

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಮಾನಸಿಕ ಸ್ಥಿಮಿತ ತಪ್ಪಿದವರಂತೆ ಏನೇನೋ ಬಡಬಡಿಸುತ್ತಿದ್ದಾರೆ. ಕೇಜ್ರಿವಾಲ್ ಮತ್ತೆ ಜೈಲಿಗೆ ಹೋಗಬೇಕಿರುವ ಕಾರಣ ಒಂದಷ್ಟು ದಿನ ರೆಸ್ಟ್ ತೆಗೆದುಕೊಂಡರೆ ಒಳ್ಳೆಯದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯ ವಿಚಾರಿಸಲು ಮಣಿಪಾಲ್ ಆಸ್ಪತ್ರೆಗೆ ಮಾಜಿ ಸಿಎಂ ಬೊಮ್ಮಾಯಿ ಜತೆಗೆ ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿ ಎಂಬ ನಿಯಮವಿಲ್ಲ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಅಂತಹ ತೀರ್ಮಾನ ಕೈಗೊಂಡಿಲ್ಲ. ಅಮಿತ್ ಷಾ ಪ್ರಧಾನಿಯಾಗುತ್ತಾರೆ ಎಂಬ ಅರವಿಂದ ಕೇಜ್ರಿವಾಲ್ ಹೇಳಿಕೆ ಖಂಡಿಸುವೆ ಎಂದರು.
ಅರವಿಂದ ಕೇಜ್ರಿವಾಲ್ ಅವರು ಈಗಷ್ಟೇ ಜೈಲಿಂದ ಹೊರ ಬಂದಿದ್ದು, ಕೂಡಲೇ ಸುಳ್ಳು ಹೇಳಲಾರಂಭಿಸಿದ್ದಾರೆ. ಜೈಲಿನ ವಾಸ, ಕೈದಿಗಳ ಸಹವಾಸದಿಂದ ಮಾನಸಿಕವಾಗಿ ಅಸ್ವಸ್ಥರಾದಂತಿದೆ. ಜನರ ಬಯಕೆಯಂತೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಎಷ್ಟು ನಿಶ್ಚಿತವೋ, ಮುಂದಿನ ಐದು ವರ್ಷ ಪೂರ್ಣಗೊಳಿಸುವುದು ಅಷ್ಟೇ ಖಚಿತ ಎಂದು ಆರ್.ಅಶೋಕ್ ಹೇಳಿದರು.
ಕೇಜ್ರಿವಾಲ್ ಗೆ ಮಾತನಾಡಲು ಬೇರೆ ವಿಷಯವಿಲ್ಲ. ತಮ್ಮ ಹತಾಶೆ, ಕೀಳರಿಮೆ ಮುಚ್ಚಿಕೊಳ್ಳಲು ಗೊಂದಲ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಮೋದಿ ನಾಯಕತ್ವದ ಬಗ್ಗೆ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ದೇಶದ ಜನರ ಅಪೇಕ್ಷೆಯೂ ನಿಚ್ಚಳವಾಗಿದೆ. ಮುಂದಿನ ಐದು ವರ್ಷವೂ ಮೋದಿ ಪ್ರಧಾನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಾರುವ ಮೂಲಕ ಕೇಜ್ರಿವಾಲ್ ಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರ ತೀರ್ಮಾನವಾಗಿದೆ. ಪ್ರತಿ ಕ್ಷೇತ್ರಕ್ಕೆ ತಲಾ ಮೂರು ಹೆಸರುಗಳನ್ನು ಕಳುಹಿಸಲು ಸೂಚಿಸಿದ್ದರು. ಕೇಂದ್ರ ನಾಯಕರ ಮಾರ್ಗಸೂಚಿಯಂತೆ ತಲಾ ಮೂರು ಹೆಸರುಗಳನ್ನು ರಾಜ್ಯ ಸಮಿತಿ ಕಳುಹಿಸಿದೆ. ಇದಕ್ಕಿಂತ ಹೆಚ್ಚಿನ ಜವಾಬ್ದಾರಿಯನ್ನೇನೂ ರಾಜ್ಯ ಸಮಿತಿಗೆ ಕೊಟ್ಟಿದ್ದಿಲ್ಲ ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವಾಗ ಪೈಪೋಟಿ, ಕೈ ತಪ್ಪಿದಾಗ ಅಸಮಾನ ಸಹಜ. ವಸ್ತುಸ್ಥಿತಿ ತಿಳಿದ ಮೇಲೆ ಎಲ್ಲವೂ ಸರಿಹೋಗುತ್ತದೆ. ವರಿಷ್ಠರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಾರೆ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.