ಪಿರಿಯಾಪಟ್ಟಣ: ತಂಬಾಕು ಮಂಡಳಿಯಲ್ಲಿ ದಕ್ಷ ಹಾಗೂ ರೈತರ ಪರ ಕಾಳಜಿ ಹೊಂದಿರುವ ಅಧಿಕಾರಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ದೂರು ನೀಡಿರುವುದು ಖಂಡನೀಯ ಎಂದು ಕೇಂದ್ರ ತಂಬಾಕು ಮಂಡಳಿ ಸದಸ್ಯ ವಿಕ್ರಂ ರಾಜ್ ತಿಳಿಸಿದರು.
ತಂಬಾಕು ಮಂಡಳಿಯ ದಕ್ಷ ಹಾಗೂ ಪ್ರಾಮಾಣಿಕ ಹರಾಜು ನಿರ್ದೇಶಕರಾದ ಬಿ.ಸಿ.ಶ್ರೀನಿವಾಸ್ ಅವರ ವಿರುದ್ಧ ಶೃಂಗಾರ ಎಂಬ ವ್ಯಕ್ತಿ ತಾನೊಬ್ಬ ದಲಿತನಾದ್ದರಿಂದ ಜಾತಿ ಅಸ್ತ್ರವನ್ನು ಪ್ರಯೋಗಿಸಿ ಹುಣಸೂರಿನ ಆರಕ್ಷಕ ಉಪ ಅಧೀಕ್ಷಕರಿಗೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಲು ದೂರು ನೀಡಿದ್ದಾರೆ. ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಗ್ರಾಮದ ಶೃಂಗಾರ ಎಂಬ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದ ತಂಬಾಕು ಹರಾಜು ಮಾರುಕಟ್ಟೆಗೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆ ಪಡೆಯುತ್ತಿದ್ದು, ಪ್ರಸ್ತುತ ಕಟ್ಟೆಮಳವಾಡಿ ಹರಾಜು ಮಾರುಕಟ್ಟೆಗೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆಗಾಗಿ ಕೇಂದ್ರ ಸರ್ಕಾರದ ಕಾನೂನಿನ ಅಡಿಯಲ್ಲಿ ಜೆಇಎಂ ಅಪ್ಲಿಕೇಶನ್ ಮುಖೇನ ಟೆಂಡರ್‌ನಲ್ಲಿ ಭಾಗವಹಿಸಿ ಗುತ್ತಿಗೆಯ ನಿಬಂಧನೆಗಳನ್ನು ಪೂರ್ಣಗೊಳಿಸಲು ಅಸಮರ್ಥನಾದ ಕಾರಣ ಹೊರ ಗುತ್ತಿಗೆಯು ಅನ್ಯ ವ್ಯಕ್ತಿಯ ಪಾಲಾಗಿದ್ದಕ್ಕೆ ಕೋಪಗೊಂಡು ಈ ದೂರನ್ನು ನೀಡಿದ್ದಾನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ದೂರು ದುರುದ್ದೇಶ ಪೂರ್ವಕವಾಗಿದ್ದು ದೂರನ್ನು ಪೊಲೀಸ್ ಇಲಾಖೆ ಪಡೆಯದೆ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುತ್ತಿರುವ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಪ್ರಕಾಶ್‌ರಾಜೇ ಅರಸ್, ತೆಲುಗಿನ ಕುಪ್ಪೆ ನಾಗಣ್ಣ, ಹಬಟೂರು ರಮೇಶ್, ಹರೀಶ್ ತಾತನಹಳ್ಳಿ, ಟಿ.ಎಸ್. ಮಲ್ಲಪ್ಪ, ಹಬಟೂರು ಕಾಳೇಗೌಡ ಹಾಜರಿದ್ದರು.