ವಿವಾದಕ್ಕೆ ಕಾರಣವಾದ ನಟ ಉಪೇಂದ್ರ ಆಡಿದ ಮಾತು

Published on


ಬೆಂಗಳೂರು: ನಟ-ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಅವರ ಸಾಮಾಜಿಕ ಜಾಲತಾಣದ ಮೂಲಕ ಆಡಿದ ಮಾತೊಂದು ವಿವಾದಕ್ಕೆ ಕಾರಣವಾಗಿದ್ದು, ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರದಲ್ಲಿ ಮಾತನಾಡುವಾಗ ದಲಿತ ಸಮುದಾಯದ ಭಾವನೆಗಳಿಗೆ ಘಾಸಿಯುಂಟು ಮಾಡುವ ಪದ ಬಳಕೆ ಮಾಡಿದ ಆರೋಪದಡಿ ಉಪೇಂದ್ರ ವಿರುದ್ಧ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ’ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಧುಸೂದನ್ ನೀಡಿದ ದೂರಿನ ಮೇರೆಗೆ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎ್ಐಆರ್‌ನಲ್ಲಿ ಏನಿದೆ?
ಉಪೇಂದ್ರ ಅವರು ಸಾಮಾಜಿಕ ಜಾಲತಾಣದ ನೇರ ಪ್ರಸಾರದಲ್ಲಿ ಮಾತನಾಡುವಾಗ ‘ಊರೆಂದರೆ ಹೊಲಗೇರಿ ಇರುತ್ತದೆ’ ಎಂಬ ಪದ ಬಳಸಿ ಮಾತನಾಡಿದ್ದಾರೆ. ಇದರಿಂದ ದಲಿತ ಸಮಾಜದಲ್ಲಿ ಜಾತಿ ಭಾವನೆಗಳಿಗೆ ಘಾಸಿ ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ನಟ ಉಪೇಂದ್ರ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸಮತಾ ಸೈನಿಕ ದಳದ ಜಿ.ಗೋಪಾಲ್ ಗಿರಿಯಪ್ಪ ಮತ್ತು ಬನಶಂಕರಿ ನಾಗು ಲಿಖಿತ ಮನವಿ ಸಲ್ಲಿಸಿದ್ದಾರೆ. ಮನವಿ ಪರಿಶೀಲಿಸಿದಾಗ ದೂರು ಸತ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಮಾತನಾಡಿದ ವಿಡಿಯೊ ತುಣುಕನ್ನು ನಾನೂ ಸಹ ನೋಡಿದ್ದೇನೆ. ಅದರಲ್ಲಿ ಉಪೇಂದ್ರ ಅವರು ಊರೆಂದರೆ ಹೊಲಗೇರಿ ಇರುತ್ತದೆ ಎಂಬ ಪದವನ್ನು ಉಪಯೋಗಿಸಿರುವುದು ಕಂಡು ಬಂದಿದೆ ಎಂದು ಮಧುಸೂದನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಲಿತರ ಭಾವನೆಗೆ ಘಾಸಿಯಾಗಿದೆ:
‘ಒಬ್ಬ ಸಾರ್ವಜನಿಕ ಜೀವನದಲ್ಲಿ ಇರುವ ನಟನಾಗಿ ರಾಜ್ಯಾಧ್ಯಂತ ಹೆಸರು ಮಾಡಿರುವ ಉಪೇಂದ್ರ ಅವರು ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕಾಗಿತ್ತು. ಈ ನಟನನ್ನು ಅನುಕರಣೆ ಮಾಡುವವರು ಸಹ ಇದನ್ನು ಮುದುವರಿಸಿದ್ದಲ್ಲಿ ಸಾರ್ವಜನಿಕ ಸ್ವಾಸ್ಥೃ ಹಾಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಟ ಉಪೇಂದ್ರ ಅವರ ಮಾತಿನಿಂದ ದಲಿತರ ಭಾವನೆಗೆ ಘಾಸಿಯಾಗಿದೆ. ಹೀಗಾಗಿ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ’ ಮನವಿ ಮಾಡಿದ್ದಾರೆ.

ಕ್ಷಮೆಯಾಚಿಸಿದ ಉಪೇಂದ್ರ:
ಉಪೇಂದ್ರ ಅವರ ಸಮುದಾಯವೊಂದರ ಕುರಿತ ಆಕ್ಷೇಪಾರ್ಹ ಪದ ಬಳಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉಪೇಂದ್ರ ಅವರ ಮಾತು ಕುರಿತು ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ನಟ ಉಪೇಂದ್ರ ಅವರು ತಮ್ಮ ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದಾರೆ. ‘ಇದು ಫೇಸ್‌ಬುಕ್ ಮತ್ತು ಇನ್ಸ್‌ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೊವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ ಮತ್ತು ಈ ಮಾತಿಗೆ ಕ್ಷಮೆಯಿರಲಿ’ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಯಾಕೆ ಇಷ್ಟೊಂದು ದ್ವೇಷ?
ಉಪೇಂದ್ರ ಅವರು ಮತ್ತೊಂದು ಪೋಸ್ಟ್‌ನಲ್ಲಿ ‘ಇಂದು ನನ್ನ ವಿರುದ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. ೫೦ ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ? ನನಗೆ ಹುಚ್ಚೇ ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ? ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net