ಐಟಿಸಿ ಕಂಪನಿ ಉದ್ಯೋಗಿ ಭೀಕರವಾಗಿ ಹತ್ಯೆ

Crime Logo
Published on

ಬೆಂಗಳೂರು: ಹಾಡುಹಗಲೇ ನಡು ರಸ್ತೆಯಲ್ಲಿ ಐಟಿಸಿ ಕಂಪನಿ ಉದ್ಯೋಗಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಕಾಕ್ಸ್‌ಟೌನ್‌ನ ದೊಡ್ಡಕುಂಟೆ ನಿವಾಸಿ ಅಜಿತ್(೩೫) ಕೊಲೆಯಾದ ಉದ್ಯೋಗಿ. ಹಣಕಾಸಿನ ವ್ಯವಹಾರವೇ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಸಂಬಂಧ ಕೆಲ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ. ಬುಧವಾರ ಮುಂಜಾನೆ, ರಾತ್ರಿ ಪಾಲಿಯ ಕೆಲಸ ಮುಗಿಸಿಕೊಂಡು ಮನೆ ಬಳಿ ಬಂದಾಗ ನಾಲ್ಕೈದು ಮಂದಿ ಹಂತಕರು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಅಜಿತ್ ಪಾಲಕರು ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಕಾಕ್ಸ್‌ಟೌನ್‌ನಲ್ಲಿ ವಾಸವಾಗಿದ್ದರು. ೧೮ ವರ್ಷಗಳ ಹಿಂದೆಯೇ ಅಜಿತ್, ತಂದೆ ೨ನೇ ಮದುವೆಯಾಗಿದ್ದರು. ಅದರಿಂದ ಬೇಸರಗೊಂಡಿದ್ದ ಅಜಿತ್ ಮನೆ ಬಿಟ್ಟು ಬಂದು, ಇದುವರೆಗೂ ಮನೆಗೆ ಹೋಗಿಲ್ಲ. ಅಂದಿನಿಂದ ದೊಡ್ಡಕುಂಟೆಯಲ್ಲಿರುವ ಟೆಂಟ್‌ಹೌಸ್‌ವೊಂದರಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು, ಜತೆಗೆ ವಿದ್ಯಾಭ್ಯಾಸ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಐಟಿಸಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಂಗಳವಾರ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದ ಅಜಿತ್, ಬುಧವಾರ ಬೆಳಗ್ಗೆ ೭ ಗಂಟೆ ಸುಮಾರಿಗೆ ಟೆಂಟ್‌ಹೌಸ್ ಬಳಿ ಬಂದು, ಬಾಗಿಲ ಬೀಗ ತೆಗೆಯುತ್ತಿದ್ದಂತೆ ನಾಲ್ಕೈದು ಮಂದಿ ಹಂತಕರು, ಮಾರಕಾಸ್ತ್ರಗಳಿಂದ ಆತನ ತಲೆ,ಕೈ, ಕಾಲುಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಆತ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಡ್ಡಿ ವ್ಯವಾಹರಕ್ಕೆ ಹತ್ಯೆ ಶಂಕೆ?
ಮೀನಕುಂಟೆ ಬಳಿ ಇರುವ ಐಟಿಸಿ ಬ್ರಾಂಚ್ ಕಂಪನಿಯಲ್ಲಿ ಅಜಿತ್ ಕೆಲಸ ಮಾಡಿಕೊಂಡಿದ್ದ. ಇದರೊಂದಿಗೆ ಕೆಲ ತಿಂಗಳ ಹಿಂದೆ ಮೀಟರ್ ಬಡ್ಡಿ ದಂಧೆಕೋರರ ಬಳಿ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ. ಆದರೆ, ಸರಿಯಾಗಿ ಬಡ್ಡಿ ಹಾಗೂ ಅಸಲು ಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ರಮೇಶ್ ಎಂಬುವರ ಬಳಿ ಹಣ ಪಡೆದುಕೊಂಡಿದ್ದ. ಈತನೊಂದಿಗೆ ಅಜಿತ್‌ಗೆ ೧೫ ದಿನಗಳ ಹಿಂದಷ್ಟೇ ಜಗಳ ನಡೆದಿತ್ತು ಎಂಬುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ, ಅಜಿತ್ ಸ್ನೇಹಿತರು, ಆತನಿಗೆ ಯಾವುದೇ ಹಣದ ಸಮಸ್ಯೆ ಇರಲಿಲ್ಲ. ಹೀಗಾಗಿ ಬಡ್ಡಿಗೆ ಹಣ ಪಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದರಿಂದ ಕೌಟುಂಬಿಕ ಮತ್ತು ಹಣಕಾಸಿನ ವ್ಯವಹಾರ ಎರಡು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೂರ್ವವಿಭಾಗದ ಡಿಸಿಪಿ ಡಿ.ದೇವರಾಜ್, ಪುಲಕೇಶಿನಗರ ಎಸಿಪಿ ಗೀತಾ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net