ಮಾತು ತಪ್ಪದಿರುವುದೇ ತಪಸ್ಸು

lord sriram
Published on
krishnaraja kuthpadi
ಕೃಷ್ಣರಾಜ ಕುತ್ಪಾಡಿ
ಭಾರತೀಯ ಇತಿಹಾಸ ಪರಂಪರೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕೆ ಬಹಳ ಬೆಲೆ ಇದೆ. ಜೀವನಪೂರ್ತಿ ಹಾಗೆ ನಡೆದುಕೊಳ್ಳುವುದು ತುಂಬಾ ಕಷ್ಟಸಾಧ್ಯವಾದ ವ್ರತ. ಹಾಗಾಗಿಯೇ ಅದು ತಪಸ್ಸು. ಮನೆಮನೆಗಳಲ್ಲಿ ಕಾಣುವ ಸಾಂಸಾರಿಕ ತಾಪತ್ರಯಗಳ ಹಿನ್ನೆಲೆಯನ್ನು ಗಮನಿಸಿದಾಗ ಹೆಚ್ಚಾಗಿ ಕಾಣುವುದು ಎರಡು ದೋಷಗಳು. ತಾಪದ ಮಾತುಗಳನ್ನಾಡುವುದು. ಆಡಿದ ಮಾತನ್ನು ತಪ್ಪಿಸಿಕೊಳ್ಳುವುದು. ಇವೆರಡು ಜನ್ಮಾಂತರಕ್ಕೂ ಹರಿದು, ನಮ್ಮ ನೆಮ್ಮದಿಯನ್ನು ಕೆಡಿಸುತ್ತವೆ. ನಮ್ಮ ಹಿರಿಯರಿಗೆ ಮಾತು ತಪ್ಪಿಸುವುದಕ್ಕಿಂತ ಪ್ರಾಣ ಬಿಡುವುದೇ ಲೇಸು ಎಂಬ ಭಾವವಿತ್ತು. ಈ ಪ್ರಾಮಾಣಿಕತೆ ಇದ್ದಾಗ ಬದುಕಿನ ಸಣ್ಣಸಣ್ಣ ಸುಖಗಳು ಕೂಡ ಅಪ್ಯಾಯಮಾನವಾಗಿರುತ್ತವೆ. ವಿಶ್ವಾಮಿತ್ರರೊಮ್ಮೆ ದಶರಥನನ್ನು ಭೇಟಿಯಾಗಿದ್ದರು. ರಾಜನಾಗಿ ಮುನಿಗಳನ್ನು ಆತ್ಮೀಯವಾಗಿ ಆದರಿಸಿದ.

ಕಂ ಚ ತೇ ಪರಮಂ ಕಾಮಂ ಕರೋಮಿ ಕಿಮು ಹರ್ಷಿತಃ|/ ಅದ್ಯ ಮೇ ಸಫಲಂ ಜನ್ಮ ಜೀವಿತಂ ಚ ಸುಜೀವಿತಂ||/ ಕಾರ್ಯಸ್ಯ ನ ವಿಮರ್ಶಂ ಚ ಗಂತುಮರ್ಹಸಿ ಕೌಶಿಕ|/ ಕರ್ತಾ ಚಾಹಮಶೇಷೇಣ ದೈವತಂ ಹಿ ಭವಾನ್ಮಮ|| ‘ಕೌಶಿಕನೇ! ನಿಮ್ಮ ಯಾವ ಬಯಕೆಗಳನ್ನು ನಾನು ಈಡೇರಿಸಲಿ. ನಿಮ್ಮ ದರ್ಶನದಿಂದ ತುಷ್ಟನಾಗಿದ್ದೇನೆ. ಬದುಕು ಸಫಲವಾಯಿತು. ಏನೇ ಕಾರ್ಯವಿರಲಿ, ನೀವು ಹೇಳಿದ ಮೇಲೆ ವಿಚಾರಿಸುವ ಪ್ರಶ್ನೆಯೇ ಬರದು. ಎಲ್ಲವನ್ನು ಸಾಂಗವಾಗಿ ನಡೆಸಿಕೊಡುವೆನು, ನೀವು ನನಗೆ ದೈವತ ಸ್ವರೂಪ’. ಹೀಗೆ ವಿಶ್ವಾಮಿತ್ರರಿಗೆ ಮಾತು ನೀಡಿದ. ವಿಶ್ವಾಮಿತ್ರರು ತಾವು ಲೋಕ ಕ್ಷೇಮಕ್ಕಾಗಿ ಕೈಗೊಂಡಿರುವ ಯಜ್ಞದ ಬಗ್ಗೆ ವಿವರಿಸಿದರು. ‘ಆ ಯಜ್ಞವನ್ನು ಭಗ್ನಗೊಳಿಸಲು ಪ್ರಯತ್ನಪಡುತ್ತಿರುವ ಇಬ್ಬರು ಕ್ರೂರ ರಕ್ಕಸರು ಇದ್ದಾರೆ. ಅವರ ನಿಗ್ರಹಕ್ಕಾಗಿ ರಾಮಲಕ್ಷ್ಮಣನನ್ನು ಕಳುಹಿಸಿಕೊಡು’ ಎಂದು ಕೇಳುತ್ತಾರೆ. ರಾಮನನ್ನು ಕಳುಹಿಸಿ ಕೊಡಬೇಕಾದ ಮಾತು ಬಂದೊಡನೆ ದಶರಥ ಹಿಂದಡಿ ಇಡುತ್ತಾನೆ.

ಊನಷೋಡಶವಷೋ ಮೇ ರಾಮೋ ರಾಜೀವಲೋಚನಃ|/ ನ ಯುದ್ಧಯೋಗ್ಯತಾಮಸ್ಯ ಪಶ್ಯಾಮಿ ಸಹ ರಾಕ್ಷಸೈಃ||/ ‘ಹದಿನಾರು ತುಂಬದ, ಅರಳುಗಣ್ಣಿನ ಹುಡುಗ ಈ ರಾಮ. ಇವನಲ್ಲಿ ರಕ್ಕಸರೊಡನೆ ಹೋರುವ ಕೆಚ್ಚನು ನಾ ಕಾಣೆ.’ ತಡವಾಗಿ ಪಡೆದ ಮಗು ಇದು. ಈ ಮಗನ ಕಳೆದುಕೊಂಡರೆ ಇನ್ನಾರು ಗತಿ? ತಾನೇ ಪ್ರಾಣ ತೆತ್ತಾದರೂ ತಮಗೆ ಸಹಾಯ ಮಾಡುವೆನೆಂದು ದಶರಥ ಮಾತು ಮರೆಮಾಚತೊಡಗಿದ. ವಿಶ್ವಾಮಿತ್ರರು ಕಪಿತರಾದರು.

ಪೂರ್ವಮರ್ಥಂ ಪ್ರತಿಶ್ರುತ್ಯ ಪ್ರತಿಜ್ಞಾಂ ಹಾತುಮರ್ಹಸಿ|/ ಮಿಥ್ಯಾಪ್ರತಿಜ್ಞಃ ಕಾಕುತ್ಸ್ಥ ಸುಖೀ ಭವ ಸಬಾಂಧವಃ||/ ‘ಮೊದಲು ಕೊಡುವೆನೆಂದು ಮಾತು ಕೊಟ್ಟು ಈಗ ಆ ಮಾತನ್ನೇ ತಪ್ಪಿಸುತ್ತಿರುವೆ. ನೀನು ಸುಳ್ಳು ಭರವಸೆ ಕೊಡುವವನಾದೆ. ಇರಲಿ! ಬಂಧುಗಳೊಡನೆ ಸುಖಿಯಾಗಿರು’ ಎಂದು ಮೌನಕ್ಕೆ ಶರಣಾದರು. ಆಗಲೇ ಎದುರುಗೊಂಡ ತಪನಕುಲಹಿತರಾದ ವಸಿಷ್ಠರು ಶ್ರೀರಾಮನ ಸಾಮರ್ಥ್ಯವನ್ನು ಕೊಂಡಾಡಿದರು. ತಾನು ತಪಸ್ವಿಯಾಗಿ ಶಕ್ತನಾದರೂ, ಕ್ಷತ್ರಿಯೋಚಿತವಾದ ದುಷ್ಟಸಂಹಾರವನ್ನು ರಾಮನಿಂದಲೇ ಮಾಡಿಸಲು ಉದ್ಯುಕ್ತರಾಗಿದ್ದ ವಿಶ್ವಾಮಿತ್ರರ ಈ ನಡೆಯನ್ನು ಸಮರ್ಥಿಸಿಕೊಂಡರು.

ಸಂಶ್ರುತ್ಯೈವಂ ಕರಿಷ್ಯಾಮೀತ್ಯಕುರ್ವಾಣಸ್ಯ ರಾಘವ|/ ಇಷ್ಟಾಪೂರ್ತವಧೋ ಭೂಯಾತ್ ತಸ್ಮಾದ್ರಾಮಂ ವಿಸರ್ಜಯ||/ ‘ರಾಘವ! ಬೇಡಿಕೆಯನ್ನು ಈಡೇರಿಸುವೆನೆಂದು ಆಶ್ವಾಸನೆ ಇತ್ತು, ಮುಂದೆ ಆ ಮಾತನ್ನು ಪೊಳ್ಳು ಮಾಡುವವನ ಬಾಳು ಬರಿ ಗೋಳು. ತಾನು ಹಿಂದೆ ನಡೆಸಿದ ಆತ್ಮಹಿತ ಮತ್ತು ಲೋಕಹಿತದ ಎಲ್ಲಾ ಕಾರ್ಯ ಕೂಡ ನಿಷ್ಪಲಗೊಳ್ಳುತ್ತದೆ. ಆದ್ದರಿಂದ ಈ ಕೂಡಲೇ ರಾಮ ಲಕ್ಷ್ಮಣರನ್ನು ಕಳುಹಿಸಿಕೊಡು’ ಎಂದು ವಸಿಷ್ಠರು ಆದೇಶಿಸಿದರು. ದಶರಥನ ಮಾತನ್ನು ಉಳಿಸಿದರು. ಗುರುಗಳೊಡನೆ ಶಿಕ್ಷಣ, ಅಸ್ತ್ರಗಳ ಪ್ರಾಪ್ತಿ, ರಾಕ್ಷಸರಸಂಹಾರ, ಯಜ್ಞರಕ್ಷಣೆ, ಅಹಲ್ಯೋದ್ಧಾರ, ಸೀತಾಪಾಣಿಗ್ರಹಣ ಎಲ್ಲವೂ ಗುರು ಕರುಣದಿಂದ ನಡೆದು ಹೋಗುತ್ತದೆ. ಉಳಿಸಿಕೊಂಡ ಮಾತು ಇಕ್ಷ್ವಾಕುಕುಲಕ್ಕೆ ಬೆಳಕು ತರುತ್ತದೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net