ಕನ್ನಡಿಗ ಸಚಿವರೆದುರು ರಾಶಿ ಸವಾಲು: ರಾಜ್ಯದ ಬಾಕಿ ಕೊಡಿಸುವ ಹೊಣೆ, ಹೆಚ್ಚಿನ ಯೋಜನೆ ತರುವ ಜವಾಬ್ದಾರಿ

VV Spl
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿರುವ ರಾಜ್ಯದ ನಾಲ್ವರು ಹೊಸ ಸಚಿವರ ಎದುರು ಸವಾಲುಗಳ ರಾಶಿಯೇ ಇದ್ದು, ಹಾದಿ ಕೂಡ ಕಲ್ಲು-ಮುಳ್ಳುಗಳಿಂದಲೇ ತುಂಬಿದೆ.ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್ ನಂತರ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿರುವುದು ಸಂತಸದ ಸುದ್ದಿಯಾದರೂ ವಾಸ್ತವದಲ್ಲಿ ನೂತನ ಸಚಿವರ ಮುಂದಿನ ಹಾದಿ ತಂತಿ ಮೇಲಿನ ನಡಿಗೆಯಾಗಿದೆ. ಸಂಪುಟದಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದರ ಹಿಂದೆ ನಾನಾ ವ್ಯಾಖ್ಯಾನಗಳಿದ್ದರೂ ರಾಜ್ಯದ ನೂತನ ಸಚಿವರು ಸವಾಲು ನಿಭಾಯಿಸಲೇಬೇಕಾಗಿದೆ.

ವರ್ಚಸ್ಸು ವೃದ್ಧಿಗೆ ಆದ್ಯತೆ: ಸಚಿವಾಲಯಗಳಿಗೆ ಸಂಬಂಧಿಸಿದ ಸವಾಲುಗಳ ಜತೆಯಲ್ಲೇ 2 ಪ್ರಮುಖ ಜವಾಬ್ದಾರಿಗಳಿವೆ. ಮೊದಲನೆಯದು ಕೇಂದ್ರದ ವರ್ಚಸ್ಸು ವೃದ್ಧಿಗೆ ಗಮನ ಹರಿಸುವುದು. ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ, ಪಕ್ಷದ ರಾಜ್ಯ ಘಟಕ ಬಳಸಿಕೊಂಡು ಈ ಕೆಲಸಗಳನ್ನು ನಿಭಾಯಿಸಬೇಕಾಗಿದೆ. ಕೇಂದ್ರದಲ್ಲಿ 2024ಕ್ಕೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾದರೆ ವರ್ಚಸ್ಸು ವೃದ್ಧಿ ಮುಖ್ಯವಾಗಿದೆ. ಯಾವ ಸಚಿವರಿಗೂ ಹನಿಮೂನ್ ಅವಧಿ ಇರುವುದಿಲ್ಲ. ಅನೇಕ ಪ್ರಮುಖ ಸಚಿವರಿಗೆ ಗೇಟ್ ಪಾಸ್ ನೀಡಿರುವುದು ಎಲ್ಲ ಸಚಿವರಿಗೂ ಎಚ್ಚರಿಕೆಯ ಗಂಟೆಯೇ.

ಯೋಜನೆ ಜಾರಿ ಹೊಣೆ: ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ನೆರವು ತರುವುದು 2ನೇ ಜವಾಬ್ದಾರಿಯಾಗಿದೆ. ಎಲ್ಲ ಸಂಸದರನ್ನು ಜತೆಯಲ್ಲಿ ತೆಗೆದುಕೊಂಡು ಹೋಗುವುದು. ಕೇಂದ್ರದಲ್ಲಿ ಬಾಕಿ ಇರುವ ಜಿಎಸ್​ಟಿ ಪರಿಹಾರ ಬಿಡುಗಡೆ ಮಾಡಿಸು ವುದು, 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದು, ಮೇಕೆದಾಟು ಯೋಜನೆಗೆ ಪರಿಸರ ಅನುಮತಿ, ಶಿರಾಡಿ ಘಾಟ್​ನಲ್ಲಿ ಸುರಂಗ ರಸ್ತೆ ಸೇರಿ ಬಾಕಿ ಇರುವ ಯೋಜನೆಗಳಿಗೆ ಹಸಿರುನಿಶಾನೆ ಕೊಡಿಸುವ ಕೆಲಸ ಮಾಡಬೇಕಾಗಿದೆ. ಕೇಂದ್ರದಲ್ಲಿ ಲಾಬಿ ಮಾಡುವ ವಿಚಾರದಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆಂಬ ಆರೋಪ ಸುಳ್ಳಾಗಿಸಬೇಕಾದ ಜವಾಬ್ದಾರಿ ಇದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತರ ಕರ್ನಾಟಕದ ನೀರಾವರಿ ಸ್ಥಿತಿ ಗಮನದಲ್ಲಿಟ್ಟುಕೊಂಡೇ ಯೋಜನೆ ರೂಪಿಸಿದ್ದರು. ಬೆಂಗಳೂರಿನಲ್ಲಿ ರಸ್ತೆಗಳಿಗೆ ಮಿಲಿಟರಿ ಜಾಗ ಬಿಟ್ಟುಕೊಡುವಂತೆ ಮಾಡಿದ್ದರು. ಅಂತಹ ಶಾಶ್ವತ ಕೆಲಸಗಳು ನೂತನ ಸಚಿವರಿಂದ ಆಗಬೇಕಿದೆ.

ಭಗವಂತ ಖೂಬಾ

ರಾಸಾಯನಿಕ ಮತ್ತು ರಸಗೊಬ್ಬರ, ನವೀಕರಿಸುವ ಇಂಧನ ರಾಜ್ಯ ಸಚಿವ

  • ವಿದ್ಯುತ್ ಉತ್ಪಾದನೆಗೆ ಈಗ ನವೀಕರಿಸುವ ಮೂಲಗಳೇ ಆದ್ಯತೆ ಆಗಬೇಕಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಯೋಜನೆಗಳನ್ನು ತರಬೇಕು.
  • ಕಿರು ಜಲ ಯೋಜನೆ ಜಾರಿಗೆ ರಾಜ್ಯದಲ್ಲಿ ಹೆಚ್ಚಿನ ಅವಕಾಶಗಳಿದ್ದು, ಸದ್ಬಳಕೆಗೆ ಆದ್ಯತೆ. ್ಝೋಲಾರ್ ವಿದ್ಯುತ್​ನ ಬೃಹತ್ ಯೋಜನೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ.
  • ಸರ್ಕಾರಿ ಕಚೇರಿಗಳಲ್ಲಿ ಸೋಲಾರ್ ಶಕ್ತಿ ಉತ್ಪಾದನೆಗೆ ಹೆಚ್ಚಿನ ಒತ್ತು.
  • ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆ ಹೆಚ್ಚಿರುವುದರಿಂದ ಇಥೆನಾಲ್ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರಯತ್ನ.
  • ರಸಗೊಬ್ಬರದ ದರ ನಿಯಂತ್ರಣ, ರೈತರಿಗೆ ಸಬ್ಸಿಡಿ ಹೆಚ್ಚು ಮಾಡಿಸುವ ಕಡೆ ಗಮನ.
  • ಕೀಟನಾಶಕಗಳ ಬಳಕೆ ನಿಯಂತ್ರಣ.
  • ಔಷಧಗಳ ಬೆಲೆ ಕಡಿಮೆ ಮಾಡುವ ಕಡೆ ಗಮನ. ಅಗತ್ಯ ಕರೊನಾ ಔಷಧಗಳನ್ನು ರಾಜ್ಯಕ್ಕೆ ಒದಗಿಸುವ ನಿಟ್ಟಿನಲ್ಲಿ ಆದ್ಯತೆ.

ಶೋಭಾ ಕರಂದ್ಲಾಜೆ

ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ

  • ಕೃಷಿ ಬಿಕ್ಕಟ್ಟಿನಲ್ಲಿದ್ದು ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರೈತರ ಸಂಕಷ್ಟಕ್ಕೆ ನೆರವು.
  • ಕೃಷಿ ಉತ್ಪನ್ನಗಳಿಗೆ ಬೆಲೆ ಖಾತ್ರಿ.
  • ಉತ್ಪಾದನಾ ವೆಚ್ಚ ಹೆಚ್ಚಾಗಿರುವುದಕ್ಕೆ ಕಡಿವಾಣ ಹಾಕುವ ಪ್ರಯತ್ನ.
  • ಗೊಬ್ಬರ ದರ ಕಡಿಮೆ ಮಾಡಿಸಬೇಕಾಗಿದೆ.
  • ಕೃಷಿಗೂ ಸಬ್ಸಿಡಿ ದರದಲ್ಲಿ ಡಿಸೇಲ್ ಕೊಡಿಸುವ ಕಡೆ ಗಮನ ಹರಿಸಬೇಕಾಗಿದೆ.
  • ಕಾಫಿ ಹಾಗೂ ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ.
  • ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಆದ್ಯತೆ ನೀಡಬೇಕು, ಜಿಲ್ಲೆಗೊಂದು ಉತ್ಪನ್ನ ಯೋಜನೆ ಪರಿಣಾಮಕಾರಿ ಜಾರಿಗೆ ಒತ್ತು.

ರಾಜೀವ್ ಚಂದ್ರಶೇಖರ್

ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ರಾಜ್ಯ ಸಚಿವ 

  • ಯುವ ಸಮುದಾಯದಲ್ಲಿ ಭರವಸೆ ತುಂಬುವ ಯೋಜನೆ ರೂಪಿಸಬೇಕಾಗಿದೆ.
  • ಬೆಂಗಳೂರಿನಲ್ಲಿ ಕೇಂದ್ರಿಕೃತಗೊಂಡಿರುವ ಐಟಿ ಸಂಸ್ಥೆಗಳು ಇತರೆಡೆ ಹೋಗುವಂತೆ ನೋಡಿಕೊಳ್ಳುವುದು.
  • 2 ಮತ್ತು 3ನೇ ಹಂತದ ಜಿಲ್ಲಾ ಕೇಂದ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೆರವು.
  • ರಾಜ್ಯದಲ್ಲಿ ಕರೊನಾ ಲಾಕ್​ಡೌನ್​ನಿಂದ ನಿರುದ್ಯೋಗದ ಪ್ರಮಾಣ ಶೇ.29.8ರಷ್ಟು ಇದ್ದು ಅದನ್ನು ಕಡಿಮೆ ಮಾಡಲು ಹೊಸ ಹೊಸ ಕೌಶಲ್ಯ ಗುರುತಿಸಬೇಕಾಗಿದೆ.
  • ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಹೊಸ ಹೊಸ ಕೌಶಲ್ಯ ಕೋರ್ಸ್​ಗಳನ್ನು ತರುವ ಕೆಲಸ.

ಎ. ನಾರಾಯಣಸ್ವಾಮಿ

ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ

  • ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಆದ್ಯತೆ ನೀಡಬೇಕಾಗಿದೆ.
  • ಮೀಸಲಾತಿಗೆ ಸಂಬಂಧ ರಾಜ್ಯದಿಂದ ಕೆಲ ಅರ್ಜಿಗಳು ಕೇಂದ್ರದ ಮುಂದೆ ಬಾಕಿ ಇವೆ, ಅವುಗಳಿಗೆ ಒಪ್ಪಿಗೆ ಕೊಡಿಸುವ ಕೆಲಸ.
  • ಪರಿಶಿಷ್ಟರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುವ ಕಡೆ ಗಮನ ಹರಿಸಬೇಕಾಗಿದೆ. ವಿದ್ಯಾಸಿರಿಯಂತಹ ಯೋಜನೆ ಜಾರಿ.
  • ರಾಜ್ಯದಲ್ಲಿ ಪರಿಶಿಷ್ಟರ ಹಾಸ್ಟೆಲ್​ಗಳ, ವಸತಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ನೆರವು.
  • ಸಬಲೀಕರಣದ ಮೂಲಕ ಪರಿಶಿಷ್ಟರಲ್ಲಿ ಉದ್ಯಮಶೀಲತೆಯನ್ನು ತರಬೇಕಾಗಿದೆ. ಆ ಮೂಲಕ ಪರಿಶಿಷ್ಟರ ಸಬಲೀಕರಣ.

ಕಾರ್ಯಕರ್ತರಿಗೆ ಮಣೆ, ಹರ್ಷದ ಹೊಳೆ

ಪಕ್ಷದ ಸಂಘಟನೆಗೆ ತಳಮಟ್ಟದಲ್ಲಿ ದುಡಿದು ಹಂತ ಹಂತವಾಗಿ ಮೇಲೇರಿದ ಕಾರ್ಯಕರ್ತರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಮಣೆ ಹಾಕಲಾಗಿದೆ ಎಂದು ರಾಜ್ಯ ಬಿಜೆಪಿ ಸಂತಸದಿಂದ ಬೀಗುತ್ತಿದೆ. ಚುನಾವಣಾ ರಾಜಕಾರಣದಲ್ಲಿ ಮಾತ್ರವಲ್ಲ, ಅಧಿಕಾರ ಹಂಚಿಕೆಯಲ್ಲೂ ಆದ್ಯತೆ ಸಿಗುತ್ತದೆ ಎಂದು ಕಾರ್ಯಕರ್ತರು ಹರ್ಷದ ಹೊಳೆಯಲ್ಲಿ ಮಿಂದೆದ್ದಿದ್ದಾರೆ.

ಪಕ್ಷ ಸಂಘಟನೆಯಲ್ಲಿ ಹುರುಪು ತುಂಬಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ಪ್ರಕಾರ, ರಾಜ್ಯದಿಂದ ಬೂತ್​ವುಟ್ಟದ ತನಕ ಯೋಜಿತ ರೂಪುರೇಷೆಯಂತೆ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯ ಸರ್ಕಾರ, ಪಕ್ಷದ ಇತ್ತೀಚಿನ ಬೆಳವಣಿಗೆಯಿಂದ ಕಳೆಗುಂದಿದ್ದ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ ಎಂದು ಮೂಲಗಳು ಹೇಳುತ್ತವೆ.

ಕೇಂದ ಸಂಪುಟ ಪುನಾರಚನೆಯಲ್ಲಿ ಪ್ರಧಾನಿ ಮೋದಿ ಹಾಗೂ ಪಕ್ಷದ ವರಿಷ್ಠರು ಊಹೆಗೂ ನಿಲುಕದ ರೀತಿಯಲ್ಲಿ ರಾಜ್ಯಕ್ಕೆ ಆದ್ಯತೆ ನೀಡಿದ್ದು, ಸಂಘಟನೆಗೆ ಹೆಚ್ಚು ಬಲ ತುಂಬಲಿದೆ ಎಂಬ ನಿರೀಕ್ಷೆ ಸಹಜ. ಹೊಸ ಸಚಿವರ ಪೈಕಿ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಹಾಗೂ ಭಗವಂತ್ ಖೂಬಾ ಪಕ್ಷದ ಕಾರ್ಯಕರ್ತರು ಎಂಬುದು ಗಮನಾರ್ಹ. ಉದ್ಯಮಿ ಹಾಗೂ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ನಿಪುಣ ರಾಜೀವ ಚಂದ್ರಶೇಖರ್​ಗೂ ಅವಕಾಶ ಕಲ್ಪಿಸುವ ಮೂಲಕ ಸಿಲಿಕಾನ್ ಸಿಟಿಗೆ ಹೊಸ ಸ್ಪರ್ಶದ ಇರಾದೆ ವ್ಯಕ್ತಪಡಿಸಿದಂತಾಗಿದೆ.

ಶೋಷಿತರು, ಮಹಿಳೆ ಸೇರಿ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯದ ಮೂಲಕ ಸಾಮಾಜಿಕ ನ್ಯಾಯ ನೀಡಿದ ದೊಡ್ಡ ಸಂದೇಶ ರವಾನೆಯಾಗಿದೆ. ಹೊಸ ಸಚಿವರಿಗೆ ನೀಡಿದ ಖಾತೆಗಳು ರಾಜ್ಯದ ಶೇ.70 ಜನರನ್ನು ಪ್ರತಿನಿಧಿಸುತ್ತಿದ್ದು, ಮುಂದಿನ ಎಲ್ಲ ಹಂತದ ಚುನಾವಣೆಗಳಿಗೆ ವರದಾನ ನಿಶ್ಚಿತವೆಂದು ಪಕ್ಷದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಜನರ ವಿಶ್ವಾಸ ಗಳಿಕೆ, ಹತ್ತಿರಕ್ಕೆ ಪಕ್ಷವನ್ನು ಕೊಂಡೊಯ್ಯುವ ಬಗೆ? ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು ಎಂದು ಬಲ್ಲವರ ಹೆಗಲಿಗೆ ಮಂತ್ರಿ ಸ್ಥಾನದ ಹೊಣೆಗಾರಿಕೆ ನೀಡಿದ್ದು, ಇನ್ನುಮುಂದೆ ರಾಜ್ಯ ನಾಯಕರ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ. ಸಂಪುಟದಿಂದ ಡಿ.ವಿ.ಸದಾನಂದಗೌಡರನ್ನು ಕೈಬಿಡಲು ಕಾರ್ಯ -ಕಾರಣಗಳು ಏನೇ ಇದ್ದರೂ, ಅವರ ಸೇವಾ ಹಿರಿತನ, ಅನುಭವಕ್ಕೆ ತಕ್ಕ ಸ್ಥಾನಮಾನ ಪಕ್ಷದಲ್ಲಿ ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಕೇಂದ್ರದಲ್ಲಿ ಸಹಕಾರ ಇಲಾಖೆ ವರ: ಸಹಕಾರ ಕ್ಷೇತ್ರ ಕೃಷಿಗೆ ಪೂರಕವಾದದ್ದು, ಕೃಷಿ ಚಟುವಟಿಕೆಗೆ ನೇರ ಸಂಬಂಧ ಹೊಂದಿರುವ ಈ ಕ್ಷೇತ್ರಕ್ಕೆ ಕೃಷಿ ಇಲಾಖೆಯಷ್ಟು ಮಹತ್ವವಾಗಲಿ, ಸಮಯವಾಗಲಿ ಸಿಗುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ವನವನ್ನು ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು. ಈಗ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಯಾವುದಾದರೂ ಸಮಸ್ಯೆ ತಲೆ ದೋರಿದರೆ ನೇರವಾಗಿ ಕೇಂದ್ರದಲ್ಲಿ ಸಹಕಾರ ಸಚಿವರನ್ನು ಭೇಟಿ ಮಾಡಬಹುದಾಗಿದೆ. ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ರಾಜ್ಯದ ನಾಲ್ವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿದ್ದಾರೆ. ಎಲ್ಲ ಜಾತಿ-ವರ್ಗಗಳಿಗೆ ಬಹುದೊಡ್ಡ ಸಂದೇಶ ರವಾನೆಯಾಗಿದೆ. 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಮೋದಿ ಏನು ಕೊಟ್ಟರು? ಎಂದು ಪದೇಪದೆ ಕೇಳುತ್ತಿದ್ದ ಪ್ರತಿಪಕ್ಷಗಳಿಗೆ ಉತ್ತರ ಸಿಕ್ಕಿದೆ.

| ಎನ್.ರವಿಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net