ಪಾಂಡವಪುರ: ದೇಶದ ಎಲ್ಲ ವರ್ಗದ ಜನರು ಮೀಸಲಾತಿ ಪಡೆಯುತ್ತಿದ್ದು, ಅಂತಹವರೇ ಮೀಸಲಾತಿ ವಿರುದ್ಧ ಮಾತನಾಡುತ್ತಿರುವುದು ಬೇಸರದ ಸಂಗತಿ ಎಂದು ಚಿಂತಕ ಮಹೇಶ್ ಮುದ್ದೇನಹಟ್ಟಿ ಹೇಳಿದರು.
ಪಟ್ಟಣದ ತಾಲೂಕು ಪಂಚಯಿತಿ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಶಿಷ್ಟರು, ಕುರುಬರು, ವಿಶ್ವಕರ್ಮರು, ಗಾಣಿಗರು, ಮಡಿವಾಳರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಪಡೆಯುತ್ತಿವೆ. ಈಗ ಎಕಾನಮಿ ವೀಕರ್ ಸೆಕ್ಷನ್ ಹೆಸರಿನಲ್ಲಿ ಶೇ.3ರಿಂದ 5ರಷ್ಟಿರುವ ಬ್ರಾಹ್ಮಣರು ಹಾಗೂ ಜೈನರು ಕೂಡ ಶೇ.10ರಷ್ಟು ಮೀಸಲಾತಿಯನ್ನು ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಸಮಾಜದ ಎಲ್ಲ ವರ್ಗಗಳು ಮೀಸಲಾತಿಯನ್ನು ಪಡೆಯುತ್ತಿದ್ದರೂ ಪರಿಶಿಷ್ಟರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.
ತಹಶೀಲ್ದಾರ್ ಎಸ್.ಸಂತೋಷ್ ಮಾತನಾಡಿ, ಪ್ರತಿಯೊಬ್ಬ ಭಾರತೀಯನು ತನ್ನ ಹಕ್ಕಿಗಾಗಿ ಹೋರಾಟ ಮಾಡುವಾಗಲೆಲ್ಲಾ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕಿದೆ ಎಂದರು.
ವಿದ್ಯಾರ್ಥಿನಿ ಮಧುಶ್ರೀ ಅಂಬೇಡ್ಕರ್ ಕುರಿತ ಮಹಾನಾಯಕ ಗೀತೆಗೆ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.ತಾಪಂ ಇಒ ಲೋಕೇಶ್ ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ಅಧಿಕಾರಿಗಳಾದ ಕೋಮಲಾ, ಟಿ.ಲೋಕೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕೆಂಪೇಗೌಡ, ದಲಿತ ಮುಖಂಡರಾದ ಅರಳಕುಪ್ಪೆ ದೇವರಾಜು, ಸಿದ್ದಲಿಂಗಯ್ಯ, ಅಲ್ಪಹಳ್ಳಿ ಗೋವಿಂದಯ್ಯ ಇತರರು ಇದ್ದರು.
ಮಾಲಾರ್ಪಣೆ: ಇದಕ್ಕೂ ಮೊದಲು ಪಟ್ಟಣದ ಐದು ದೀಪ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಎಜುಕೇಷನ್ ಅಸೋಸಿಯೇಷನ್ ವತಿಯಿಂದ ಅಧ್ಯಕ್ಷ ಜೆ.ಅಂದಾನಯ್ಯ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಫ್ಲೆಕ್ಸ್‌ಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಪಾಂಡವಪುರದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.