VIDEO| ಇದು ಗೂಗ್ಲಿಯಲ್ಲ ದೊಡ್ಡ ಡಕಾಯಿತಿ: ಶರದ್​ ಪವಾರ್​

Sharath Ajit
Published on

ಮುಂಬೈ: ತಮ್ಮ ಸೋದರಳಿಯ ಅಜಿತ್​ ​ಬಿಜೆಪಿ-ಶಿವಸೇನೆ(ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿರವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ(NCP)ದ ಮುಖ್ಯಸ್ಥ ಶರದ್​ ಪವಾರ್​ ಶೀಘ್ರವೇ ಎಲ್ಲ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.

ನಾನು ಎರಡು ದಶಕಗಳಿಂದ ಕಟ್ಟಿ ಬೆಳಸಿರುವ ಪಕ್ಷವು ಬಿಜೆಪಿ-ಶಿವಸೇನೆ(ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸುತ್ತದೆ ಎಂದು ಹೇಳಿರುವುದರಿಂದ ತೀವ್ರ ಬೇಜಾರಾಗಿದೆ. ಈ ಸಂಬಂಧ ಪ್ರಮುಖರ ಸಭೆ ಕರೆಯಲಾಗಿದ್ದು, ಶೀಘ್ರವೇ ಎಲ್ಲವೂ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಇದು ಗೂಗ್ಲಿ ಅಲ್ಲ ದೊಡ್ಡ ಡಕಾಯಿತಿಯಾಗಿದ್ದು, NCPಯ ಕೆಲವು ಸಹೋದ್ಯೋಗಿಗಳನ್ನು ಭ್ರಷ್ಟಾಚಾರ ಆರೋಪಗಳಿಂದ ಮುಕ್ತಗೊಳಿಸಿ ಅವರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ಅಜಿತ್​ ಪವಾರ್​ ಬಂಡಾಯದಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ.

ವೈಯಕ್ತಿಕ ನಿರ್ಧಾರ

ಪಕ್ಷಕ್ಕೂ ಅಜಿತ್​ ಪವಾರ್​ ಬಂಡಾಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಿಂದೆ ಇದೇ ರೀತಿ ಹಲವು ಬಾರಿ ಆಗಿತ್ತು. ಆದರೆ, ನಾವು ಪಕ್ಷವನ್ನು ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶರದ್​ ಪವಾರ್​ ತಿಳಿಸಿದ್ದಾರೆ.

ಕಳೆದ ತಿಂಗಳು ಎನ್​ಸಿಪಿ ಅಧ್ಯಕ್ಷನ ಸ್ಥಾನಕ್ಕೆ ಶರದ್​ ಪವಾರ್​ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಬಳಿಕ ನಡೆದ ಕಾರ್ಯಾಧ್ಯಕರ ನೇಮಕದಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಶರದ್​ ವಿರುದ್ಧ ಮುನಿಸಿಕೊಂಡಿದ್ದ, ಅಜಿತ್​ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದಾದ ಕೆಲ ದಿನಗಳ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್​ ಪವಾರ್​ ಬಿಜೆಪಿ-ಶಿವಸೇನೆ(ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸುವ ಮೂಲಕ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಎನ್​ಸಿಪಿಯ ಕೆಲ ಬಂಡಾಯ ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net