300 ವರ್ಷಗಳ ಹಳೆಯ ಚಿತ್ರಕಲೆಗೆ ಸೆಲ್ಫಿ ಕಾಟ! ಸ್ವಂತೀ ಹಾವಳಿಗೆ ಬ್ರೇಕ್​ ಹಾಕಲು ಇಟಲಿ ಮ್ಯೂಸಿಯಂ ಸಜ್ಜು | Italian Museum

ವಿಜಯವಾಣಿ - 2025-06-24T182411.605
Published on

Italian Museum: ಇಟಲಿಯಲ್ಲಿರುವ ಫ್ಲಾರೆನ್ಸ್‌ನ ಪ್ರಸಿದ್ಧ ಉಫಿಜಿ ಗ್ಯಾಲರಿಯಲ್ಲಿನ 300 ವರ್ಷಗಳಷ್ಟು ಹಳೆಯದಾದ ಮಾಸ್ಟರ್​ಪೀಸ್​ ಚಿತ್ರಕಲೆ ಇಂದಿಗೂ ಸಹಸ್ರಾರು ಸಂಖ್ಯೆಯ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ಈ ವಿಶೇಷ ಚಿತ್ರಕಲೆ ಮುಂದೆ ನಿಂತು ತಮ್ಮದೊಂದು ಚೆಂದದ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುವ ಸಂದರ್ಶಕರ ಪೈಕಿ ಓರ್ವ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಎಡವಿ ಬಿದ್ದ ಕಾರಣ ಇದೀಗ ಪೇಂಟಿಂಗ್ ಫ್ರೇಮ್​ ಹಾನಿಯಾಗಿದೆ.

ಈ ಘಟನೆಯು ಮ್ಯೂಸಿಯಂ ಸಿಬ್ಬಂದಿಯ ಜವಾಬ್ದಾರಿಯನ್ನು ಈಗ ಮತ್ತಷ್ಟು ಹೆಚ್ಚಿಸಿದೆ. ಅಮೂಲ್ಯ ಹಾಗೂ ಪ್ರಾಚೀನ ಕಾಲದ ಚಿತ್ರಕಲೆ ಸಂಗ್ರಹವನ್ನು ರಕ್ಷಿಸಿಕೊಳ್ಳಲು ಇದೀಗ ಕಠಿಣ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಚಿಂತಿಸುವಂತೆ ಮಾಡಿದೆ. 1712ರಲ್ಲಿ ಆಂಟನ್ ಡೊಮೆನಿಕೊ ಗಬ್ಬಿಯಾನಿ ರಚಿಸಿದ ಟಸ್ಕನ್ ರಾಜಕುಮಾರ ಫರ್ಡಿನ್ಯಾಂಡೊ ಡಿ ಮೆಡಿಸಿ ಅವರ ಭಾವಚಿತ್ರವಾದ ಈ ಚಿತ್ರಕಲೆ, ಸಂದರ್ಶಕನ ಸೆಲ್ಫಿ ಗೀಳಿಗೆ ಹಾನಿಯಾಗಿದೆ.

ಉಂಟಾಗಿರುವ ಹಾನಿಯನ್ನು ಸರಿಪಡಿಸಬಹುದು ಎಂದು ವಸ್ತುಸಂಗ್ರಹಾಲಯ ಇಲಾಖೆ ಹೇಳಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಮ್ಯೂಸಿಯಂನ ನಿರ್ದೇಶಕಿ ಸಿಮೋನ್ ವರ್ಡೆ, "ಭವಿಷ್ಯದಲ್ಲಿ ಸಂದರ್ಶಕರ ನಡವಳಿಕೆಯ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಠಿಣ ನಿರ್ಬಂಧಗಳನ್ನು ವಿಧಿಸುತ್ತೇವೆ. ಸೋಷಿಯಲ್​ ಮೀಡಿಯಾ ಮೀಮ್‌ ರಚಿಸಲು ಅಥವಾ ಸೆಲ್ಫಿ ತೆಗೆದುಕೊಳ್ಳಲು ವಸ್ತುಸಂಗ್ರಹಾಲಯಗಳಿಗೆ ಬರುವ ಸಂದರ್ಶಕರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಶೀಘ್ರವೇ ಇದಕ್ಕೆ ಕಡಿವಾಣ ಹಾಕುತ್ತೇವೆ" ಎಂದು ಎಚ್ಚರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net