

ಮಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಯೇಟು ಬಿದ್ದಿದೆ. ಇದರ ಹೊಣೆಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಅಧಿವೇಶನ ನಡೆದಿರುವ 8 ದಿನಗಳಲ್ಲಿ ಸಾರ್ವಜನಿಕ ಮಹತ್ವವುಳ್ಳ 45 ಪ್ರಶ್ನೆಗಳನ್ನು ಕೇಳಿದ್ದೇನೆ. ಎಲ್ಲದಕ್ಕೂ ಉತ್ತರ ದೊರಕಿದೆ. ಮೊದಲ ದಿನವೇ ನೀಟ್ ಹಗರಣದ ಪ್ರಶ್ನೆ ಎತ್ತಿದ್ದೇನೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರದ ಕೈವಾಡವಿಲ್ಲದೆ ಇಷ್ಟು ದೊಡ್ಡಮಟ್ಟದ ಹಗರಣ ನಡೆಯಲು ಸಾಧ್ಯವಿಲ್ಲ. ಇವರಿಗೆ ಬೇಕಾಗಿರುವ ಟ್ಯುಟೋರಿಯಲ್‌ಗಳಿಗೆ ಸಹಾಯ ಮಾಡಲು ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾದಾಗಲೇ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಿತ್ತು. ಇಂದು ಕರ್ನಾಟಕದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ರಾಜ್ಯದ ಯಾವ ಸಂಸದರು ಮಾತನಾಡುತ್ತಿಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ದುಡಿಯಲು ರಾಜ್ಯ ಸರ್ಕಾರದಿಂದ ನೇಮಕಗೊಂಡಿರುವವರಿಗೆ ವರ್ಷಕ್ಕೆ 30 ದಿನಗಳ ರಜೆ ನೀಡಲಾಗುತ್ತದೆ. ಅವರು ರಜೆ ತೆಗೆದುಕೊಂಡು ಪಿಜಿ ನೀಟ್ ಪರೀಕ್ಷೆ ಬರೆಯಲು ತಯಾರಿ ಮಾಡಿದ್ದರು. ಜು.11ರಂದು ಪಿಜಿ ನೀಟ್ ಪರೀಕ್ಷೆ ನಡೆಯಬೇಕಿತ್ತು. ಆದರೆ ಅದರ ಮುನ್ನಾದಿನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷೆ ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಮುಂದಕ್ಕೆ ಪರೀಕ್ಷೆ ಬರೆಯಲು ರಜೆಯಿಲ್ಲ. ರಜೆ ಮಾಡಿದರೆ 10ಲಕ್ಷ ರೂ. ದಂಡ ಕಟ್ಟಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಮಾತನಾಡಬೇಕು. ರಾಜ್ಯದ ಎಂಪಿಗಳು ಸಂಸತ್ತಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಬೇಕು. ಎಂಪಿಗಳು ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನೆ ಮಾಡುವುದು ಮಾತ್ರವಲ್ಲ, 24 ಲಕ್ಷ ಮಂದಿ ವಿದ್ಯಾರ್ಥಿಗಳು ನೀಟ್ ಬರೆದಿದ್ದಾರೆ ಅವರ ಭವಿಷ್ಯವೇನು?. ಅದರ ಬಗ್ಗೆ ಪ್ರತಿಭಟನೆ ಮಾಡಲಿ ಎಂದರು.
ಬೋವಿ ಅಭಿವೃದ್ಧಿ ನಿಗಮದ 100 ಕೋಟಿ ರೂ. ಹಗರಣದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೋಟ ಶ್ರೀನಿವಾಸ ಪೂಜಾರಿಯವರ ಪಾಲಿದೆ. ಹಗರಣ ಆಗಿರುವುದನ್ನು ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಮತ್ತೇಕೆ ಈ ಪ್ರಕರಣವನ್ನು ಸಿಒಡಿಗೆ ನೀಡಿ ಸುಮ್ಮನೆ ಕುಳಿತಿದ್ದಾರೆ ಎಂದವರು ಪ್ರಶ್ನಿಸಿದರು.
ಮುಖಂಡರಾದ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಶುಭೋದಯ ಆಳ್ವ ಮೊದಲಾದವರಿದ್ದರು.