ಕಾವೇರಿ ನೀರು ಹರಿಸಿದ್ದು ಅಕ್ಷಮ್ಯ

kaveri
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರುನಾಡು ಸಂರಕ್ಷಣಾ ವೇದಿಕೆ ಪ್ರಮುಖರು ಪ್ರತಿಭಟನೆ ನಡೆಸಿದರು. ಸಿ.ಮೂರ್ತಿ, ಎಸ್.ಪಿ.ಶಿವಮೂರ್ತಿ, ಕೂಡ್ಲು ಶ್ರೀಧರ್, ಎಂ.ಮಂಜುನಾಥ್, ಎಸ್.ಪಿ.ಶಿವಣ್ಣ ಮುಂತಾದವರಿದ್ದರು.
Published on

ಶಿವಮೊಗ್ಗ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರುನಾಡು ಸಂರಕ್ಷಣಾ ವೇದಿಕೆ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಕಾಲದಲ್ಲಿ ಮಳೆ ಬಾರದ ಕಾರಣ ರೈತರು ಆತಂಕದಲ್ಲಿದ್ದಾರೆ. ಕಾವೇರಿ ಅಚ್ಚುಕಟ್ಟು ಭಾಗಕ್ಕೆ ಮುಂಗಾರು ಹಂಗಾಮಿಗೆ ನೀರು ಸಿಗದ ಸ್ಥಿತಿಯಿದೆ. ಈ ರೈತರ ಹಿತ ಕಾಯುವುದನ್ನು ಬಿಟ್ಟು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿರುವುದು ಅಕ್ಷಮ್ಯ. ರಾಜ್ಯ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಮೂಲವೇ ಕಾವೇರಿ. ಮುಂದಿನ ದಿನಗಳಲ್ಲಿ ಮಳೆ ಸುರಿದು ಕೆಆರ್‌ಎಸ್ ಭರ್ತಿಯಾಗದೇ ಇದ್ದರೆ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೂ ತತ್ವಾರವಾಗಲಿದೆ. ಒಂದು ಕಡೆ ಬರ ಪರಿಸ್ಥಿತಿ ನಿರ್ವಹಣೆಗೆ ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡುವ ಸಿಎಂ ಸಿದ್ದರಾಮಯ್ಯ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸುವ ತೀರ್ಮಾನ ಕೈಗೊಂಡಿರುವುದೇ ವಿಪರ್ಯಾಸ ಎಂದರು.
ಮುಂದೆ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು. ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಮಿತ್ರಪಕ್ಷವನ್ನು ಓಲೈಕೆ ಮಾಡಬೇಕೆಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಕೆಆರ್‌ಎಸ್‌ನಿಂದ ನೀರು ಹರಿಸುವ ಮಾರಕ ತೀರ್ಮಾನ ಕೈಗೊಂಡಂತಿದೆ. ರಾಜ್ಯದ ರೈತರ ಹಿತ ಕಾಪಾಡುವ ಸದುದ್ದೇಶದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಕರುನಾಡು ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ಪಿ.ಶಿವಮೂರ್ತಿ, ಜಿಲ್ಲಾಧ್ಯಕ್ಷ ಎಸ್.ಪಿ.ಶಿವಣ್ಣ, ಪ್ರಮುಖರಾದ ಕೂಡ್ಲು ಶ್ರೀಧರ್, ಹೇಮಂತ್ ಕುಮಾರ್, ಸಿ.ಮೂರ್ತಿ, ಎಂ.ಮಂಜುನಾಥ್, ಪ್ರೊ.ಎಚ್.ಕಲ್ಲನ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net