗುಜ್ಜರ್ ಬಕರ್ವಾಲ್ ಮತ್ತು ಪಹಾರಿಗಳಿಗೆ ಮೀಸಲಾತಿ ಸಿಕ್ಕಿತು ಎಂದು ಹೇಳಿದರು.

ನಾನು ಸಂಸತ್ತಿನಲ್ಲಿ ಅದರ ಮಸೂದೆಯನ್ನು ಮಂಡಿಸಿದಾಗ, ಫಾರೂಕ್ ಅಬ್ದುಲ್ಲಾ ಅವರ ಪಕ್ಷವು ಅದನ್ನು ವಿರೋಧಿಸಿತು ಮತ್ತು ಇಲ್ಲಿ ಗುಜ್ಜರ್ ಸಹೋದರರನ್ನು ಪ್ರಚೋದಿಸಲು ಪ್ರಾರಂಭಿಸಿತು. ಆಗ ನಾನು ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೆ. ನಾವು ಆ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net