

ಬೆಂಗಳೂರು: ಇಂದು ಮಧ್ಯಾಹ್ನ 1.30ರ ಹೊತ್ತಿಗೆ ಬೆಂಗಳೂರಿಗರು ಬೆಚ್ಚಿಬೀಳುವಂತಹ ಒಂದು ಘಟನೆ ನಡೆದಿದೆ. ನಗರದ ಅರ್ಧಕ್ಕರ್ಧ ಭಾಗದಲ್ಲಿ ಭಾರೀ ಪ್ರಮಾಣದ ಸದ್ದು ಆಗಿದ್ದು, ಜನ ಭಯಭೀತಗೊಂಡಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ.ರಸ್ತೆ, ಮಾರತಹಳ್ಳಿ, ವೈಟ್ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಲಾಲ್ಬಾಗ್ ಸೇರಿ ಹಲವು ಕಡೆಗಳಲ್ಲಿ ಈ ಭಾರಿ ಪ್ರಮಾಣದ ಸದ್ದು ಕೇಳಿಬಂದಿದೆ.
ಪೊಲೀಸರಂತೂ ನಗರದೆಲ್ಲೆಡೆ ತೀವ್ರ ಶೋಧದಲ್ಲಿ ತೊಡಗಿದ್ದಾರೆ. ಇದು ಭೂಕಂಪವಲ್ಲ, ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಬೆಂಗಳೂರಿಗರು ಈ ಸದ್ದಿನ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.