

Sandeep Reddy: ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಮಾಡಿದ್ದು ಕೆಲವೇ ಕೆಲವು ಸಿನಿಮಾಗಳಾದರೂ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಕಳೆದ ವರ್ಷ ತಾವು ನಿರ್ದೇಶಿಸಿದ 'ಅನಿಮಲ್' ಚಿತ್ರ, ಬಾಲಿವುಡ್ ಅಂಗಳದಲ್ಲಿ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿತು. ಆದರೆ, ಚಿತ್ರದಲ್ಲಿನ ದೃಶ್ಯಗಳು ನೋಡುಗರಿಗೆ ತೀರ ಮುಜುಗರ ಉಂಟುಮಾಡಿತು. ಇದೇ ವಿಷಯಕ್ಕೆ ತೀವ್ರ ಟೀಕೆಗೂ ಗುರಿಯಾಯಿತು. ಈ ಸಾಲಿನಲ್ಲಿ ಐಎಎಸ್ ಅಧಿಕಾರಿ ವಿಕಾಸ್ ದಿವ್ಯಕೀರ್ತಿ ಮಾತನಾಡಿ, ಸಂದೀಪ್ ರೆಡ್ಡಿ ಅನಿಮಲ್ ವಿರುದ್ಧ ಕಿಡಿಕಾರಿದ್ದರು.
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಕುರಿತು ಕಡೆಗೂ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಸಂದೀಪ್, "ಅನಿಮಲ್ ನಂತಹ ಚಿತ್ರಗಳನ್ನು ಬಿಡುಗಡೆ ಮಾಡಬಾರದು ಎಂದು ಐಎಎಸ್ ಅಧಿಕಾರಿಯೊಬ್ಬರು ಹೇಳಿದ್ದರು. ಅವರು ಹೇಳಿದ್ದನ್ನು ಕೇಳಿದಾಗ, ಒಂದು ನಿಮಿಷ ನಾನ್ಯಾವುದೋ ದೊಡ್ಡ ಅಪರಾಧ ಮಾಡಿದೆ ಎಂಬ ಭಾವನೆ ನನ್ನಲ್ಲಿ ಮೂಡಿತು. ಒಂದೆಡೆ, ಅವರು '12 ಫೇಲ್' ಚಿತ್ರಗಳನ್ನು ಮಾಡುತ್ತಿದ್ದಾರೆ, ಮತ್ತೊಂದೆಡೆ, 'ಅನಿಮಲ್'ನಂತಹ ಸಿನಿಮಾಗಳು ಸಮಾಜವನ್ನು 10 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳ್ತಾರೆ. ಯಾರಾದರೂ ಅನಗತ್ಯವಾಗಿ ನನ್ನ ಚಿತ್ರದ ಮೇಲೆ ಈ ರೀತಿ ಟೀಕಿಸಿದರೆ ಖಂಡಿತವಾಗಿಯೂ ನನಗೆ ಕೋಪ ಬರುತ್ತದೆ" ಎಂದು ಹೇಳಿದರು.
"ಯಾರಾದರೂ ಐಎಎಸ್ ಅಧಿಕಾರಿಯಾಗಬಹುದು. ಅವರು ದೆಹಲಿಗೆ ಹೋಗಿ, ಯಾವುದಾದರೂ ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಸೇರಿ ಅಲ್ಲಿ ಎರಡು ಅಥವಾ ಮೂರು ವರ್ಷ ಓದುತ್ತಾ ಕಳೆದರೆ, ಖಂಡಿತವಾಗಿಯೂ ಅವರು ಕೂಡ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಹಲವಾರು ಪುಸ್ತಕಗಳೂ ಇವೆ ಅಲ್ವೇ? ನೀವು 1500 ಪುಸ್ತಕಗಳನ್ನು ಓದಿದರೆ, ಐಎಎಸ್ ಅಧಿಕಾರಿಯಾಗುತ್ತೀರಿ. ಆದರೆ, ಸಿನಿಮಾದಲ್ಲಿ ಹಾಗಿಲ್ಲ. ನಿರ್ದೇಶಕ ಅಥವಾ ಬರಹಗಾರನಾಗಲು ಯಾವುದೇ ನಿರ್ದಿಷ್ಟ ಕೋರ್ಸ್ ಇಲ್ಲ. ಯಾವುದೇ ಶಿಕ್ಷಕರು ನಿಮ್ಮನ್ನು ನಿರ್ದೇಶಕ ಅಥವಾ ಬರಹಗಾರನನ್ನಾಗಿ ಮಾಡಲು ಸಾಧ್ಯವಿಲ್ಲ" ಎಂದು ಅಧಿಕಾರಿ ವಿಕಾಸ್ಗೆ ತಿರುಗೇಟು ನೀಡಿದ್ದಾರೆ. ನಿರ್ದೇಶಕನ ಈ ಹೇಳಿಕೆಗಳಿಗೆ ಸದ್ಯ ಜಾಲತಾಣಗಳಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ.
ಸಂದೀಪ್ ರೆಡ್ಡಿ ನಿರ್ದೇಶಿಸಿದ 'ಅನಿಮಲ್' ಚಿತ್ರ 2023ರಲ್ಲಿ ತೆರೆಕಂಡಿತು. ಈ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂ.ಗಳಿಕೆ ಕಂಡಿತು,(ಏಜೆನ್ಸೀಸ್).