

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆ ಶನಿವಾರ(ಅಕ್ಟೋಬರ್ 5) ನಡೆಯುತ್ತಿದೆ. ಈ ವೇಳೆ ಕುರುಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದ ನವೀನ್ ಜಿಂದಾಲ್(Naveen Jindal) ಮತ ಚಲಾಯಿಸಲು ಬಂದ ರೀತಿ ಮತಗಟ್ಟೆಯಲ್ಲಿದ್ದ ಜನರನ್ನು ಆಕರ್ಷಿಸಿದೆ. ಕುರುಕ್ಷೇತ್ರದ ಮೋಹನ್ ನಗರದ ಗೀತಾ ವಿದ್ಯಾ ಮಂದಿರದಲ್ಲಿರುವ ಮತಗಟ್ಟೆಗೆ ಮತ ಚಲಾಯಿಸಲು ಸಂಸದ ನವೀನ್ ಜಿಂದಾಲ್ ಕುದುರೆ ಸವಾರಿಯಲ್ಲಿ ಆಗಮಿಸಿದ್ದಾರೆ. ಸಂಸದರ ಈ ಸ್ಟೈಲ್ ನೋಡಿ ಜನ ಅಚ್ಚರಿಗೊಂಡಿದ್ದಾರೆ.
ಮತಚಲಾಯಿಸಿದ ಬಳಿಕ ಮಾತನಾಡಿದ ನವೀನ್ ಜಿಂದಾಲ್, ಮತದಾನದ ಬಗ್ಗೆ ಜನರಲ್ಲಿ ಉತ್ಸಾಹ ಮೂಡಿದೆ. ಇಂದು ಜನರು ಮತ ಚಲಾಯಿಸುತ್ತಿರುವುದು ಅತೀವ ಸಂತಸ ತಂದಿದೆ. ಹರಿಯಾಣದ ಕೆಚ್ಚೆದೆಯ ಮತ್ತು ಜಾಗೃತ ಜನರು ಬಿಜೆಪಿಗೆ ತಮ್ಮ ಆಶೀರ್ವಾದವನ್ನು ನೀಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಮಂಗಳಕರವೆಂದು ಪರಿಗಣಿಸಿ ನಾನು ಕುದುರೆ ಸವಾರಿ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಹರಿಯಾಣದಲ್ಲಿ ಬಿಜೆಪಿ ಮಾತ್ರ ಸರ್ಕಾರ ರಚಿಸುತ್ತದೆ. ಮತದಾನದಲ್ಲಿ ಭಾಗವಹಿಸುವಿಕೆಯ ಬಗ್ಗೆ ಜನರು ಖಚಿತಪಡಿಸಿಕೊಳ್ಳಿ ಏಕೆಂದರೆ ನಿಮ್ಮ ಪ್ರತಿಯೊಂದ ಮತವೂ ಮುಖ್ಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಸದ ನವೀನ್ ಜಿಂದಾಲ್ ಕುದುರೆ ಏರಿ ಮತದಾನ ಮಾಡಲು ಆಗಮಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಮಾತ್ರವಲ್ಲದೆ ಕುರುಕ್ಷೇತ್ರದ ಮತಗಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಹರಿಯಾಣದ ಎಲ್ಲಾ 22 ಜಿಲ್ಲೆಗಳಲ್ಲಿ 90 ಸ್ಥಾನಗಳಲ್ಲಿ ಒಟ್ಟು 1,031 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ 2.03 ಕೋಟಿ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್ ಅವರು ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. (ಏಜೆನ್ಸೀಸ್)