ಸಾಲದ ಸುಳಿಯಲ್ಲಿ ಪಾಕ್​! ಯುದ್ಧ ನಡೆದರೆ ಕೆಲವೇ ದಿನಗಳಲ್ಲಿ ದಿವಾಳಿ

ವಿಜಯವಾಣಿ (4)
Published on

ಪಾಕಿಸ್ತಾನ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿದೆ. ಬೆಲೆಯೇರಿಕೆ ಮೀತಿಮೀರಿದೆ. ಸಾಲದ ಹೊರೆ ಹೆಚ್ಚುತ್ತಲೇ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಮರ ಆರಂಭವಾದರೆ ಪಾಕ್ ಕೆಲವೇ ದಿನಗಳಲ್ಲಿ ಸಂಪೂರ್ಣ ದಿವಾಳಿಯಾಗಲಿದೆ ಎಂಬುದು ತಜ್ಞರ ಅಭಿಮತ. ಆದರೂ, ಯುದ್ಧೋತ್ಸಾಹ ತೋರುತ್ತಿರುವ ಪಾಕ್ ಈ ಬಾರಿ ಹಿಂದೆಂದೂ ಕಾಣದ ಸಂಕಷ್ಟಕ್ಕೆ ಸಿಲುಕುವುದು ಖಚಿತ.

| ರವೀಂದ್ರ ಎಸ್. ದೇಶಮುಖ್

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ! ಎಂಬ ಮಾತು ಈಗಿನ ಸನ್ನಿವೇಶದಲ್ಲಿ ಪಾಕಿಸ್ತಾನಕ್ಕೆ ಹೇಳಿ ಮಾಡಿಸಿದಂತಿದೆ. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಿಂದ ತೀವ್ರವಾಗಿ ಹೆಚ್ಚುತ್ತಿರುವ ಹಣದುಬ್ಬರ, ಕುಸಿಯುತ್ತಿರುವ ಷೇರುಪೇಟೆ, ಹೆಚ್ಚುತ್ತಿರುವ ಸಾಲದ ಹೊರೆ ಹೀಗೆ ಹತ್ತುಹಲವು ಆಂತರಿಕ ಸಮಸ್ಯೆಗಳಿಂದ ಹೈರಾಣಾಗಿರುವ ಪಾಕಿಸ್ತಾನ ಭಾರತದ ವಿರುದ್ಧ ಶಸ್ತ್ರಾಸ್ತ್ರ ಝುಳಪಿಸುತ್ತಲೇ ಇದೆ. ಸತತ 10 ದಿನಗಳಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಪೆಹಲ್ಗಾಮ್ ಘಟನೆಯ ನಂತರ ಭಾರತದ ಪ್ರತಿಕ್ರಿಯೆಯನ್ನು ಊಹಿಸಿಯೇ ಪಾಕ್ ಆತಂಕಗೊಂಡಿದೆಯಾದರೂ, ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ ಯುದ್ಧೋನ್ಮಾದದ ಮಾತುಗಳನ್ನಾಡುತ್ತಿದೆ.

ಪಾಕಿಸ್ತಾನದ ಆರ್ಥಿಕತೆ ಎಷ್ಟು ಹೀನಾಯ ಸ್ಥಿತಿಗೆ ತಲುಪಿದೆಯೆಂದರೆ ಹಲವು ರಾಷ್ಟ್ರಗಳು ಸಾಲ ನೀಡಿ ನೀಡಿ ಹೈರಾಣಾಗಿ ಹೋಗಿವೆ. ಹೊಸದಾಗಿ ಸಾಲ ಪಡೆಯಲು ಮಾರ್ಗವೇ ಇಲ್ಲದಂಥ ಸ್ಥಿತಿ ಸೃಷ್ಟಿಯಾಗಿದೆ. ಪಾಕ್​ನಲ್ಲಿ ಈಗ ಹುಟ್ಟುವ ಪ್ರತಿ ಮಗು ತನ್ನ ಮೇಲೆ 86.5 ಸಾವಿರ ರೂ. ಸಾಲದ ಹೊರೆಯನ್ನು ಹೊಂದಿದೆ. ಹೌದು, 2024ರ ಜೂನ್ ವರದಿ ಪ್ರಕಾರ ಪಾಕ್​ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 86.5 ಸಾವಿರ ರೂ. ಸಾಲವಿದ್ದು, ಒಟ್ಟಾರೆ ಸಾಲ 256 ಬಿಲಿಯನ್ ಡಾಲರ್ ಅಂದರೆ 21.6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ತೈಲ, ಗ್ಯಾಸ್​ನ ಆಮದು ಶುಲ್ಕ, ಸಂಬಳ, ಸಬ್ಸಿಡಿಯಂಥ ಸರ್ಕಾರದ ದೈನಂದಿನ ವೆಚ್ಚ ಹೀಗೆ ಪಾಕಿಸ್ತಾನದ ಒಟ್ಟು ಆರ್ಥಿಕತೆ ಸಾಲದಿಂದಲೇ ನಿರ್ವಹಿಸಲ್ಪಡುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಪಾಕ್​ಗೆ ದೊರೆಯುವ ಸಾಲದ ವಿರುದ್ಧವಾಗಿ ಭಾರತ ಮತ ಚಲಾಯಿಸಲು ಚಿಂತನೆ ನಡೆಸಿದ್ದು, ಹೀಗಾದರೆ ಪಾಕ್​ನ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಐಎಂಎಫ್ ಸೇರಿದಂತೆ ಇತರ ದೇಶಗಳು ನೀಡುವ ಸಾಲವನ್ನು ಪಾಕ್ ಡಾಲರ್​ನಲ್ಲಿ ಮರುಪಾವತಿಸಬೇಕು. ಆದರೆ, ಪಾಕ್ ಬಳಿ ಈಗ ಇರುವ ವಿದೇಶಿ ವಿನಿಮಯ ನಿಧಿ 1.3 ಲಕ್ಷ ಕೋಟಿ ರೂ. ಮಾತ್ರ. ಈ ಮೊತ್ತದಲ್ಲಿ ಅದು 3 ತಿಂಗಳ ಆಮದು ಶುಲ್ಕವನ್ನು ಪಾವತಿಸಬಹುದಷ್ಟೇ!

ಚೀನಾದ ಸಹಾಯ ಹಸ್ತ!

ಪಾಕಿಸ್ತಾನಕ್ಕೆ ಸಂಕಷ್ಟದ ಸಮಯದಲ್ಲೆಲ್ಲ ನೆರವಿಗೆ ಧಾವಿಸಿ ಬರುವುದು ಡ್ರಾ್ಯಗನ್ ರಾಷ್ಟ್ರ ಚೀನಾ. ಹಲವು ಸಣ್ಣ ಸಣ್ಣ ರಾಷ್ಟ್ರಗಳನ್ನು ತನ್ನ ಸಾಲದ ಬಲೆಯೊಳಗೆ ಸಿಲುಕಿಸುತ್ತಿರುವ ಚೀನಾ ಅದಕ್ಕೆ ಭಾರಿ ಪ್ರಮಾಣದ ಬಡ್ಡಿಯನ್ನು ವಿಧಿಸುತ್ತದೆ. ಸಣ್ಣರಾಷ್ಟ್ರಗಳು ಇದನ್ನು ಪಾವತಿಸಲು ವಿಫಲವಾದರೆ ಆ ದೇಶದ ದ್ವೀಪಗಳು, ವಿಮಾನನಿಲ್ದಾಣಗಳು ಅಥವಾ ಇತರ ಸ್ವತ್ತುಗಳನ್ನು ಕಬಳಿಸಿಕೊಳ್ಳುತ್ತಿದೆ. ಪಾಕ್​ಗೆ ಈ ವಾಸ್ತವ ಗೊತ್ತಿಲ್ಲ ಎಂದೇನಲ್ಲ. ಆದರೆ, ಚೀನಾದಿಂದ ಅದಕ್ಕೆ ಸುಲಭವಾಗಿ ಸಾಲ ಸಿಗುವುದರಿಂದ ಅದು ಪದೇಪದೆ ಡ್ರ್ಯಾಗನ್ ರಾಷ್ಟ್ರದ ಮುಂದೆ ಮಂಡಿಯೂರುತ್ತದೆ. 2024ರ ಡಿಸೆಂಬರ್​ವರೆಗೆ ಚೀನಾ ಪಾಕಿಸ್ತಾನಕ್ಕೆ 28.7 ಬಿಲಿಯನ್ ಡಾಲರ್ ಅಂದರೆ ಸುಮಾರು 2.42 ಲಕ್ಷ ಕೋಟಿ ರೂ. ಸಾಲ ನೀಡಿದೆ. policy perspectives foundation (ಪಿಪಿಎಫ್) ವರದಿ ಪ್ರಕಾರ 2020-21ರವರೆಗೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಡಿ ಚೀನಾ ಪಾಕಿಸ್ತಾನಕ್ಕೆ ರಸ್ತೆ, ಬಂದರು, ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆಗೆ ದೊಡ್ಡಮೊತ್ತದ ಸಾಲ ನೀಡಿದೆ. ಒಟ್ಟು 433 ಪ್ರೊಜೆಕ್ಟ್​ಗಳಿಗೆ ಪಾಕ್ ಸಾಲ ಪಡೆದಿದೆ.

ಸೌದಿ ಅರೇಬಿಯಾ 2024ರವರೆಗೆ ಪಾಕ್​ಗೆ 9.16 ಬಿಲಿಯನ್ ಡಾಲರ್ (77.2 ಸಾವಿರ ಕೋಟಿ ರೂ.) ಸಾಲ ನೀಡಿದೆ. ಪಾಕ್​ನ ಒಟ್ಟು ಸಾಲದಲ್ಲಿ ಸೌದಿ ಕೊಡುಗೆ ಶೇ.7. ಈ ಪಾಲು 2023ರಲ್ಲಿ 5%ರಷ್ಟಿತ್ತು ಎಂಬುದು ಗಮನಾರ್ಹ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2024ರ ಡಿಸೆಂಬರ್​ವರೆಗೆ ಪಾಕಿಸ್ತಾನಕ್ಕೆ 7.5 ಬಿಲಿಯನ್ ಡಾಲರ್ (64 ಸಾವಿರ ಕೋಟಿ ರೂ.) ಸಾಲ ನೀಡಿದೆ. ಐಎಂಎಫ್​ನಿಂದ ಪಾಕಿಸ್ತಾನ 1958ರಿಂದ 20224ವರೆಗೆ ಒಟ್ಟು 25 ಬಾರಿ ಅಂದರೆ 15 ಬಿಲಿಯನ್ ಡಾಲರ್ ಸಾಲ ಪಡೆದಿದ್ದು, ಈ ಪೈಕಿ ಕೆಲ ಸಾಲವನ್ನು ಮುಟ್ಟಿಸಿದೆ.

ಮುಂದಿದೆ ಸವಾಲು!

ಹೊಸ ಸಾಲ ಪಡೆಯುವುದು ಆ ಮೊತ್ತದಲ್ಲಿ ಹಳೆಯ ಸಾಲದ ಕಂತು ಪಾವತಿಸುವುದು- ಇದು ಪಾಕ್​ನ ಚಾಳಿಯಾಗಿಬಿಟ್ಟಿದೆ. 2025ರ ಜುಲೈವರೆಗೆ ಪಾಕ್ ವಿದೇಶಿ ಸಾಲ ಮತ್ತು ಬಡ್ಡಿ ಸೇರಿ 30.35 ಬಿಲಿಯನ್ ಡಾಲರ್ ಅಂದರೆ 2.56 ಲಕ್ಷ ಕೋಟಿ ರೂ. ಪಾವತಿಸಬೇಕಿದೆ. ಅಂದರೆ, ಈಗ ಅದರ ಬಳಿ ಇರುವ ವಿದೇಶಿ ವಿನಿಮಯ ಮೊತ್ತದ ಎರಡುಪಟ್ಟು! 2029ರ ಹೊತ್ತಿಗೆ 100 ಬಿಲಿಯನ್ ಡಾಲರ್ (8.4 ಲಕ್ಷ ಕೋಟಿ ರೂ.) ವಿದೇಶಿ ಸಾಲ ಮತ್ತು ಬಡ್ಡಿ ಪಾವತಿಸಬೇಕಿದೆ. ವರ್ಷದಿಂದ ವರ್ಷಕ್ಕೆ ಪಾಕ್​ನ ಆರ್ಥಿಕ ಸ್ಥಿತಿ ವಿಷಮವಾಗುತ್ತಿರುವುದನ್ನು ಈ ಅಂಕಿಸಂಖ್ಯೆಗಳು ಸ್ಪಷ್ಟಪಡಿಸುತ್ತವೆ. ಹಾಗಾಗಿ, ಸಾಲ ಮರುಪಾವತಿ ಪಾಕ್​ಗೆ ದೊಡ್ಡ ಸವಾಲಾಗಿದೆ. ಇಂಥ ಸಂದರ್ಭದಲ್ಲಿ ಭಾರತ-ಪಾಕ್ ಸಮರ ಏರ್ಪಟ್ಟರೆ, ಅದರ ಲೆಕ್ಕಾಚಾರಗಳೆಲ್ಲ ಬುಡಮೇಲಾಗಲಿವೆ. ಅದರ ಶಸ್ತ್ರಾಸ್ತ್ರ ಭಂಡಾರ ಕೂಡ ಭಾರತದೆದುರು ಒಂದೇ ವಾರದಲ್ಲಿ ಖಾಲಿಯಾಗಲಿದೆ. ಹಾಗಾಗಿಯೇ, ಅದು ಪದೇಪದೆ ಅಣ್ವಸ್ತ್ರಗಳ ಬೆದರಿಕೆಯನ್ನು ಒಡ್ಡುತ್ತಿದೆ.

ಮೇ 9ರಂದು ಸಭೆ

ಐಎಂಎಫ್ ಮಂಡಳಿಯ ಮಹತ್ವದ ಸಭೆ ಮೇ 9ರಂದು ನಡೆಯಲಿದ್ದು, ಪಾಕಿಸ್ತಾನಕ್ಕೆ 10.9 ಸಾವಿರ ಕೋಟಿ ರೂ. ಸಾಲ ನೀಡುವ ಬಗ್ಗೆ ಪರಾಮರ್ಶೆ ನಡೆಯಲಿದೆ. ಮೂಲಗಳ ಪ್ರಕಾರ, ಭಾರತ ಭಯೋತ್ಪಾದನೆಯ ವಿಷಯವನ್ನು ಪ್ರಸ್ತಾಪಿಸಿ, ಪಾಕ್​ಗೆ ಹೊಸ ಸಾಲ ನೀಡುವುದನ್ನು ಸಭೆಯಲ್ಲಿ ವಿರೋಧಿಸಲಿದೆ.

ಜಿಡಿಪಿ

ದೇಶ ವರ್ಷ ಜಿಡಿಪಿ ಮೊತ್ತ

ಭಾರತ 2014 -173 ಲಕ್ಷ ಕೋಟಿ ರೂ.

ಪಾಕಿಸ್ತಾನ 2014 -22.8 ಲಕ್ಷ ಕೋಟಿ ರೂ.

ಭಾರತ 2024 -330 ಲಕ್ಷ ಕೋಟಿ ರೂ.

ಪಾಕಿಸ್ತಾನ 2024 -31.5 ಲಕ್ಷ ಕೋಟಿ ರೂ.

ಐಟಿ ರಫ್ತಿನಲ್ಲಿ ಮುಂದು!

ಜಗತ್ತಿನಲ್ಲಿ ಭಾರತ ಐಟಿ ಹಬ್ ಎಂದೇ ಖ್ಯಾತವಾಗಿದ್ದು, ನಮ್ಮ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿರುವಾಗ ಅತ್ತ ಪಾಕಿಸ್ತಾನವೂ ಐಟಿ ರಫ್ತಿನಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಅದು ಇನ್ಪಾರ್ವೇಶನ್ ಆಂಡ್ ಟೆಕ್ನಾಲಜಿ ಅಲ್ಲ! ಇಂಟರ್​ನ್ಯಾಶನಲ್ ಟೆರರಿಜಂ (ಐಟಿ). ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಭಯೋತ್ಪಾದನೆ ರಫ್ತು ಮಾಡುತ್ತಿರುವ ಪಾಕ್ ಆ ಪಾಪಕಾರ್ಯವನ್ನು ಇತ್ತೀಚೆಗೆ ಬಹಿರಂಗವಾಗಿ ಒಪ್ಪಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದೆದುರು ಬೆತ್ತಲಾಗಿದೆ.

ಭಯೋತ್ಪಾದನೆ ರಫ್ತು, ಭಯೋತ್ಪಾದಕರಿಗೆ ಆಶ್ರಯ, ಭಯೋತ್ಪಾದಕ ಸಂಘಟನೆಗಳಿಗೆ ನೆರವುಗಳಂಥ ಕುಕೃತ್ಯಗಳಿಂದಲೇ ಕುಖ್ಯಾತಿ ಗಳಿಸಿ, ಈಗ ಯುದ್ಧಭೀತಿ ಎದುರಿಸುತ್ತಿರುವ ಪಾಕ್ ಪೆಹಲ್ಗಾಮ್ ದಾಳಿ ನಂತರ ಥರಗುಟ್ಟಿದೆ. ಭಾರತ ಪ್ರತೀಕಾರ ತೆಗೆದುಕೊಳ್ಳದೆ ಹಿಂದಡಿ ಇಡುವುದಿಲ್ಲ ಎಂದು ಖಾತ್ರಿ ಆಗುತ್ತಿರುವಂತೆ ಅದು ರಕ್ಷಣೆಗಾಗಿ ಮತ್ತೆ ಚೀನಾಕ್ಕೆ ದುಂಬಾಲು ಬಿದ್ದಿದೆ. ಆದರೆ, ಭಾರತಕ್ಕೆ ಅಂತಾರಾಷ್ಟ್ರೀಯ ವಲಯದ ಬೆಂಬಲವಿದ್ದು, ಅಮೆರಿಕ, ರಷ್ಯಾ, ಇಸ್ರೇಲ್​ನಂಥ ಶಕ್ತಿಶಾಲಿ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಕೈಜೋಡಿಸುವುದಾಗಿ ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net