

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ವಾರ ಇರುವಂತೆ ಗುರುವಾರ ರಾಜ್ಯದ ವಿವಿಧೆಡೆ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಆಡಳಿತಾರೂಢ ಬಿಜೆಪಿಯನ್ನು ಧರ್ಮಸಂಕಟಕ್ಕೆ ಸಿಲುಕಿಸಿದೆ. ಈ ದಾಳಿಯ ಹಿಂದಿರುವ ಮಗ್ಗುಲುಗಳ ಬಗ್ಗೆ ರಾಜಕೀಯ ಚಾವಡಿಯಲ್ಲಿ ಚರ್ಚೆ ಶುರುವಾಗಿರುವುದೇ ಇದಕ್ಕೆ ಕಾರಣ.
ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಂಗಳೂರಿನಲ್ಲಿ ಭರ್ಜರಿ ಬೇಟೆಯಾಡಿ ಸರ್ಕಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಮತ್ತು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯ ಸ್ಥಿರ-ಚರಾಸ್ತಿಯನ್ನು ಜಾಲಾಡಿದ್ದಾರೆ. ದಾಯ ತೆರಿಗೆ ಇಲಾಖೆಯಿಂದ ದಾಳಿ ಕುರಿತಂತೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ, ಈ ದಾಳಿಯ ಬಗೆಗೆ ಮತ್ತು ದಾಳಿಯ ಕಾರಣಗಳ ಬಗ್ಗೆ ಒಂದಷ್ಟು ಚರ್ಚೆ ನಡೆದಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಉದ್ದೇಶದಿಂದ ಈ ರೀತಿ ದಾಳಿ ನಡೆಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿದೆ. ಅಂತಹ ಚರ್ಚೆ ಬಿಜೆಪಿಯನ್ನು ಮುಜುಗರಕ್ಕೆ ತಳ್ಳಿದೆ. ಪ್ರತಿಪಕ್ಷಕ್ಕೆ ಆಹಾರವಾಗುವಂತಹ ಅಸ್ತ್ರವನ್ನು ಸ್ವತಃ ಕೊಡುವುದು ಕೋಲುಕೊಟ್ಟು ಹೊಡೆದುಕೊಂಡಂತೆ. ಅಲ್ಲದೇ ಉದ್ದೇಶಪೂರ್ವಕ ದಾಳಿಯೇ ಆಗಿದ್ದರೆ ಉಪ ಚುನಾವಣೆಯಲ್ಲಿ ಖಂಡಿತ ಪರಿಣಾಮ ಬೀರಲಿದೆ ಎಂಬ ಮಾತುಗಳು ಪಕ್ಷದಲ್ಲೇ ಕೇಳಿಬಂದಿದೆ. ಜತೆಗೆ ಆಂಧ್ರ ಹಾಗು ಕರ್ನಾಟಕ ಗುತ್ತಿಗೆದಾರರ ನಡುವಿನ ಕಿತ್ತಾಟವೂ ಈ ದಾಳಿಗೆ ಕಾರಣವಿರಬಹುದೆಂಬ ಒಂದು ವಾದವಿದ್ದರೆ, ಈ ಹಿಂದೆ ಸಚಿವ ಸಂಪುಟದಲ್ಲಿದ್ದು ನಂತರ ವಿವಿಧ ಕಾರಣಗಳಿಂದ ಸಚಿವ ಸ್ಥಾನದಿಂದ ಕೈಬಿಡಲ್ಪಟ್ಟವರು ಹತಾಶೆಯಿಂದ ಕೊಟ್ಟ ದೂರು ಕೆಲಸ ಮಾಡಿದೆ ಎಂಬ ವ್ಯಾಖ್ಯಾನವೂ ಇದೆ.
ದಾಳಿಗೆ ಕಾರಣ: ರಾಜಕೀಯ ಮಹತ್ವ ಪಡೆದುಕೊಂಡಿರುವ ಪ್ರಕರಣದಲ್ಲಿ ತೀವ್ರ ವಿವಾದಕ್ಕೆ ತುತ್ತಾಗಿದ್ದ ಕರ್ನಾಟಕ ನೀರಾವರಿ ನಿಗಮದಲ್ಲಿ ಸುಮಾರು 20 ಸಾವಿರ ಕೋಟಿ ಯೋಜನೆ ಅನುಷ್ಠಾನ ಲೆಕ್ಕದಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎನ್ನಲಾಗಿದ್ದು ಈ ದಾಳಿಗೆ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಉಮೇಶ್ ಮನೆ ಮೇಲೆ ಐಟಿ ದಾಳಿ ವೇಳೆ ಇವರ ಮನೆ ಮುಂದೆ ಕೊಪ್ಪಳದ ಪಾಸಿಂಗ್ ಹೊಂದಿರುವ ಇನ್ನೋವಾ ಕ್ರಿಸ್ಟಾ ಕಾರು ಪತ್ತೆಯಾಗಿದೆ. ಮುನಿರಾಬಾದನ ತುಂಗಭದ್ರಾ ನೀರಾವರಿ ವಲಯ ಕಚೇರಿಗೆ ಸೇರಿದ ಕಾರು ಇದಾಗಿದ್ದು, ಉಮೇಶ್ ಓಡಾಟಕ್ಕೆ ಈ ಕಾರು ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ.
50 ಸ್ಥಳಗಳ ಮೇಲೆ ದಾಳಿ: ಗುರುವಾರ ರಾಜ್ಯದ ವಿವಿಧೆಡೆ 300 ಜನ ಐಟಿ ಅಧಿಕಾರಿಗಳು ಗುತ್ತಿಗೆದಾರರು, ಚಾರ್ಟೆಡ್ ಅಕೌಂಟೆಂಟ್ ಗಳು ಒಳಗೊಂಡಂತೆ ಸುಮಾರು 30 ಮಂದಿಗೆ ಸೇರಿದ 50ಕ್ಕೂ ಅಧಿಕ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದರು.
ನೀರಾವರಿ ಇಲಾಖೆಯ ಟೆಂಡರ್ ಒಂದರ ವಿಚಾರವಾಗಿ ತಮಗೆ ಬಂದ ಸುಳಿವಿನ ಆಧಾರದ ಮೇಲೆ ಐಟಿ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ ಗುತ್ತಿಗೆದಾರರು, ಪ್ರಭಾವಿ ರಾಜಕಾರಣಿಗಳ ಆಪ್ತರು ಟೆಂಡರ್ ನಲ್ಲಿ ಕೋಟಿ-ಕೋಟಿ ರೂ. ಅಕ್ರಮವಾಗಿ ಸಂಪಾದಿಸಿ ತೆರಿಗೆ ವಂಚಿಸಿರುವುದು ಪತ್ತೆಯಾಗಿತ್ತು. ಜತೆಗೆ ಅವ್ಯವಹಾರ ನಡೆಸಿ ಕೋಟ್ಯಂತರ ರೂ. ತೆರಿಗೆ ವಂಚಿಸಿರುವುದಕ್ಕೆ ಕೆಲ ಸಾಕ್ಷ್ಯಗಳು ಸಿಕ್ಕಿತ್ತು. ಇದರ ಬೆನ್ನಲ್ಲೇ ಬೆಂಗಳೂರು, ಕೊಪ್ಪಳ, ಬಾಗಲಕೋಟೆ ಸೇರಿ ರಾಜ್ಯಾದ್ಯಂತ ಗುತ್ತಿಗೆದಾರರು, ಸಿಎಗಳು, ಪ್ರಭಾವಿ ರಾಜಕಾರಣಿಗಳ ಆಪ್ತರು ಸೇರಿ 20ಕ್ಕೂ ಅಧಿಕ ಜನರ ಮನೆ, ಕಚೇರಿ ಸೇರಿ 50 ಕಡೆಗಳಲ್ಲಿ 300 ಮಂದಿ ಐಟಿ ಅಧಿಕಾರಿಗಳು 120 ಇನ್ನೋವಾ ಕಾರಿನಲ್ಲಿ ಬಂದು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಗುತ್ತಿಗೆದಾರರಿಗೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ, ಕಂತೆ-ಕಂತೆ ನೋಟುಗಳು, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ, ಐಟಿ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿಲ್ಲ. ದಾಳಿ ವೇಳೆ ಪತ್ತೆಯಾದ ದಾಖಲೆಗಳನ್ನು ಐಟಿ ತಂಡ ಪರಿಶೀಲಿಸುತ್ತಿದೆ.
ಚಾಲಕನಿಂದ ಕೋಟ್ಯಧಿಪತಿವರೆಗೆ: ಅಂದಹಾಗೆ, ದಾಳಿಯ ಕೇಂದ್ರಬಿಂದು ಉಮೇಶ್ ಬೆಂಗಳೂರು ಮಹಾನಗರ ಸಾರಿಗೆ ಬಸ್ ನ ಕಂಡೆಕ್ಟರ್ ಕಂ ಡ್ರೖೆವರ್ ಆಗಿದ್ದವರು. 2007-08ನೇ ಸಾಲಿನ ನೇಮಕಾತಿಯಲ್ಲಿ ಬಿಎಂಟಿಸಿ ಉದ್ಯೋಗಿಯಾಗಿ ಸೇರಿದ ಅವರು, ಟ್ರೖೆನಿಯಾಗಿ ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಎರವಲು ಸೇವೆಗೆ ಅರ್ಜಿ ಸಲ್ಲಿಸಿದ್ದರು. 2008ರಲ್ಲಿ ಎರವಲು ಸೇವೆಯಡಿ ಬಿಎಂಟಿಸಿಯಿಂದ ಶಕ್ತಿಸೌಧದತ್ತ ಪಯಣ ಬೆಳೆಸಿದ್ದರು. ಅಂದು ಉಮೇಶ್ ವೇತನ ತಿಂಗಳಿಗೆ 3,500 ರೂ.ಇತ್ತು. ಬಳಿಕ ಒಂದೇ ವರ್ಷಕ್ಕೆ ಟ್ರೖೆನಿಯಿಂದ ಪೊ›ಬೆಷನರಿಯಾಗಿ ಬಡ್ತಿ ಪಡೆದು, ಮಾಸಿಕ 18 ಸಾವಿರ ರೂ. ವೇತನ ಪಡೆಯುತ್ತಿದ್ದರು. ಪ್ರಸ್ತುತ ವೇತನ ತಿಂಗಳಿಗೆ 30 ರಿಂದ 32 ಸಾವಿರ ರೂ. ಇದೆ. ವೇತನ ಇಷ್ಟು ಕಡಿಮೆ ಇದ್ದರೂ ಕೋಟಿ-ಕೋಟಿ ಮೌಲ್ಯದ ಆಸ್ತಿ ಹೊಂದಿರುವುದು ಹೇಗೆ ? ಎಂಬುದು ಅಚ್ಚರಿ ಮೂಡಿಸಿದೆ.
ಸಹಕಾರ ನಗರದಲ್ಲಿ ಕೋಟ್ಯಂತರ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದಾರೆ, ಬಾಗಲಗುಂಟೆಯಲ್ಲಿ ಸೈಟ್ ಗಳಿವೆ. ನೆಲಮಂಗಲದಲ್ಲಿ ಜಮೀನು, ಬಿಡಿಎದಲ್ಲಿ ಅನೇಕ ಸೈಟ್ ಗಳು ಮಂಜೂರಾಗಿವೆ ಎಂದು ಹೇಳಲಾಗಿದ್ದು, ಆದಾಯ ತೆರಿಗೆ ಇಲಾಖೆ ಈ ವರೆಗೆ ಸ್ಪಷ್ಟನೆ ನೀಡಿಲ್ಲ.
ಉಮೇಶ್ ಸಹೋದರ ಪಿಡಿಒ ಮಾಲತೇಶ, ಸ್ನೇಹಿತ ಅರವಿಂದ್, ಮತ್ತೊಬ್ಬ ಸಹ ಪಿಎ ಪ್ರಸನ್ನ ಹಾಗೂ ಕುಟುಂಬಸ್ಥರಿಗೆ ಐಟಿ ಕಂಟಕ ಎದುರಾಗಲಿದೆ. ಭಾಷ್ಯಂ ಸರ್ಕಲ್ ನಲ್ಲಿ ಉಮೇಶ್ 10 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದಾರೆ. ಇಷ್ಟು ಚಿಕ್ಕ ಮನೆಗೇ ಭಾರೀ ಪ್ರಮಾಣದ ಸರ್ಕಾರಿ ಭದ್ರತೆ ಹಾಕಿಸಿಕೊಂಡಿದ್ದರು, ಇದೂ ಕೂಡ ಈಗ ಚರ್ಚೆಗೆ ಬಂದಿದೆ. ಬಿಎಸ್ ವೈ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು.