

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಹೊಸ ತಿರುವು ಪಡೆದಿದೆ. ನಿವೃತ್ತ ಐಎಎಸ್ ಅಧಿಕಾರಿ, ಹಾಲಿ ಕಾಂಗ್ರೆಸ್ ಸಂಸದ ಕುಮಾರ್ ನಾಯಕ್ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳು ಕರ್ತವ್ಯಲೋಪದ ಆಪಾದನೆಗೆ ಸಿಲುಕಿದ್ದಾರೆ. ಈ ಪೈಕಿ ಮೂವರು ನಿವೃತ್ತಿಗೊಂಡಿದ್ದಾರೆ.
ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಕುಮಾರ್ ನಾಯಕ್, ಮೈಸೂರು ತಾಲೂಕು ಹಿಂದಿನ ನಿವೃತ್ತ ತಹಸೀಲ್ದಾರ್ ಮಾಳಿಗೆ ಶಂಕರ್, ನಿವೃತ್ತ ರೆವಿನ್ಯೂ ಇನ್ಸ್ಪೆಕ್ಟರ್ ಸಿದ್ದಪ್ಪಾಜಿ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಭೂಮಾಪಕ ಶಂಕರಪ್ಪ ವಿರುದ್ಧ ಇಲಾಖಾ ವಿಚಾರಣೆ/ಶಿಸ್ತು ಕ್ರಮಕ್ಕೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಶಿಫಾರಸ್ಸು ಮಾಡಿದ್ದು, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹೈಕೋರ್ಟ್ ಸೂಚನೆ ಮೇರೆಗೆ ಮುಡಾ ಸೈಟ್ ಅಕ್ರಮ ಹಂಚಿಕೆ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನೇತೃತ್ವದ ತಂಡ ತನಿಖೆ ನಡೆಸಿತ್ತು. ಫೆ.20ರಂದು 82ನೇ ಸಿಸಿಎಚ್ ಜನಪ್ರತಿನಿಧಿಗಳ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಪೀಠಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. 27 ಸಂಪುಟಗಳ 11 ಸಾವಿರ ಪುಟಗಳ ಈ ಸುದೀರ್ಘ ವರದಿಯಲ್ಲಿ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದ ಆರೋಪಿಗಳಾದ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ. ದೇವರಾಜು ಇತರರ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಲೋಕಾಯುಕ್ತ ಅಧಿಕಾರಿಗಳು ವರದಿ ಸಲ್ಲಿಸಿದ್ದರು.
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ತಮಗಿಷ್ಟ ಬಂದಂತೆ ವರದಿ ಬರೆಸಿಕೊಂಡಿದ್ದಾರೆ. ಬಹಳಷ್ಟು ಪ್ರಕರಣದಲ್ಲಿ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಾರೆಯೇ ಹೊರತು ಲೂಟಿ ಹೊಡೆಯುವವರಲ್ಲ, ಇಲ್ಲಿಯೂ ಅದೇ ಆಗಿದೆ. ಮುಡಾವನ್ನು ಆ ದೇವರೇ ಕಾಪಾಡಬೇಕು. | ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ಜಮೀನು ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010ರಲ್ಲಿ ದಾನವಾಗಿ ಕೊಟ್ಟಿದ್ದಾರೆ. ಅದಕ್ಕೂ ಮೊದಲು ಆ ಜಮೀನು ಖರೀದಿ ಮಾಡಿರುವ ವಿಷಯ ನನಗೆ ಗೊತ್ತಿಲ್ಲ ಎಂದು ಸಿಎಂ ಪತ್ನಿ ಪಾರ್ವತಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ದಾನದ ಭೂಮಿಯನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಿದಾಗ 2014ರಲ್ಲಿ ಬದಲಿ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ಆದರೆ, ಸೈಟ್ ನೀಡುವಂತೆ ಅರ್ಜಿ ಸಲ್ಲಿಸಿಲ್ಲ. ಇದಾದ ಮೇಲೆ 2017ರಲ್ಲಿ ಮತ್ತು 2020ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆಗಲೂ ಬದಲಿ ಜಾಗ ನೀಡುವಂತೆ ಕೋರಿದ್ದೆ. ಅರ್ಜಿಗೆ ವೈಟನರ್ ಹಾಕಿರುವ ವಿಚಾರ ಗಮನಿಸಿರಲಿಲ್ಲ. 2014ರಲ್ಲಿ ಯಾರು ಅರ್ಜಿ ಬರೆದರು ಎಂಬುದು ನೆನಪು ಇಲ್ಲ. ಇದಾದ ಮೇಲೆ ಮುಡಾ ಅಧಿಕಾರಿಗಳನ್ನು ನಾನು ಭೇಟಿಯೇ ಮಾಡಿಲ್ಲ. 2021ರಲ್ಲಿ ಮುಡಾದಿಂದ ಸೈಟ್ ಕೊಡುವ ವಿಚಾರ ಅಣ್ಣ ಮಲ್ಲಿಕಾರ್ಜುನ ಸ್ವಾಮಿಯಿಂದ ತಿಳಿಯಿತು. 14 ಸೈಟ್ಗಳ ಪರಿತ್ಯಾಜನ ಪತ್ರ ಮತ್ತು ನೋಂದಾಯಿಸಿಕೊಳ್ಳುವ ನೋಂದಣಿ ಪತ್ರಕ್ಕೆ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಹಾಕಿರುತ್ತೇನೆ. ಈ ವಿಷಯದಲ್ಲಿ ನನ್ನ ಪತಿ ಮತ್ತು ಪುತ್ರನ ಹಸ್ತಕ್ಷೇಪ ಇರುವುದಿಲ್ಲ. ಆದರೂ ನನ್ನ ಪತಿಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದರಿಂದ ವಾಪಸ್ ಮಾಡಿರುವುದಾಗಿ ಪಾರ್ವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ನನ್ನ ಪತ್ನಿ ಪಾರ್ವತಿಗೆ ಭೂಮಿ ದಾನವಾಗಿ ಕೊಟ್ಟಿರುವ ವಿಚಾರ 2013ರಲ್ಲಿ ತಿಳಿಯಿತು. ಭೂಪರಿವರ್ತನೆ ಮಾಡಿಸುವಾಗ ಮಲ್ಲಿಕಾರ್ಜುನ ಸ್ವಾಮಿ ನನ್ನ ಸಂಪರ್ಕ ಮಾಡಿಲ್ಲ. ಆ ವೇಳೆ ಕುಮಾರ್ ನಾಯಕ್ ಜಿಲ್ಲಾಧಿಕಾರಿಯಾಗಿದ್ದರೂ ಅವರನ್ನು ನಾನು ಭೇಟಿ ಅಥವಾ ಶಿಫಾರಸು ಮಾಡಿಲ್ಲ. 2014ರಲ್ಲಿ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಿದ ವಿಷಯ ಪತ್ನಿಯಿಂದ ತಿಳಿಯಿತು. ಆಗ ನಾನು ಸಿಎಂ ಆಗಿದ್ದೆ. ಯಾವುದೇ ವಿಷಯ ಅಧಿಕಾರಿಗಳ ಜತೆ ಚರ್ಚೆ ಮಾಡಿಲ್ಲ ಎಂದು ಸಿದ್ದರಾಮಯ್ಯ, ಲೋಕಾಯುಕ್ತ ವಿಚಾರಣೆಯಲ್ಲಿ ಹೇಳಿದ್ದಾರೆ.
ಸಂಸದ ಕುಮಾರ್ ನಾಯಕ್ ಐಎಎಸ್ ಅಧಿಕಾರಿಯಾಗಿದ್ದು, 2023ರಲ್ಲಿ ಸೇವೆಯಿಂದ ನಿವೃತ್ತಿ ಆಗಿದ್ದರಿಂದ ಅಖಿಲ ಭಾರತ (ಶಿಸ್ತು ನಡಾವಳಿಗಳು) ಸೇವಾ (ಶಿಸ್ತು ಪಾಲನಾ ನಡಾವಳಿಗಳು) ನಿಮಯ 1965ರ ಅನ್ವಯ ಕ್ರಮಕ್ಕೆ ಅವಕಾಶವಿದೆ. ಅಲ್ಲದೆ, ಕೃತ್ಯ ನಡೆದು 19 ವರ್ಷ ಕಳೆದಿರುವುದರಿಂದ ಇವರ ವಿರುದ್ಧ ಶಿಸ್ತುಕ್ರಮದ ಬಗ್ಗೆ ಸರ್ಕಾರ ತೀರ್ಮಾನಿಸಬೇಕಾಗಿದೆ. ಇವರಲ್ಲದೆ, ಸರ್ವೆಯರ್ ಶಂಕರಪ್ಪ, ಪ್ರಸ್ತುತ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಿವಿಲ್ ಸೇವಾ (ನಿಯಂತ್ರಣ, ವರ್ಗೀಕರಣ ಮತ್ತು ಅಪೀಲು ನಿಯಮಗಳು) ಅನ್ವಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ಜಮೀನು ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010ರಲ್ಲಿ ದಾನವಾಗಿ ಕೊಟ್ಟಿದ್ದಾರೆ.
ಅದಕ್ಕೂ ಮೊದಲು ಆ ಜಮೀನು ಖರೀದಿ ಮಾಡಿರುವ ವಿಷಯ ನನಗೆ ಗೊತ್ತಿಲ್ಲ ಎಂದು ಸಿಎಂ ಪತ್ನಿ ಪಾರ್ವತಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ದಾನದ ಭೂಮಿಯನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಿದಾಗ 2014ರಲ್ಲಿ ಬದಲಿ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ಆದರೆ, ಸೈಟ್ ನೀಡುವಂತೆ ಅರ್ಜಿ ಸಲ್ಲಿಸಿಲ್ಲ. ಇದಾದ ಮೇಲೆ 2017ರಲ್ಲಿ ಮತ್ತು 2020ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆಗಲೂ ಬದಲಿ ಜಾಗ ನೀಡುವಂತೆ ಕೋರಿದ್ದೆ. ಅರ್ಜಿಗೆ ವೈಟನರ್ ಹಾಕಿರುವ ವಿಚಾರ ಗಮನಿಸಿರಲಿಲ್ಲ. 2014ರಲ್ಲಿ ಯಾರು ಅರ್ಜಿ ಬರೆದರು ಎಂಬುದು ನೆನಪು ಇಲ್ಲ. ಇದಾದ ಮೇಲೆ ಮುಡಾ ಅಧಿಕಾರಿಗಳನ್ನು ನಾನು ಭೇಟಿಯೇ ಮಾಡಿಲ್ಲ. 2021ರಲ್ಲಿ ಮುಡಾದಿಂದ ಸೈಟ್ ಕೊಡುವ ವಿಚಾರ ಅಣ್ಣ ಮಲ್ಲಿಕಾರ್ಜುನ ಸ್ವಾಮಿಯಿಂದ ತಿಳಿಯಿತು.
14 ಸೈಟ್ಗಳ ಪರಿತ್ಯಾಜನ ಪತ್ರ ಮತ್ತು ನೋಂದಾಯಿಸಿಕೊಳ್ಳುವ ನೋಂದಣಿ ಪತ್ರಕ್ಕೆ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಹಾಕಿರುತ್ತೇನೆ. ಈ ವಿಷಯದಲ್ಲಿ ನನ್ನ ಪತಿ ಮತ್ತು ಪುತ್ರನ ಹಸ್ತಕ್ಷೇಪ ಇರುವುದಿಲ್ಲ. ಆದರೂ ನನ್ನ ಪತಿಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದರಿಂದ ವಾಪಸ್ ಮಾಡಿರುವುದಾಗಿ ಪಾರ್ವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಡಾ ಸೈಟ್ ಹಂಚಿಕೆ ಮತ್ತು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಲೋಪ ಇರುವುದು ಕಂಡುಬಂದಿದೆ. ಮಲ್ಲಿಕಾರ್ಜುನಸ್ವಾಮಿ ಅರ್ಜಿಯ ಮೇರೆಗೆ ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂ 464ರ 3 ಎಕರೆ 16 ಗುಂಟೆ ಜಮೀನಿನಲ್ಲಿ ಮುಡಾ ದೇವನೂರು 3ನೇ ಹಂತದ ಬಡಾವಣೆಗಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಈ ಜಮೀನಿಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್, ತಹಸೀಲ್ದಾರ್ ಆಗಿದ್ದ ಮಾಳಿಗೆ ಶಂಕರ್, ರೆವಿನ್ಯೂ ಇನ್ಸ್ಪೆಕ್ಟರ್ ಸಿದ್ದಪ್ಪಾಜಿ ಮತ್ತು ಸರ್ವೆಯರ್ ಶಂಕರಪ್ಪ ಭೇಟಿ ನೀಡದೇ ಸ್ಥಳ ತನಿಖಾ ವರದಿ ಹಾಗೂ ನಕ್ಷೆಯನ್ನು ತಯಾರಿಸಿ ಅನ್ಯಕ್ರಾಂತ ಆದೇಶ ಹೊರಡಿಸಿದ್ದರು.
ಈ ಪೈಕಿ ಮಾಳಿಗೆ ಶಂಕರ್ ಮತ್ತು ಸಿದ್ದಪ್ಪಾಜಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿ 4 ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಆದ್ದರಿಂದ ಕರ್ನಾಟಕ ಸರಕಾರಿ ಸೇವಾ ನಿಯಮಗಳು, ನಿಯಮ 214 (ಬಿ)ರ ಅನ್ವಯ ಇಲಾಖಾ ವ್ಯವಹರಣೆಗಳನ್ನು ಸರ್ಕಾರಿ ನಿವೃತ್ತಿಗೆ ಮುಂಚೆಯಾಗಲೀ ಅಥವಾ ಅವರು ಮರು ನೇಮಕಗೊಂಡ ಅವಧಿಯಲ್ಲಿ ಆಗಲಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಅವಕಾಶವಿಲ್ಲ. ಅಲ್ಲದೆ, ಘಟನೆ ನಡೆದು 19 ವರ್ಷಗಳು ಕಳೆದಿರುವುದರಿಂದ ಶಿಸ್ತುಕ್ರಮ ಕೈಬಿಡುವ ತೀರ್ಮಾನ ಸರ್ಕಾರ ಕೈಗೊಳ್ಳಬೇಕಾಗಿದೆ. 2016ನೇ ಸಾಲಿನಿಂದ 2024ನೇ ಸಾಲಿನವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ಸೈಟ್ಗಳನ್ನು ನೀಡಿದ ಆರೋಪಗಳ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಕಲಂ 173 (8) ಸಿಆರ್ಪಿಸಿ ಅನ್ವಯ ಹೆಚ್ಚುವರಿ ಅಂತಿಮ ವರದಿ ಸಲ್ಲಿಸಬೇಕಿದೆ ಎಂದು ಲೋಕಾಯುಕ್ತ ಪೊಲೀಸರು ಉಲ್ಲೇಖಿಸಿದ್ದಾರೆ.