ಸತತ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ

klr govt,webp
Published on

ಕೋಲಾರ: ಪಾಲಕರು ಮಕ್ಕಳ ಇಚ್ಚೆಗೆ ಅನುಗುಣವಾಗಿ ಮುನ್ನಡೆಯಲು ಬಿಡಬೇಕು. ಮತ್ತೊಬ್ಬರಿಗೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡಿ ಮೂದಲಿಸಿದರೆ ಪರಿಣಾಮ ಬೀರುತ್ತದೆ ಎಂದು ಲೋಕ ಸೇವಾ ಆಯೋಗದ ಸದಸ್ಯ ಹಾಗೂ ನಿವೃತ್ತ ಡಿಐಜಿಪಿ ಎಂ.ವಿ.ರಾಮಕೃಷ್ಣಪ್ರಸಾದ್ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತವು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ನಿಮ್ಮ ಗುರಿ ಸಾಧನೆಗೆ ಮೊದಲ ಹೆಜ್ಜೆ. ಆತ್ಮವಿಶ್ವಾಸದಿಂದ ಮುನ್ನಡೆಯುವ ಮೂಲಕ, ಸತತ ಪರಿಶ್ರಮ ಇದ್ದಾಗ ಗುರಿ ಮುಟ್ಟಲು ಸಾಧನೆ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಅದು ಬಿಟ್ಟು ಪಾಲಕರಿಗೆ ಹೊರೆಯಾಗಬಾರದು ಎಂದು ಕಿವಿ ಮಾತು ಹೇಳಿದರು.
ಪ್ರಜಾ ಪ್ರಭುತ್ವದಲ್ಲಿ ಸರ್ಕಾರಗಳು ಜಾರಿಗೆ ತರುವ ಯಾವುದೇ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಮುಖ ಜವಾಬ್ದಾರಿ ಕಾರ್ಯಾಂಗ ವಹಿಸಿಕೊಂಡಿದ್ದು, ಸಂವಿಧಾನಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದರೆ ಅಧಿಕಾರಿಗಳಿಂದ ಸರ್ಕಾರಕ್ಕೆ ಉತ್ತಮ ಹೆಸರು ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಅಧಿಕಾರಿಯನನ್ನು ಕನಿಷ್ಠ 2 ವರ್ಷ ಒಂದು ಕಡೆ ಬಿಡಬೇಕು, ಜಿಲ್ಲಾಧಿಕಾರಿಗಳು ಕೇವಲ ಸಭೆಗಳಿಗೆ ಸೀಮಿತರಾಗದೇ ಜನರನ್ನು ಭೇಟಿಯಾಗಲು ಒಂದಿಷ್ಟು ಸಮಯ ಮೀಸಲಿರಿಸಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ೭ನೇ ವೇತನ ಆಯೋಗದ ವರದಿ ಜಾರಿ ಮಾಡುವ ಮೂಲಕ ನೌಕರರ ನಂಬಿಕೆಯನ್ನು ಸರ್ಕಾರ ಉಳಿಸಿಕೊಂಡಿದೆ. ಒಂದೆರಡು ತಿಂಗಳಲ್ಲಿ ಒಪಿಎಸ್ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅಕ್ರಂಪಾಷಾ ಮಾತನಾಡಿ, ಮಕ್ಕಳು ಆಸಕ್ತಿ ಇರುವ ಹಾದಿಯಲ್ಲಿ ಸಾಗಲು ಪಾಲಕರು ಸಹಕಾರ ನೀಡಬೇಕು. ಮಕ್ಕಳ ಸಾಧನೆಯ ನಂತರ ತಂದೆ, ತಾಯಿ, ಊರು ಮರೆಯಬಾರದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಪ್ರತಿಭಾ ಪುರಸ್ಕಾರ ಮಕ್ಕಳಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳಿಸುತ್ತದೆ. ನಿಮ್ಮ ಸಾಧನೆಯ ಹಾದಿ ಯಾವುದೇ ಆದರೂ ಅದರಲ್ಲಿ ಯಶ ಸಾಧಿಸಬೇಕು. ಪೊಲೀಸ್ ಅಧಿಕಾರಿಯಾಗಬೇಕೆಂಬ ಗುರಿ ಇರಲಿ ಆದರೆ ಪೊಲೀಸರ ವಶಕ್ಕೆ ಹೋಗುವ ತಪ್ಪು ಮಾಡಬೇಡಿ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ನೌಕರರ ಮಕ್ಕಳನ್ನು ಅಭಿನಂಧಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಮ್ಮೇಗೌಡ, ಖಜಾಂಚಿ ಡಾ.ಎಸ್.ಸಿದ್ದರಾಮಣ್ಣ, ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು, ಉಪಾಧ್ಯಕ್ಷರಾದ ಎಂ.ವಿ.ರುದ್ರಪ್ಪ, ಎಸ್.ಬಸವರಾಜು, ಗಿರಿಗೌಡ, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಕೆ.ಬಿ.ಅಶೋಕ್, ಕೆ.ಎನ್.ಮಂಜುನಾಥ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ನೌಕರರ ಸಂಘದ ಖಜಾಂಚಿ ವಿಜಯ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net