

ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಪ್ತ ಎಂ.ಸಿ.ವೇಣುಗೋಪಾಲ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಜೆ.ಪಿ ನಗರದಲ್ಲಿರುವ ವೇಣುಗೋಪಾಲ್ ಅವರ ಮನೆ ಮೇಲೆ 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆದಾಯ ತೆರಿಗೆ ಪಾವತಿಸದ ಆರೋಪದಡಿ ಈ ದಾಳಿ ನಡೆಸಲಾಗಿದೆ. 3 ಇನ್ನೋವಾ ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೇ ದಾಳಿ ನಡೆಸಿ, ವಿವಿಧ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಮನೆಯಲ್ಲೇ ಇದ್ದ ವೇಣುಗೋಪಾಲ್ ಅಧಿಕಾರಿಗಳ ಕಾರ್ಯಾಚರಣೆಗೆ ಸಹಕರಿಸಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ದಾಳಿಯ ವೇಳೆ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರಾದ ಡಾ.ಜಿ ಪರಮೇಶ್ವರ್ ಜಮೀರ್ ಅಹ್ಮದ್ ಖಾನ್ ಹಾಗೂ ಕೆ.ಎನ್ ರಾಜಣ್ಣ ಅವರಿಗೆ ಎಂ.ಸಿ.ವೇಣುಗೋಪಾಲ್ ಆಪ್ತರಾಗಿದ್ದಾರೆ.