

ಲಡಾಖ್: ಚೀನಿ ಯೋಧರೊಂದಿಗೆ ಅದರಲ್ಲೂ ಮೇ- ಜೂನ್ ತಿಂಗಳಲ್ಲಿ ನಡೆದ ಮುಖಾಮುಖಿ ಹಾಗೂ ಸಂಘರ್ಷ ಹೇಗಿತ್ತು ಎಂಬುದನ್ನು ಇಂಡೋ- ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರು ತೆರೆದಿಟ್ಟಿದ್ದಾರೆ. ಚೀನಿಯರು ನಿರಂತರ ಕಲ್ಲು ತೂರಾಟ ನಡೆಸುತ್ತಿದ್ದರೆ, ಕೆಲವು ಸ್ಥಳಗಳಲ್ಲಿ 17-20 ತಾಸುಗಳವರೆಗೆ ಮುಖಾಮುಖಿ ನಡೆದಿತ್ತು ಎಂದು ಹೇಳಿದ್ದಾರೆ.
ಮಾರಣಾಂತಿಕ ಸಂಘರ್ಷದ ನಡುವೆಯೂ ಚೀನಿಯರನ್ನು ಹಿಮ್ಮೆಟ್ಟಿಸಿದ 21 ಯೋಧರಿಗೆ ಸ್ವಾತಂತ್ರೋತ್ಸವದ ಶೌರ್ಯ ಪದಕ ಘೋಷಿಸಲಾಗಿದೆ. ಉತ್ತರ ಲಡಾಖ್ ಗಡಿಯಲ್ಲಿ ನಿಯೋಜಿತರಾಗಿದ್ದ ಯೋಧರು, ಪ್ರತಿಕೂಲ ಸನ್ನಿವೇಶದ ನಡುವೆಯೂ ತೋರಿದ ಸಾಹಸ ಹಾಗೂ ಧೈರ್ಯಕ್ಕೆ ಮನ್ನಣೆ ದೊರೆತಿದೆ.
ಗಲ್ವಾನ್ ಕಣಿವೆ ಮಾತ್ರವಲ್ಲದೇ, ಲಡಾಕ್ ಗಡಿಯುದ್ದಕ್ಕೂ ಚೀನಿಯರು ಸದಾ ತಕರಾರು ತೆಗೆಯುತ್ತಲೇ ಇರುತ್ತಾರೆ. ಇಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಸಂಘರ್ಷದ ಹೊರತಾಗಿ ಚೀನಿಯರನ್ನು ಹಿಮ್ಮೆಟ್ಟಿಸಿದ 21 ಯೋಧರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಹಾಗೂ 294 ಜನರಿಗೆ ಪೊಲೀಸ್ ಮಹಾ ನಿರ್ದೇಶಕರ ಪದಕಕ್ಕೆ ಸೂಚಿಸಲಾಗಿತ್ತು ಎಂದು ಐಟಿಬಿಪಿ ಮಹಾ ನಿರ್ದೇಶಕ ಎಸ್.ಎಸ್. ದೇಸ್ವಾಲ್ ಮಾಹಿತಿ ನೀಡಿದ್ದಾರೆ.
ಐಟಿಬಿಪಿ ಪೊಲೀಸರ ಮೇಲೆ ಚೀನಿ ಸೈನಿಕರು ಕಲ್ಲಿನ ದಾಳಿ ನಡೆಸುತ್ತಲೇ ಇರುತ್ತಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಮಾತ್ರವಲ್ಲದೇ, ಅವರಿಗೆ ದಿಟ್ಟ ಪ್ರತ್ಯುತ್ತರವನ್ನು ನೀಡಿದ್ದಾರೆ. ಅತ್ಯಂತ ದಕ್ಷ ವೃತ್ತಿಪರತೆ ಕೌಶಲವನ್ನು ಹೊಂದಿರುವ ಪೊಲೀಸರು, ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ಗಾಯಾಳು ಪೊಲೀಸರನ್ನು ಹೊತ್ತುಕೊಂಡು ಶಿಬಿರಕ್ಕೆ ಮರಳಿದ್ದಾರೆ. ಕೆಲ ಸ್ಥಳಗಳಲ್ಲಿ ಚೀನಿಯರು ಇಡೀ ರಾತ್ರಿ ದಾಳಿ ನಡೆಸಿದ್ದಾರೆ. ಅದಕ್ಕೂ ತಕ್ಕ ಉತ್ತರವನ್ನು ಪೊಲೀಸರು ನೀಡಿದ್ದಾರೆ ಎಂದು ದೇಸ್ವಾಲ್ ತಿಳಿಸಿದ್ದಾರೆ.