ಧೂಳು ಫಿಲ್ಟರ್ ಮಾಡುತ್ತೆ, ಗಾಳಿಯನ್ನೂ ಬಿಸಿ ಮಾಡುತ್ತೆ ಇದು ‘ಸೈಗಾ ಆಂಟೆಲೋಪ್’ ಪ್ರಾಣಿಯ ಮ್ಯಾಜಿಕ್ ಮೂಗು! | Saiga Antelope

‘AC-nosed’ Saiga Antelope
ಮೈನಸ್ 40 ಡಿಗ್ರಿಯಲ್ಲೂ ಬದುಕುವ ‘ನೈಸರ್ಗಿಕ AC ಮೂಗಿನ’ ಪ್ರಾಣಿ
Published on: 

Saiga Antelope features: ಪ್ರಕೃತಿಯ ವಿಸ್ಮಯಗಳಲ್ಲ ಒಂದಾದ 'ಸೈಗಾ ಆಂಟೆಲೋಪ್' ಪ್ರಾಣಿಯನ್ನು ನೋಡಿದ್ದೀರಾ? ಸಣ್ಣ ಸೊಂಡಿಲಿನಂತಿರುವ ಇದರ ಮೂಗು ನೋಡೋಕೆ ಎಷ್ಟು ವಿಚಿತ್ರವಾಗಿದೆಯೋ, ಇದರ ಹಿನ್ನೆಲೆಯೂ ಅಷ್ಟೇ ರೋಚಕ. ಮ್ಯಾಮತ್‌ಗಳ ಕಾಲದಿಂದಲೂ ಇಂದಿನವರೆಗೂ ಭೂಮಿ ಮೇಲೆ ಬದುಕುಳಿದಿರುವ ಅಪರೂಪದ ಜೀವಂತ ಪಳೆಯುಳಿಕೆ ಇದು.

ಈ ಪ್ರಾಣಿಯ ದೊಡ್ಡ ಮೂಗು ಕೇವಲ ವಿಚಿತ್ರವಾಗಿ ಕಾಣುವುದು ಮಾತ್ರವಲ್ಲ, ಅದ್ಭುತವಾದ ನೈಸರ್ಗಿಕ ಹವಾನಿಯಂತ್ರಣ (AC) ವ್ಯವಸ್ಥೆಯಂತೆ ಕೆಲಸ ಮಾಡುತ್ತೆ.

ಉಸಿರಾಟಕ್ಕೆ ನೈಸರ್ಗಿಕ ಎಸಿ ವ್ಯವಸ್ಥೆ

ಚಳಿಗಾಲದಲ್ಲಿ: ಮೈನಸ್ 40 ಡಿಗ್ರಿ ತೀವ್ರ ಚಳಿಯಿರುವಾಗ, ದೇಹದ ಒಳಗೆ ಗಾಳಿ ಹೋಗುವ ಮುನ್ನವೇ ಅದನ್ನು ಬೆಚ್ಚಗಾಗಿಸಿ ಉಸಿರಾಡಲು ನೆರವಾಗುತ್ತೆ.

ಬೇಸಿಗೆಯಲ್ಲಿ: ಬಿಸಿಲಿನಲ್ಲಿ ವೇಗವಾಗಿ ಓಡುವಾಗ ಗಾಳಿಯಲ್ಲಿರುವ ಧೂಳನ್ನು ಫಿಲ್ಟರ್ ಮಾಡಿ ಶ್ವಾಸಕೋಶವನ್ನು ರಕ್ಷಿಸುತ್ತೆ ಮತ್ತು ರಕ್ತದ ತಾಪಮಾನವನ್ನು ನಿಯಂತ್ರಣದಲ್ಲಿಡುತ್ತೆ.

ಮ್ಯಾಮತ್‌ಗಳ ಕಾಲದಿಂದಲೂ ಜೀವಂತ

ಉಣ್ಣೆಯ ಮ್ಯಾಮತ್ (Woolly Mammoth) ಹಾಗೂ ಸಬರ್-ಟೂತ್ಡ್ ಬೆಕ್ಕುಗಳು ಭೂಮಿಯ ಮೇಲಿದ್ದ ಕಾಲದಿಂದಲೂ ಈ ಸೈಗಾ ಆಂಟೆಲೋಪ್‌ಗಳಿವೆ. ಕಾಲಕ್ರಮೇಣ ದೈತ್ಯ ಹಿಮಯುಗದ ಪ್ರಾಣಿಗಳೆಲ್ಲ ನಾಶವಾದರೂ, ಇವು ಮಾತ್ರ ಇಂದಿಗೂ ಬದುಕುಳಿದು ಬಂದಿರುವುದು ನಿಜಕ್ಕೂ ಪವಾಡವೇ ಸರಿ.

ಎಲ್ಲಿರುತ್ತವೆ? ಜೀವನಶೈಲಿ ಹೇಗಿದೆ?

ಇವು ಪ್ರಮುಖವಾಗಿ ಕಝಾಕಿಸ್ತಾನ್, ಮಂಗೋಲಿಯಾ, ರಷ್ಯಾ ಮತ್ತು ಉಜ್ಬೇಕಿಸ್ತಾನ್‌ನ ವಿಶಾಲವಾದ ಹುಲ್ಲುಗಾವಲುಗಳಲ್ಲಿ (Steppes) ಕಾಣ ಸಿಗುತ್ತವೆ.

ಅದ್ಭುತ ವೇಗ: ತೋಳಗಳಂತಹ ಪರಭಕ್ಷಕ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಇವು ಗಂಟೆಗೆ ಬರೋಬ್ಬರಿ 80 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು.

ದೊಡ್ಡ ವಲಸೆ: ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಸಾವಿರಾರು ಸಂಖ್ಯೆಯ ಹಿಂಡುಗಳಲ್ಲಿ ನೂರಾರು ಮೈಲಿಗಳವರೆಗೆ ವಲಸೆ ಹೋಗುತ್ತವೆ.

ಗಂಡು ಪ್ರಾಣಿಗಳಿಗೆ ಮಾತ್ರ ಕೊಂಬು: ಗಂಡು ಸೈಗಾಗಳಿಗೆ ಮೇಲ್ಮುಖವಾಗಿ ಬೆಳೆಯುವ ತಿಳಿ ಹಳದಿ ಬಣ್ಣದ ಕೊಂಬುಗಳಿರುತ್ತವೆ. ಆದರೆ ಹೆಣ್ಣು ಪ್ರಾಣಿಗಳಿಗೆ ಕೊಂಬು ಇರುವುದಿಲ್ಲ.

ಇದನ್ನೂ ಓದಿ: ದಶರಥನ ಪಾತ್ರ ಮಾಡಲು ನಿರಾಕರಿಸಿದ್ದ ಅರುಣ್ ಗೋವಿಲ್! 'ರಾಮಾಯಣ' ಸಿನಿಮಾದ ರೋಚಕ ಕಥೆ ಬಿಚ್ಚಿಟ್ಟ ನಟ | Arun Govil Ramayana

ಮರಳಿ ಚೇತರಿಸಿಕೊಳ್ಳುತ್ತಿದೆ ‘ಸೈಗಾ’ ಸಂತತಿ

ಚೀನೀ ಸಾಂಪ್ರದಾಯಿಕ ಔಷಧಕ್ಕಾಗಿ ಕಳ್ಳಬೇಟೆ ಮತ್ತು ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಸೈಗಾ ಆಂಟೆಲೋಪ್‌ಗಳ ಸಂಖ್ಯೆ ತೀವ್ರವಾಗಿ ಕುಸಿದಿತ್ತು. ಆದರೆ, ಇತ್ತೀಚಿನ ಕಠಿಣ ಸಂರಕ್ಷಣಾ ಕ್ರಮಗಳಿಂದಾಗಿ ಈ ಅಪರೂಪದ ಪ್ರಾಣಿಗಳ ಸಂಖ್ಯೆ ಮತ್ತೆ ಹೆಚ್ಚುತ್ತಿರುವುದು ಪರಿಸರ ಪ್ರೇಮಿಗಳಿಗೆ ಸಂತಸ ತಂದಿದೆ.