ಇರಬೇಕು, ಇರದಿರಬೇಕು... ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ!

Ramakrishna Paramahamsa
Published on
ಈ ಜಗತ್ತಿನಲ್ಲಿ ಹೇಗೆ ಇರಬೇಕು? ಈ ಪ್ರಶ್ನೆಗೆ ಸಾಧು-ಸಂತರು, ಮಹಾತ್ಮರು, ಯತಿಶ್ರೇಷ್ಠರು ನಾನಾ ವಿಧದಲ್ಲಿ ತಿಳಿಸಿದ್ದಾರೆ. ದಾಸವರೇಣ್ಯರಂತೂ ‘ಇರಬೇಕು, ಇರದಿರಬೇಕು, ಸಂಸಾರಾದಿ ಜನಕಾದಿ ರಾಜ ಋಷಿಗಳಂತೆ’ ಎಂದೆಲ್ಲ ವಿವರಿಸಿದ್ದಾರೆ. ಮತ್ತೊಂದೆಡೆ ‘ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ! ಆ ಕ್ಷಣದಲ್ಲಿ ಹಾರಿ ಹೋದಂತೆ...’ ಎಂದಿದ್ದಾರೆ. ನಿಜ! ಈ ಸಂಸಾರದಲ್ಲಿ ಹೇಗೆ ಇರಬೇಕು ಎಂಬುದರ ಅರಿವು ಬಂತೆಂದರೆ ಅವನೇ ಸುಖಿ! ಪ್ರತಿಯೊಬ್ಬರಿಗೂ ಸಂಸಾರದಲ್ಲಿರಬೇಕು, ಆನಂದ, ಸಂತೋಷ, ಸುಖ-ಭೋಗಗಳ ವರ್ತಲದಲ್ಲಿ ಸುತ್ತುತ್ತಲೇ ಇರಬೇಕು ಎಂಬಾಸೆ. ಇಂತಹ ಜನರಿಗೆ ಅತ್ಯಂತ ಸುಲಭವಾಗಿ, ಮನಸ್ಸಿಗೆ ಆಘಾತವಿಲ್ಲದೆ ಸರಳ ಉಪಾಯಗಳನ್ನು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ವಚನವೇದದಲ್ಲಿ ಬಾರಿ ಬಾರಿಗೂ ತಿಳಿಯಪಡಿಸುತ್ತಾರೆ. ಸಂಸಾರದಲ್ಲಿರುವವರಿಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆಯೇ? ಎಂಬ ಪ್ರಶ್ನೆಗೆ ಅವರ ಉತ್ತರವಿದು: ಏಕೆ ದೊರೆಯುವುದಿಲ್ಲ? ಕೆಸರು ಮೀನಿನ ಹಾಗೆ ಇರಿ.

ಅದು ಕೆಸರಿನಲ್ಲೇನೋ ವಾಸಿಸುತ್ತದೆ. ಆದರೆ ಅದು ತನ್ನ ಶರೀರಕ್ಕೆ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ಭಗವಂತನಲ್ಲಿ ಮನಸ್ಸಿಟ್ಟು ಸಂಸಾರದಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ನೆರವೇರಿಸಿ. ಆದರೆ ಅದು ಬಹಳ ಕಠಿಣವೇನೋ ನಿಜ. ನಾನು ಒಮ್ಮೆ ಭಕ್ತರ ಸಮೂಹಕ್ಕೆ ತಿಳಿಸಿದೆ; ಯಾವ ಕೊಠಡಿಯಲ್ಲಿ ಹುಣಸೆಕಾಯಿಯ ಉಪ್ಪಿನಕಾಯಿ, ನೀರಿನ ಹಂಡೆ ಇರುತ್ತದೆಯೋ, ಅದೇ ಕೊಠಡಿಯಲ್ಲಿ ವಿಷಮಶೀತ ಜ್ವರದ ರೋಗಿ ಮಲಗಿದ್ದಾನೆ ಅಂತ ಇಟ್ಟುಕೊಳ್ಳಿ, ಆತನನ್ನು ರೋಗ ಹೇಗೆ ಬಿಟ್ಟು ತೊಲಗಬೇಕು ಹೇಳಿ? ಹುಣಸೇಕಾಯಿಯ ಉಪ್ಪಿನಕಾಯಿ ಭಾವನೆಯೇ ಸಾಕು, ಬಾಯಲ್ಲಿ ನೀರೂರಬೇಕಾದರೆ ... ರೋಗಿ ಹೇಳುತ್ತಾನೆ, ಒಂದು ಹಂಡೆಯ ನೀರನ್ನೇ ಕುಡಿದುಬಿಡುತ್ತೇನೆ, ಎಂದು. ಮನಸ್ಸನ್ನು ತಡೆದುಕೊಳ್ಳುವುದು ಕಠಿಣ ... ಅಕ್ಕಸಾಲಿಗ ಚಿನ್ನ ಕರಗಿಸಿ ಒಡವೆ ಮಾಡುತ್ತಾನೆ. ಹಾಗೆ ಕರಗಿಸುವಾಗ ಅನೇಕರು ಆತನನ್ನು ಕರೆಯುತ್ತಲೇ ಇದ್ದರೆ, ಆತ ಚಿನ್ನವನ್ನು ಕರಗಿಸುವ ಬಗೆ ಹೇಗೆ? ಹೀಗೆ ಅತ್ಯಂತ ಸರಳವಾಗಿ, ಪ್ರಾಪಂಚಿಕ ಆಕರ್ಷಣೆಗೆ ವಿಚಲಿತನಾಗದೆ ಜೀವನದ ಸಾಫಲ್ಯ ಪಡೆಯಬಹುದು ಎಂದು ಬೋಧಿಸುತ್ತಿದ್ದರು ಪರಮಹಂಸರು.

ಭಗವತ್ಪ್ರೇಮ ಎಂಬುದನ್ನು ಸರಿಯಾಗಿ ಗ್ರಹಿಸಿ ಭಗವಂತನನ್ನು ಪ್ರೀತಿಸಲು ಆರಂಭಿಸಿದರೆ ಸಾಂಸಾರಿಕ ಆಸೆ ಆಕಾಂಕ್ಷೆಗಳು ತಾನೇ ತಾನಾಗಿಯೇ ದೂರವಾಗುತ್ತಾ ಬರುತ್ತವೆ- ಹೇಗೆ ಉತ್ತರ ದಿಕ್ಕಿಗೆ ನಡೆಯುತ್ತ ಹೋದಲ್ಲಿ ದಕ್ಷಿಣ ದಿಕ್ಕು ತಾನೇ ತಾನಾಗಿ ದೂರವಾಗುತ್ತಾ ಬರುತ್ತದೆಯೋ ಹಾಗೆ. ಪರಮಹಂಸರ ಪ್ರಕಾರ ಅಹರ್ನಿಶಿ ಭಗವಂತನನ್ನು ಪಡೆಯಲು ಹೃದಯ ತವಕಿಸಬೇಕು. ಹಾಗೆಂದಾಕ್ಷಣಕ್ಕೆ ಸಂಸಾರ ತ್ಯಜಿಸಬೇಕೆಂದಲ್ಲ, ಸಂಸಾರ ಕಾರ್ಯಗಳಲ್ಲಿ ನಿರತನಾಗಿದ್ದಾಗ್ಯೂ ಅಂತಃಕರಣ, ಅಂತರಂಗದಲ್ಲಿ ಆ ದಿವ್ಯ ಸ್ವರೂಪವನ್ನು ನೆನೆಯುತ್ತಾ ಪ್ರಾಪಂಚಿಕ ಕರ್ತವ್ಯಗಳನ್ನು ಪರಿಪಾಲಿಸಬೇಕು.

ಇನ್ನೊಂದು ಉದಾಹರಣೆ: ನೀರಿನ ಮೇಲೆ ದೋಣಿ ಇರಬೇಕು, ಒಂದು ವೇಳೆ ನೀರು ತುಂಬಾ ಚೆನ್ನಾಗಿದೆ ಎಂದೆಣಿಸಿ ಅದೇ ನೀರನ್ನು ದೋಣಿಯಲ್ಲಿ ತುಂಬಿಸಬಾರದು, ತುಂಬಿಸಿದಲ್ಲಿ ದೋಣಿ ಮುಳುಗುತ್ತದೆ. ಅದೇ ರೀತಿ ಸಂಸಾರದಲ್ಲಿದ್ದಾಗ್ಯೂ ಸಂಸಾರವನ್ನು ಮನಸ್ಸಿನಲ್ಲಿ ತುಂಬಿಸಿರಬೇಕಿಲ್ಲ! ಈ ಸೂಕ್ಷ್ಮಾತಿಸೂಕ್ಷ್ಮ ಉದಾಹರಣೆಯಿಂದ ಸಂಸಾರದಲ್ಲಿ ಹೇಗಿರಬೇಕು? ಎಂಬುದನ್ನು ಅತ್ಯಂತ ಸರಳವಾಗಿ, ಸೂಕ್ಷ್ಮವಾಗಿ ರಾಮಕೃಷ್ಣರು ಭೋಧಿಸುತ್ತಾರೆ. ಮತ್ತೊಂದು ಸಲ ಹೀಗೆ ತಿಳಿಸುತ್ತಾರೆ: ಚಿಮಣಿಯನ್ನು ಶುದ್ಧಿ ಮಾಡಿಸಲು ಚಿಮಣಿಯಲ್ಲಿ ಇಳಿದಾಗ ಯಾರು ಎಷ್ಟೇ ಜಾಗೃತರಾಗಿದ್ದಾಗ್ಯೂ ಒಂದಿನಿತು ಮಸಿ ಖಂಡಿತಾ ತಟ್ಟುತ್ತದೆ.ಆದಾಗ್ಯೂ ಅತ್ಯಂತ ಎಚ್ಚರಿಕೆಯಿಂದ ಚಿಮಣಿಯನ್ನು ಶುದ್ಧೀಕರಿಸುವ ಕಾರ್ಯ ನಡೆಸಬೇಕಾಗುತ್ತದೆ. ಇದೇ ಸಂಸಾರದ, ಪ್ರಾಪಂಚಿಕದ ಒಂದು ಎಚ್ಚರಿಕೆಯ ನಿಯಮ.

ಪ್ರಾಪಂಚಿಕದಲ್ಲಿದ್ದಾಗ್ಯೂ ಪ್ರಪಂಚದ ಕಲೆ ಸ್ವಲ್ಪವೂ ಇರದೆ ಶುದ್ಧವಾದ ಆಧ್ಯಾತ್ಮಿಕ ಜೀವನ ನಡೆಸಿದ ಶುಕ, ಸನಕಾದಿ ಮಹರ್ಷಿಗಳು, ಜನಕಾದಿ ರಾಜಋಷಿಗಳು ನಮಗೆ ಮಾದರಿಯಾಗುತ್ತಾರೆ. ಜನಕ ಮಹಾರಾಜನ ಉಕ್ತಿ ‘ಮಮ ಕಿಂಚಿತ್ ದಹೃತೆ’- ಇಂದಿಗೂ ಸಾಧಕರಿಗೆ ಸ್ಪೂರ್ತಿ ನೀಡುವ ಮಂತ್ರ. ಹಾಗಾದರೆ ಏನು ಮಾಡಿದರೆ ಭಗವದ್

ಕೃಪೆಯಾಗುತ್ತದೆ? ರಾಮಕೃಷ್ಣರ ಉತ್ತರ ಹೀಗಿದೆ: ಭಗವಂತನ ನಾಮಗುಣಕೀರ್ತನೆ ಸರ್ವದಾ ಮಾಡುತ್ತಿರಬೇಕು. ಪ್ರಾಪಂಚಿಕ, ವಿಷಯ ಚಿಂತನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತ್ಯಜಿಸಬೇಕು. ನೀನು ಬೆಳೆ ಬೆಳೆಯಲು ಬಹಳ ಶ್ರಮ ವಹಿಸಿ ಗದ್ದೆಗೆ ನೀರು ತರಬಹುದು. ಆದರೆ ಬಿಲಗಳ ಮೂಲಕ ನೀರೆಲ್ಲಾ ಹೊರಕ್ಕೆ ಹರಿದು ಹೋಗಿಬಿಡುತ್ತದೆ ಅಂತ ಇಟ್ಟುಕೋ, ಆಗ ನಾಲೆ ತೋಡಿ ನೀರು ತಂದದ್ದೆಲ್ಲಾ ಸಂಪೂರ್ಣ ವ್ಯರ್ಥ ಪರಿಶ್ರಮ ಅಲ್ಲವೇ? ಹಾಗೆಯೇ ಚಿತ್ತ ಶುದ್ಧಿ ಅತ್ಯಂತ ಮುಖ್ಯ.

ಪರಮಹಂಸರ ಪ್ರಕಾರ ಚಿತ್ತ ಶುದ್ಧಿಯಾಯಿತು ಎಂದರೆ ವಿಷಯಾಸಕ್ತಿ, ಪ್ರಾಪಂಚಿಕ ಆಸೆ ಲಾಲಸೆಗಳು ಹೊರಟು ಹೋಗಿರುತ್ತದೆ. ಅಂದರೆ, ವ್ಯಾಕುಲತೆಯುಂಟಾಗುತ್ತದೆ. ಆಗ ಮಾತ್ರವೇ ನಿನ್ನ ಪ್ರಾರ್ಥನೆ ಭಗವಂತನಿಗೆ ಮುಟ್ಟುತ್ತದೆ. ಮೊದಲು ವ್ಯಾಕುಲತೆಯನ್ನು ಪಡೆಯಬೇಕು. ಭಗವಂತನನ್ನು ಪ್ರೀತಿಸಬೇಕು, ಅಗಾಧ ಭಗವತ್ ಪ್ರೀತಿ ಉಂಟಾಯಿತು ಎಂದರೆ, ಭಗವದ್ದರ್ಶನ ಖಂಡಿತಾ ದೊರೆಯುತ್ತದೆ. ಇದೇ ಸಂಸಾರದಲ್ಲಿದ್ದುಕೊಂಡು ಭಗವದ್ ದರ್ಶನ ಪಡೆಯುವ ಸನ್ಮಾರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net