_1774980724109.webp?w=480&auto=format%2Ccompress&fit=max)
_1774980724109.webp?w=480&auto=format%2Ccompress&fit=max)
ಇಂದು ಮೂರ್ಖರ ದಿನ. ಆದರೆ, ಕೆಲವೊಮ್ಮೆ ದಿಢೀರ್ ಎದುರಾಗುವ ಸಂದರ್ಭಗಳು, ಪ್ರಸಂಗಗಳು ನಮಗೇ ಗೊತ್ತಿಲ್ಲದಂತೆ ಪೇಚು ಸೃಷ್ಟಿಸಿ, ಮೂರ್ಖರನ್ನಾಗಿ ಮಾಡುತ್ತವೆ. ಅದರಲ್ಲೂ, ಹಾಸ್ಯ ಬರಹಗಾರರು ಮತ್ತು ಮಾತುಗಾರರು ಇಂಥ ಸಂದರ್ಭಗಳನ್ನು ನಗೆ ಉಕ್ಕಿಸಲೆಂದೇ ಸಭೆ, ಸಮಾರಂಭಗಳಲ್ಲಿ ಉಲ್ಲೇಖಿಸುತ್ತಿರುತ್ತಾರೆ. ಅದೇ ಹಾಸ್ಯಗಾರರು ಪೇಚಿಗೆ ಸಿಲುಕಿದರೆ, ಪರಿಸ್ಥಿತಿ ಹೇಗಿರುತ್ತದೆ ಎಂಬ ಸ್ವಾರಸ್ಯಕರ ಘಟನೆಗಳ ಮೆಲುಕು ಇಲ್ಲಿದೆ.
‘ಇನ್ನೊಂದೆರಡು ಪೂರಿ ಹಾಕಿಸ್ಕೊಳಿ ಸಾರ್’ ಎಂದರು ಅತಿಥೇಯರು. ಊರು ನೋಡಕ್ಕೆ ಟೈಮಾಗತ್ತೆ, ಸಾಕು ಎಂದೆ. ನನ್ನೊಡನಿದ್ದ ಪೊ›ಫೆಸರ್ ಕೃಷ್ಣೇಗೌಡರೂ ಸಮ್ಮತಿಸೂಚಕ ದನಿಗೂಡಿಸಿದರು. ನಿಮಗೋಸ್ಕರ ಅಂತ ಸ್ಪೆಷಲ್ ಸಾಗು ಮಾಡಿರೋದು. ಪೂರಿ ಆದಮೇಲೆ ಸ್ವೀಟ್, ಖಾರಬೂಂದಿ ತಿಂದು ಕಾಫಿ ಕುಡಿದುಬಿಟ್ಟರೆ ಹೊರಟುಬಿಡಬಹುದು. ಅತಿಥೇಯರ ವರಾತ ಮುಂದುವರಿದಿತ್ತು. ಗ್ರೇಟ್ ಮಾಸ್ಕ್ ಬಾಗಿಲು ಹಾಕ್ಬಿಡತ್ತೇನೋ!
ನಮ್ಮ ಆತಂಕವನ್ನು ಅವರ ಮುಂದಿರಿಸಿದೆವು. ಕನ್ನಡ ಸಂಘದವರ ಆಹ್ವಾನದ ಮೇರೆಗೆ ಮಸ್ಕತ್ಗೆ ನಾವಿಬ್ಬರೂ ಹೋಗಿದ್ದಾಗಿನ ಸಂದರ್ಭವಿದು. ಕಾರ್ಯಕ್ರಮಕ್ಕೆ ಹಿಂದಿನ ಬಿಡುವಿನ ದಿನದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಕಾಣುವ ತವಕ ನಮಗೆ; ಬಂದ ಭಾರತೀಯರಿಗೆ ತಮ್ಮ ಕೈಲಾದಷ್ಟು ಆತಿಥ್ಯ ಒದಗಿಸುವ ಕಾತುರ ಅತಿಥೇಯರಿಗೆ. ಮಾಸ್ಕ್ ಒಂದು ಗಂಟೆಯವರೆಗೆ ತೆರೆದಿರುತ್ತೆ ಎಂದರವರು. ಆಗಿನ್ನೂ ಬೆಳಗ್ಗೆ ಹತ್ತರ ಸಮಯ. ರುಚಿಕರವಾದ ಪೂರಿಗಳನ್ನು ಮೆದ್ದು, ಕಾಫಿ ಹೀರಿ, ಕಾರ್ ಏರಿದೆವು. ನಾವು ಮಾಸ್ಕ್ ತಲುಪುವ ಹೊತ್ತಿಗೆ ಹನ್ನೊಂದು ಗಂಟೆ ಇಪ್ಪತ್ತು ನಿಮಿಷವೆಂದು ಗಡಿಯಾರ ತಿಳಿಸಿತು.
ಅತಿಥೇಯರೊಡನೆ ಕೃಷ್ಣೇಗೌಡರು, ನಾನು ಮಾಸ್ಕಿನತ್ತ ತರಾತುರಿಯಿಂದ ಚಲಿಸಿದೆವು. ಮಾಸ್ಕಿನ ಹೊರಬಾಗಿಲಿನಲ್ಲಿ ಆಜಾನುಬಾಹುವೊಬ್ಬ ಕಾವಲು ನಿಂತಿದ್ದ. ದ್ವಾರವನ್ನು ಸಮೀಪಿಸುತ್ತಿದ್ದಂತೆಯೇ, ‘ವಿಸಿಟಿಂಗ್ ಅವರ್ಸ್ ಬಿಟ್ವೀನ್ 8 ಆಂಡ್ 11 ಓನ್ಲಿ’ ಎಂದ. ಒಂದು ಗಂಟೆಯವರೆಗೆ ಇರತ್ತೆ ಅಂದಿದ್ರೀ! ಈಗಿನ್ನೂ ಹನ್ನೊಂದೂವರೆ! ಅತಿಥೇಯರತ್ತ ದೂರುದನಿ ಎತ್ತಿದೆ. ‘ಗೊತ್ತಿರ್ಲಿಲ್ಲ ಸಾರ್!’ ಕ್ಷಮಾಸ್ವರ ಹೊರಡಿಸಿದರವರು. ಬೆಂಗಳೂರಿನಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಪ್ರವೇಶವಿಲ್ಲದ ಜಾಗಗಳನ್ನು ಪ್ರವೇಶಿಸಿದ ನನಗೆ ‘ಕಾಂಚಾಣಂ ಕಾರ್ಯಸಿದ್ಧಿಃ’ ಎಂಬುದರಲ್ಲಿ ಬಲವಾದ ನಂಬಿಕೆ.
ಐದೋ ಹತ್ತೋ ರಿಯಾಲ್ ಕೊಟ್ಟರೆ ಹೇಗೆ? ಎನ್ನುತ್ತ ಜೇಬಿಗೆ ಕೈಹಾಕಿದೆ. ಸುಲ್ತಾನರ ಸೆರೆಮನೆಯ ಅತಿಥಿಗಳಾಗಿ ಒಂದು ತಿಂಗಳಾದರೂ ಕಳೆಯ ಬಯಸಿದರೆ ಹಾಗೆ ಮಾಡಬಹುದು ಎಂದ ನಮ್ಮನ್ನು ಕರೆದೊಯ್ದ ಡ್ರೖೆವರ್. ಹಣದ ಬದಲಿಗೆ ದೈನ್ಯ ಕೆಲಸ ಮಾಡೀತೇ ನೋಡಿಬಿಡೋಣವೆಂದು ದೈತ್ಯಾಕಾರಿಯ ಬಳಿ ತೆರಳಿ, ‘ಬಹಳ ದೂರದಿಂದ ಬಂದಿದ್ದೇವೆ. ಹೇಗಾದರೂ ಮಾಡಿ...’ ಎನ್ನುತ್ತಿದ್ದಂತೆಯೇ ಅವನು ನಕಾರಾತ್ಮಕವಾಗಿ ಗೋಣಾಡಿಸುತ್ತ ‘ಸುಲ್ತಾನ್ಸ್ ಆರ್ಡರ್ಸ್’ ಎಂದ. ಹಾಗೆಂದವನು ಸನಿಹ ಸಾರಿ, ‘ಮುಸ್ಲಿಮ್ಸ್?’ ಎಂದು ಕೇಳಿದ.
ಮುಸ್ಲಿಮರಿಗೆ ಮುಸ್ಲಿಮೇತರರಿಗಿಂತ ಹೆಚ್ಚಿನ ಸಮಯ ಪ್ರವೇಶಾವಕಾಶವಿತ್ತು. ನಾನು ಕನ್ನಡದಲ್ಲಿ ಅಲ್ಲ ಎಂದಿದ್ದಿದ್ದರೆ, ಅವನು ನನ್ನ ಅಲ್ಲವನ್ನು ಅವರ ದೇವರ ಸ್ಮರಣೆ ಮಾಡಿದುದೆಂದು ಕನ್ಫ್ಯೂಸ್ ಮಾಡಿಕೊಂಡಿದ್ದಿದ್ದರೆ ಒಳಹೋಗುವ ಅವಕಾಶ ಸಿಗುತ್ತಿತ್ತೋ ಏನೋ. ಆದರೆ ನಾನು ಇಂಗ್ಲಿಷ್ನಲ್ಲಿ ನೋ ಎಂದೆ. ಅವನು ಅಡ್ಡಡ್ಡಲಾಗಿ ಗೋಣಾಡಿಸುತ್ತ ಯಥಾಸ್ಥಾನಕ್ಕೆ ಮರಳಿ ಕಂಬದಂತೆ ನಿಂತ. ಪೂರಿಯ ಆಸೆಗೆ ಬಲಿಯಾಗಿ ಊರಿನ ಪ್ರಮುಖ ಆಕರ್ಷಣೆಯನ್ನು ದರ್ಶಿಸುವ ಅವಕಾಶವನ್ನು ಕಳೆದುಕೊಂಡೆವು. ಅಂದಿನಿಂದ ಯಾವುದೇ ದೇಶಕ್ಕೆ ತೆರಳಿದರೂ ಆಹಾರದ ಬಗ್ಗೆ ನನ್ನದು ಲಾಸ್ಟ್ ಪ್ರಿಯಾರಿಟಿ.
ಐವತ್ತು ವರ್ಷಗಳ ಹಿಂದಿನ ಮಾತು. ಬ್ಯಾಂಕ್ ಕೆಲಸಕ್ಕೆ ನಾನು ಸೇರಿದ ಹೊಸತು. ಸ್ಟೇಟ್ ಬ್ಯಾಂಕಿನ ಸಾಗರದ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೆ. ಅಡಿಕೆ ಮಂಡಿಗಳಿಗೆ ಊರು ಹೆಸರುವಾಸಿ. ಆ ವೇಳೆಗಾಗಲೇ ನಾನು ದಿನಪತ್ರಿಕೆಯೊಂದರಲ್ಲಿ ಕಾಲಮಿಸ್ಟ್ ಆಗಿದ್ದೆ. ಎರಡು ಪುಸ್ತಕಗಳು ಪ್ರಕಟ ಆಗಿದ್ದವು. ನನ್ನನ್ನು ಲೇಖಕ ಎಂದು ಕೆಲವರು ಗುರುತಿಸಿದ್ದರು. ಮಂಡಿ ಸಾಹುಕಾರ್ ಮಂಜಣ್ಣನವರು ನಮ್ಮ ಬ್ಯಾಂಕಿಗೆ ಬಂದಾಗ ಬ್ಯಾಂಕ್ ಮ್ಯಾನೇಜರ್ ನನ್ನನ್ನು ಪರಿಚಯಿಸಿದರು. ‘ಈತ ಹೊಸದಾಗಿ ಕೆಲ್ಸಕ್ಕೆ ಸೇರಿದ್ದಾನೆ. ಹುಡ್ಗ ಬಹಳ ಚೂಟಿ, ಬ್ರಿಲಿಯಂಟು, ಮ್ಯಾಥ್ಸ್ನಲ್ಲಿ ಫಸ್ಟ್ಕ್ಲಾಸ್. ಟೇಬಲ್ಸ್ ಎಲ್ಲ ಬಾಯಲ್ಲೇ ಇದೆ’. ‘ಟೇಬಲ್ಸು, ಚೇರ್ಸು ಬಾಯಿಗೆ ಹಿಡಿಸುತ್ತಾ?’ ಸಾಹುಕಾರರು ಜೋಕು ಮಾಡಿ ತಾವೇ ನಕ್ಕರು.
ಅಷ್ಟೇ ಅಲ್ಲ, ಒಳ್ಳೇ ರೈಟರ್ ಸಹ ಆಗಿದ್ದಾನೆ ಎಂದು ಹೊಗಳಿದಾಗ ಮಂಡಿ ಸಾಹುಕಾರರಿಗೆ ಖುಷಿಯಾಯಿತು. ಮರುದಿನ ಸಂಜೆ ಅವರ ಮನೆಗೆ ಉಪಾಹಾರಕ್ಕೆ ಕರೆದರು. ‘ನೀವು ರೈಟರ್ ಅಂತ ಗೊತ್ತೇ ಇರ್ಲಿಲ್ಲ. ನಿಮ್ಮ ಸಹಾಯ ಬೇಕಿದೆ’ ಎಂದರು.
‘ನಿಮ್ಗೆ ಇನ್ಕಂ ಟ್ಯಾಕ್ಸು, ಸೇಲ್ಸ್ ಟ್ಯಾಕ್ಸು ಇವೆಲ್ಲ ಚೆನ್ನಾಗಿ ಗೊತ್ತಿರುತ್ತಲ್ಲ?’
‘ಬ್ಯಾಂಕಲ್ಲಿದ್ಮೇಲೆ ಗೊತ್ತಿರಲೇಬೇಕು’ ಎಂದು ಜಂಬ ಪಟ್ಟೆ.
‘ನೀವು ನಮ್ಮ ಅಂಗಡೀಲಿ ಸಾಯಂಕಾಲ ಎರಡು ಗಂಟೆ ಕಾಲ ಬಂದು ಪಾರ್ಟ್ಟೈಂ ರೈಟರ್ ಕೆಲಸ ಮಾಡಬಹುದಲ್ಲ, ಸಂಬಳ ಕೊಡ್ತೀವಿ’ ಎಂದರು. ನನ್ನ ಕಿವಿ ಚುರುಕಾಯಿತು. ಆದರೆ ಅಡಿಕೆ ಮಂಡೀಲಿ ನಾನು ಮಾಡೋ ಕೆಲಸ ಏನಿದೆ ಎಂದು ಯೋಚಿಸಿದೆ. ರೈಟರ್ ಕೆಲ್ಸ ನನಗೆ ಚೆನ್ನಾಗಿ ಬರುತ್ತೆ ಎಂದೆ.
‘ನಮಗೆ ಬೇಕಾಗಿರೋದೂ ಅದೇ. ಅಡಿಕೆ ಮಂಡಿ ವಹಿವಾಟಿನ ಲೆಕ್ಕಗಳು ಸಿದ್ಧ ಆಗಬೇಕು. ಇನ್ನು ಮುಂದೆ ನೀವೇ ನಮ್ಮ ರೈಟರ್’ ಎಂದರು. ಆಗ ನನಗೆ ಗಾಬರಿ ಆಯಿತು. ‘ಸಾರ್, ನೀವು ತಪ್ಪು ತಿಳಿದಿದ್ದೀರ. ನಾನು ಕನ್ನಡ ರೈಟರ್. ನಾನು ಕನ್ನಡದಲ್ಲಿ ಕಥೆ, ಕವನ ಬರೆಯೋ ರೈಟರ್’ ಎಂದೆ. ಅವರು ತಾತ್ಸಾರದಿಂದ, ‘ಕನ್ನಡದಲ್ಲಿ ಕಥೆ ಬರೆಯೋವರಾ? ಸರಿಬಿಡಿ, ಸಾಹಿತ್ಯಕ್ಕೂ ನಮಗೂ ಆಗಿ ಬರೊಲ್ಲ’ ಎಂದು ಕೈ ಮುಗಿದು ಬಾಗಿಲತ್ತ ಕಣ್ಣೋಟ ಹರಿಸಿದರು.
ನನಗೆ ನೆನಪಿನಶಕ್ತಿ ಅನ್ನೋದು ರವಷ್ಟು ಕಡಮೇನೇ. ಬೇಕಾದ್ರೆ ನನ್ನ ಮಡದಿ ಹತ್ರ ಕೇಳಿ, ಅದಕ್ಕೆ ಆಕೆ ನೂರಾರು ಉದಾಹರಣೆ ಕೊಡ್ತಾರೆ. ಆದರೆ ಜನ, ನಾನು ಸಭೆ, ಸಮಾರಂಭಗಳಲ್ಲಿ ಕೋಟ್ ಮಾಡೋ ಪದ್ಯಗಳನ್ನು, ಪ್ರಸಂಗಗಳನ್ನು ಕೇಳಿ, ‘ಆಹ, ಏನ್ ನೆನಪಿನ ಶಕ್ತಿ ಸಾರ್ ನಿಮ್ದು! ಪುಣ್ಯಾತ್ಮ ಬ್ರಹ್ಮ ನಿಮ್ಮ ತಲೇಲಿ ಸಾವಿರಾರು ಜಿಬಿ ಮೆಮೊರಿ ಕಾರ್ಡನ್ನ ಭದ್ರವಾಗಿ ಇನ್ಬಿಲ್ಟ್ ಮಾಡೇ ಕಳಿಸಿಬಿಟ್ಟಿದ್ದಾನೆ’ ಅಂತ ರೈಲು ಹತ್ತಿಸಿ ಓಡಾಡಿಸ್ತಾರೆ. ಆಗ ನಾನೊಂದು ರವಷ್ಟು ಉಬ್ಬಿಹೋಗ್ತೀನಿ. ಅವರಿಗೂ ನನ್ನನ್ನು ಉಬ್ಬಿಸಬೇಕು ಅನ್ನೋದನ್ನು ಬಿಟ್ಟರೆ ಬೇರೆ ಯಾವ ಸದುದ್ದೇಶಗಳೂ ಇರಲಿಕ್ಕಿಲ್ಲ ಅನ್ನಿ. ಇರಲಿ ಬಿಡಿ, ಚಕ್ಕುಬಂದಿ ಸಾಕು. ವಿಷಯಕ್ಕೆ ಬರ್ತೀನಿ.
ಒಂದೆರಡು ವರ್ಷ ಹಿಂದಿನ ಮಾತು. ನಾನು ಹೊರಗೆಲ್ಲೋ ಹೋಗಿ ಮನೆಗೆ ಬರುವ ಹೊತ್ತಿಗೆ ಆಯಮ್ಮ ನಮ್ಮ ಕಾಂಪೌಂಡಿನೊಳಗೆ ಕುಳಿತಿದ್ದಳು. ನಾನು ಗೇಟು ತೆಗೆದು ಒಳಗಡೆ ಬಂದ ಕೂಡಲೇ ಎದ್ದು ನಿಂತು ಕೈಜೋಡಿಸಿ ನಮಸ್ಕಾರ ಮಾಡಿ, ‘ಚೆನ್ನಾಗಿದ್ದೀರಾ?’ ಎಂದಳು. ನಾನು ಚೆನ್ನಾಗಿದ್ದೀನಮ್ಮ, ನೀವೆಲ್ಲ ಚೆನ್ನಾಗಿದ್ದೀರಾ? ಮನೆಯಲ್ಲೆಲ್ಲ ಹ್ಯಾಗಿದ್ದಾರೆ? ಊರಕಡೆ ಮಳೆ ಆಯ್ತಾ? ಅಂತ ಏನೇನೋ ಕೇಳಿದೆ. ಕೇಳಿದೆ ನಿಜ, ಆದರೆ ದೇವರಾಣೆ ಅವಳು ಯಾರು ಅಂತ ನನಗೆ ಗೊತ್ತಿರಲಿಲ್ಲ. ನನ್ನ ನೆನಪಿನ ಬಾವಿಯೊಳಕ್ಕೆ ಪಾತಾಳ ಗರಡಿ ಬಿಟ್ಟು ನೋಡಿದರೂ ಆಕೆ ಯಾರು, ಏನು, ಎತ್ತ ಒಂದಿಷ್ಟೂ ಗೋಚರವಾಗ್ಲಿಲ್ಲ. ಆದರೆ ಪುಣ್ಯಾತಗಿತ್ತಿ ನನ್ನನ್ನ ಸತಾಯಿಸಲಿಲ್ಲ.
‘ನಾನ್ಯಾರು ಅಂತ ನಿಮಗೆ ಗೊತ್ತಿಲ್ಲ ಸಾರ್, ಹೇಳಿದ್ರೆ ಗೊತ್ತಾಗುತ್ತೆ’ ಅಂದ್ಲು. ಹೇಳಿ ಅಂದೆ. ‘ನೀವು ಪಾಂಡವಪುರದಲ್ಲಿ ಹೈಸ್ಕೂಲ್ ಓದುವಾಗ ನಿಮ್ಮ ಹಾಸ್ಟೆಲ್ ಪಕ್ಕದಲ್ಲಿ ಅಂತೋಣಮ್ಮ ಅಂತ ಒಬ್ಬಳು ಮುದುಕಿ ಇದ್ದಳಲ್ಲ, ನೀವು ಅವಳಿಗೆ ಕಾಗದ ಪತ್ರ ಬರಕೊಡ್ತಿದ್ದರಲ್ಲ, ಆ ಅಂತೋಣಮ್ಮನ ಮೊಮ್ಮಗಳು ನಾನು, ಮೇರಿಯಮ್ಮ ಅಂತ...’ ಅಂದಳು. ಹ್ಞಾಂ... ನೆನಪಾಯಿತು. ಮೇರಿಯಮ್ಮ ನನ್ನ ತಲೆಯೊಳಗೆಲ್ಲೋ ಹೂತುಹೋಗಿದ್ದ ನೆನಪಿನ ಕಲ್ಲೊಂದನ್ನು ಅವಳ ಮಾತಿನ ಹಾರೆಯಲ್ಲಿ ಮೀಟಿ ಮೇಲಕ್ಕೆತ್ತಿದ್ದಳು. ನನಗೆ ಸಂತೋಷವಾಯಿತು. ಮನೆಯೊಳಗೆ ಕರೆದು ಕೂರಿಸಿ ನನಗೆ ತೋಚಿದಷ್ಟು ಉಪಚಾರ ಮಾಡಿದೆ.
ನನ್ನನ್ನ ಕಂಡಾಬಟ್ಟೆ ಹೊಗಳಿ ಉಬ್ಬಿಸಿದಳು. ಎಂದಿನಂತೆ ನಾನೂ ಉಬ್ಬಿದೆ. ಅದೂ ಇದೂ ಮಾತಾಡುತ್ತ ಮೇರಿಯಮ್ಮ ತನ್ನದೊಂದು ಕಷ್ಟ ಹೇಳಿಕೊಂಡು ನನ್ನ ಕರುಳನ್ನು ಚುರ್ ಅನ್ನಿಸಿದಳು. ‘ಸಧ್ಯಕ್ಕೊಂದು ಐದು ಸಾವಿರ ರೂಪಾಯಿ ಕೊಟ್ಟರೆ ನಿಮ್ಮ ಉಪಕಾರ ಮರೆಯಲ್ಲ ಸಾರ್’ ಅಂದಳು. ನಾನು ಏನು ಪರವಾಗಿಲ್ಲಮ್ಮ, ನಮ್ಮ ಆಂಟೋನಿಯಮ್ಮನ ಮೊಮ್ಮಗಳು ನೀನು ಅಂತ ಐದು ಸಾವಿರ ಕೊಟ್ಟು ಕಳುಹಿಸಿದೆ. ಅದಾಗಿ ಏಳೆಂಟು ದಿನ ಕಳೆದಿರಬಹುದು, ಒಂದು ಸಂಜೆ ನನ್ನ ಗೆಳೆಯರೊಬ್ಬರು ಫೋನ್ ಮಾಡಿ, ‘ಸಾರ್, ಅರ್ಜೆಂಟಾಗಿ ಒಂದೈದು ಸಾವಿರ ರೂಪಾಯಿ ಬೇಕು, ಮನೇಲಿ ಕ್ಯಾಷ್ ಇಲ್ಲ, ಕೊಡೋಕೆ ಸಾಧ್ಯನಾ? ನಾಳೇನೇ ಕೊಟ್ಟುಬಿಡ್ತೀನಿ’ ಅಂದ್ರು.
ನಾನು ಆಯ್ತು, ಖಂಡಿತ ಕೊಡ್ತೀನಿ, ನೀವೇನೂ ಮನೆಗೆ ಬರೋದು ಬೇಡ, ನಾನೇ ಆ ಕಡೆ ಬರ್ತಿದ್ದೀನಿ, ಕೊಟ್ಟು ಹೋಗ್ತೀನಿ ಅಂದುಬಿಟ್ಟು ಐದು ಸಾವಿರ ಜೇಬಿಗಿಟ್ಕೊಂಡು ಅವರ ಮನೆಗೆ ಹೋದೆ. ಹೊರಬಾಗಿಲಿಗೇ ಬಂದರು ಗೆಳೆಯರು. ‘ಏನ್ ಸಮಾಚಾರ?’ ಅಂದೆ. ‘ಅದೇ ನೋಡಿ, ನಮ್ಮತ್ತೆ ಕಡೆಯ ಸಂಬಂಧದವರಂತೆ, ನನ್ನನ್ನ ಅಲ್ಲಿ ನೋಡಿದ್ದಾರಂತೆ, ಯಾರೋ ಕವಿತಾ ರಾಜಪ್ಪ ಅಂತ. ಇವತ್ತು ಬಸ್ಸ್ಟಾ್ಯಂಡ್ನಲ್ಲಿ ಬೆಂಗಳೂರಿನ ಬಸ್ಗೆ ಕಾಯುತ್ತಿದ್ದಾಗ, ಬ್ಯಾಗ್ ಹೊಡೆದುಬಿಟ್ಟಿದ್ದಾರೆ. ಇಪ್ಪತ್ತು ಸಾವಿರ ಕ್ಯಾಶು, ಎರಡು ಚಿನ್ನದ ಬಳೆ ಇತ್ತಂತೆ. ಅಯ್ಯೋ ಪಾಪ ಅಲ್ವಾ?’ ಅಂದರು. ನಾನು ಐದು ಸಾವಿರ ಅವರ ಕೈಗಿಟ್ಟು ಹೊರಟೆ.
ಇನ್ನೇನು ಕಾರು ಸ್ಟಾರ್ಟ್ ಮಾಡಬೇಕು ಅನ್ನುವಷ್ಟರಲ್ಲಿ ಮತ್ಯಾರೋ ಗೆಳೆಯರು ಎದುರಾದರು. ಒಂದೆರಡು ನಿಮಿಷ ಅಲ್ಲೇ ಮಾತಾಡುತ್ತ ನಿಂತಿದ್ದೆ. ಆಗ ಅವರ ಮನೆಯಿಂದ ಆ ಮಹಿಳೆ, ಹೊರಗೆ ಬಂದಳು. ನೋಡಿದೆ. ಅರೆ! ನಮ್ಮ ಮನೆಗೆ ಮೇರಿಯಮ್ಮನಾಗಿ ಬಂದಿದ್ದ ಅದೇ ಮಹಿಳೆ ಇಲ್ಲಿ ಕವಿತಾ ರಾಜಪ್ಪ! ನಾನು ಯಾವುದೋ ಭಾಷಣದಲ್ಲಿ ಹೇಳಿದ್ದ ಅಂತೋಣಮ್ಮನ ಕಥೆ ಕೇಳಿಸಿಕೊಂಡು ನಮ್ಮ ಮನೆಗೆ ಬಂದಿದ್ದಾಳೆ. ನನ್ನ ಗೆಳೆಯರ ಅತ್ತೆ ಮನೆ ಕಡೆಯವಳು ಅಂತ ಅವರ ಮನೆಗೆ ಬಂದಿದ್ದಾಳೆ. ಆಮೇಲೇನಾಯಿತು ಅಂದರೆ, ಅದೆಲ್ಲ ಕಥೆ ಯಾಕೆ ಬಿಡಿ! ರೈಲು ಹತ್ತೋರು ಇರೋವರೆಗೂ ರೈಲು ಹತ್ಸೋರು ಇದ್ದೇ ಇರ್ತಾರೆ!
ನಾನು ಇತ್ತೀಚೆಗೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದ ಒಂದು ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದೆೆ. ನಾನು ವಾಸವಾಗಿರುವುದು ಬೆಂಗಳೂರಿನ ದಕ್ಷಿಣದ ತುದಿಯಲ್ಲಿರುವ ಅಂಜನಾಪುರದಲ್ಲಿ. ಅಲ್ಲಿಂದ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಆರ್.ಟಿ. ನಗರಕ್ಕೆ ಹೋಗಲು ತುಂಬ ಸಮಯ ಬೇಕಾಗುತ್ತದೆ. ಪ್ರಯಾಣದ ವ್ಯವಸ್ಥೆಯ ಬಗ್ಗೆ ವಿಚಾರಿಸಿದಾಗ ಸಂಘಟಕರು, ‘ಸಾರ್, ನೀವು ಯಶವಂತಪುರದವರೆಗೆ ಮೆಟ್ರೋದಲ್ಲಿ ಬನ್ನಿ. ಅಲ್ಲಿಂದ ನಮ್ಮ ಹುಡುಗರು ನಿಮ್ಮನ್ನು ಅವರ ವೆಹಿಕಲ್ನಲ್ಲಿ ಕರೆದುಕೊಂಡು ಬರುತ್ತಾರೆ’ ಎಂದರು. ಕೋಣನಕುಂಟೆಯವರೆಗೆ ರಿಕ್ಷಾದಲ್ಲಿ ಹೋಗಿ ಅಲ್ಲಿ ಮೆಟ್ರೋ ಹತ್ತಿ ಯಶವಂತಪುರದಲ್ಲಿ ಇಳಿದೆ. ಸಂಘಟಕರು ತಿಳಿಸಿದ ಮೊಬೈಲ್ ಫೋನಿಗೆ ಕರೆ ಮಾಡಿದೆ.
ಹತ್ತು ನಿಮಿಷಗಳ ಬಳಿಕ ಒಬ್ಬ ಹುಡುಗ ಸ್ಕೂಟರಿನಲ್ಲಿ ಬಂದು ‘ಬನ್ನಿ ಸಾರ್’ ಎಂದ. ‘ವೆಹಿಕಲ್ ಎಲ್ಲಿ?’ ಅಂದಾಗ ‘ಇದೇ ಸರ್ ಹಿಂದೆ ಕೂತ್ಕೊಳ್ಳಿ. ಹೆಚ್ಚು ದೂರ ಇಲ್ಲ’ ಅಂದ. ಕಷ್ಟಪಟ್ಟು ಕುಳಿತುಕೊಂಡು ನಿಧಾನವಾಗಿ ಹೋಗಪ್ಪ ಅಂದೆ. ಮೊದಲು ನಿಧಾನವಾಗಿ ಹೋಗುತ್ತಿದ್ದವ ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆದು ಯಾವುದೊ ಒಳರಸ್ತೆಯಲ್ಲಿ ವೇಗವಾಗಿ ಹೋಗತೊಡಗಿದ. ‘ಯಾಕಪ್ಪಾ?’ ಅಂದಾಗ ‘ಅಲ್ಲಿ ಟ್ರಾಫಿಕ್ ಪೊಲೀಸ್ ಇದ್ರು ಸಾರ್’ ಅಂದ. ನಾವಿಬ್ಬರೂ ಶಿರಸ್ತ್ರಾಣ ಧರಿಸಿರಲಿಲ್ಲ.
ಸಮಾರಂಭದಲ್ಲಿ ನನಗೆ 20 ನಿಮಿಷ ಮಾತನಾಡಲು ತಿಳಿಸಿದ್ದರು. ನಾನು ಭಾಷಣ ಮುಗಿಸುತ್ತಿದ್ದ ಹಾಗೆ ಸಂಘಟಕರು ನನ್ನ ಬಳಿ ಬಂದು ಇನ್ನೂ 15 ನಿಮಿಷ ಮಾತಾಡಿ ಅಂದರು. ನನ್ನ ಭಾಷಣ ಅವರಿಗೆ ಇಷ್ಟವಾಯಿತೆಂದು ತಿಳಿದು ನನಗೂ ಸಂತೋಷವಾಯಿತು. ಇನ್ನಷ್ಟು ಉತ್ಸಾಹದಿಂದ ಭಾಷಣ ಬಿಗಿಯಲಾರಂಭಿಸಿದೆ. ಐದು ನಿಮಿಷ ಆಗುವಷ್ಟರಲ್ಲಿ ಪುನಃ ಬಂದ ಸಂಘಟಕರು ಭಾಷಣ ನಿಲ್ಲಿಸಿ ಅಂದರು. ನನಗೆ ಆಶ್ಚರ್ಯವಾಯಿತು. ‘ಇನ್ನೂ 15 ನಿಮಿಷ ಮಾತಾಡಿ ಅಂದಿದ್ದಿರಲ್ಲ?’ ಎಂದಾಗ ಅವರು ಕೊಟ್ಟ ಉತ್ತರ, ‘ಊಟ ಬರೋದು ತಡವಾಗುತ್ತೆ ಅಂತ ಹಾಗೆ ಹೇಳಿದ್ದು ಸರ್, ಆದರೆ ಊಟ ಬೇಗ ಬಂತು’. ನಾನು ಭಾಷಣ ಮುಗಿಸುತ್ತಿದ್ದ ಹಾಗೆ ಧನ್ಯವಾದ ಸಮರ್ಪಣೆಗೂ ಕಾಯದೆ ಎಲ್ಲರೂ ಊಟಕ್ಕೆ ಕ್ಯೂ ನಿಂತರು. ನಾನು ಊಟ ಬೇಡವೆಂದು ವಾಪಾಸು ಹೋಗಲು ರಿಕ್ಷಾ ಹತ್ತಿದೆ. ಮೆಟ್ರೊ ನಿಲ್ದಾಣಕ್ಕೆ ಬರುತ್ತಿದ್ದ ಹಾಗೆ ಸಂಘಟಕರಿಂದ ಫೋನ್ ಬಂತು.
‘ಸರ್, ಎಲ್ಲಿದೀರಿ? ನಿಮಗೆ ಸನ್ಮಾನ ಮಾಡಿ ನೆನಪಿನ ಕಾಣಿಕೆ ಕೊಡಬೇಕಿತ್ತು. ಗಡಿಬಿಡಿಯಲ್ಲಿ ನೆನಪಾಗಲಿಲ್ಲ. ದಯವಿಟ್ಟು ಬನ್ನಿ ಸಾರ್’ ಎಂದರು. ‘ಬೇಡ ನನ್ನ ನೆನಪಿಗೆ ಅದು ನಿಮ್ಮ ಬಳಿಯೇ ಇರಲಿ’ ಎಂದೆ. ಸಂಘಟಕರಿಗೆ ನನ್ನ ಫೋನ್ ನಂಬರ್ ಕೊಟ್ಟು ಆ ಕಾರ್ಯಕ್ರಮಕ್ಕೆ ಹೋಗುವಂತೆ ಸೂಚಿಸಿದ್ದ ಗೆಳೆಯ ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್. ಎನ್. ಅವರಿಗೆ ಮರುದಿನ ನನಗಾದ ಅನುಭವ ತಿಳಿಸಿದೆ. ಅವರು ‘ನೀವು ಹೇಳಿದ್ದು ಒಳ್ಳೇದಾಯ್ತು. ಮುಂದಿನ ತಿಂಗಳು ನನ್ನನ್ನು ಕರೆದಿದ್ದಾರೆ. ಬಿಡುವಿಲ್ಲ ಅಂತೀನಿ’ ಎಂದರು!