

ಆದರೆ ಭಗವಂತನನ್ನು ಕರೆಯುವ ಪರಿಯೇನು? ಅಲ್ಲೂ ಈ ಎರಡೂ ಪರಿಗಳುಂಟು. ‘ತ್ವಮೇವ ಮಾತಾ ಚ ಪಿತಾ ತ್ವಮೇವ’ ಎನ್ನುವಾಗ ಅದು ಸಂಬಂಧವೇ. ಇನ್ನು ಭಗವಂತನನ್ನು ಹೆಸರು ಹಿಡಿದು ಕರೆಯುವುದೆಂದರೆ ಅದೂ ಸುಕರವೇ. ಹೇಗೆ? ಭಾರತೀಯ-ಸಂಸ್ಕೃತಿಯಲ್ಲಿ ದೇವತೆಗಳಿಗೂ ಕಡಿಮೆಯಿಲ್ಲ, ಅವರ ಹೆಸರುಗಳಿಗೂ ಕಡಿಮೆಯಿಲ್ಲ. 33 ಕೋಟಿ ದೇವತೆಗಳೆಂದು ಕಲ್ಪಿಸಿಕೊಳ್ಳಲೂ ಅನ್ಯರಿಗಾಗಿಲ್ಲ. ತಮಗೊಬ್ಬೊಬ್ಬನೇ ದೇವನೆಂಬ ಕಾರಣಕ್ಕೆ ತಮ್ಮ ಸಂಸ್ಕೃತಿಯೇ ಹೆಚ್ಚೆಂದು ಕೊಚ್ಚಿಕೊಳ್ಳುವವರೂ ಉಂಟು. ಉಪನಿಷತ್ತಿನ 33 ದೇವತೆಗಳನ್ನೇ ವಿಸõತರೂಪದಲ್ಲಿ 33 ಕೋಟಿಯೆಂದಿರುವುದು.
ರುಂಡ- ಮುಂಡ- ಕೈಕಾಲುಗಳೆಂದಾಗಿ ನಮ್ಮಲ್ಲೇ ಮೂರಿ ಲ್ಲವೇ? ಒಂದೇ ಮೈ ಮೂರಾಗಿ(ತೋರಿ)ದೆ. ಕೈಕಾಲುಗಳನ್ನೇ ತೆಗೆದುಕೊಂಡರೂ ಒಂದೊಂದರಲ್ಲೇ ಐದೈದು ಬೆರಳುಗಳಿಲ್ಲವೇ? ಮೂಲದಲ್ಲಿ ಒಂದು, ವಿಸ್ತಾರದಲ್ಲಿ ಐದು. ಹೀಗೆ ಪಂಚವೇ ಪ್ರಪಂಚವಾಗಿರುವುದೂ. ಇನ್ನು ದೇವತೆ ಗಳ ಹೆಸರುಗಳೋ? ಅದೆಷ್ಟೊಂದು ಅಷ್ಟೋತ್ತರ ಶತ-ಅಷ್ಟೋತ್ತರಸಹಸ್ರನಾಮಗಳು! ಶಿವಸಹಸ್ರನಾಮ- ವಿಷ್ಣುಸಹಸ್ರನಾಮಗಳು ಮಹಾಭಾರತದಲ್ಲೇ ಬರುತ್ತವೆ. ಪುರಾಣ ಗಳಲ್ಲಿ ಹತ್ತುಹಲವು ದೇವತೆಗಳ ಸಹಸ್ರನಾಮಗಳಿವೆ.
ಇವೆಲ್ಲದರ ಮೂಲದಲ್ಲಿ ಒಂದೇ ತತ್ತ್ವವಿರುವುದಾದರೆ, ಆ ಮೂಲ ಭಗವತ್ತತ್ತ್ವಕ್ಕೇ ಹೆಸರೊಂದುಂಟೇ? - ಎಂದು ಕೇಳಬಹುದಲ್ಲವೇ? ಅದಕ್ಕೆ ಯೋಗಶಾಸ್ತ್ರದ ಉತ್ತರವಿದೆ. ದೇವನೆಂದರೆ ಎಂತಹವನು, ಹಾಗೂ ಆತನ ಹೆಸರೇನು - ಎಂಬುದನ್ನೂ ಪಾತಂಜಲ ಯೋಗಸೂತ್ರವು ಹೇಳುತ್ತದೆ: ‘ಯಾವನಿಗೆ ಕ್ಲೇಶ-ಕರ್ಮಗಳಿರವೋ ಆತನೇ ಈಶ್ವರ; ಪ್ರಣವವೇ ಆತನ ವಾಚಕ (ತಸ್ಯ ವಾಚಕಃ ಪ್ರಣವಃ)’ ಎಂದಿದೆ.
ಇಲ್ಲಿ ಹೇಳಿರುವ ಕ್ಲೇಶ-ಕರ್ವದಿಗಳು ಪಾರಿಭಾಷಿಕ ಪದಗಳು. ಅವುಗಳ ವಿಶ್ಲೇಷಣೆ ಇಲ್ಲಿ ಬೇಡ. ಹೆಸರಿಗೇ ಇನ್ನೊಂದು ಹೆಸರು ವಾಚಕ. ಈ ವಾಚಕದಿಂದ ಯಾರನ್ನು ಹೆಸರಿಸಲಾಗಿದೆಯೋ ಆತನು ವಾಚ್ಯ. ಹೀಗೆ, ಇಲ್ಲಿ ಈಶ್ವರನು ವಾಚ್ಯ, ಪ್ರಣವವೆಂಬುದು ವಾಚಕ. ಅರ್ಥಾತ್, ಈಶ್ವರನ ಹೆಸರೇ ಪ್ರಣವ.
ನಮಗೆಲ್ಲ ಹುಟ್ಟುಂಟು, ಸಾವುಂಟು. ಭಗವಂತನ ಅವತಾರಗಳಿಗೆ ಸಹ ಹೀಗೆಯೇ ಆದಿಯುಂಟು, ಅಂತವುಂಟು. ಆದರೆ ಭಗವಂತನೇ ಹೇಗಿರುವ ನೆಂದರೆ ಆತನು ಅನಾದಿ, ಅನಂತ. ಎಂದೇ ಎಂದೂ ಹೊಸದಾಗಿಯೇ ಇರುವವನು ಆತ! ನವವೆಂದರೆ ಹೊಸತು; ಪ್ರ-ನವ ವೆಂದರೆ ಹೊಚ್ಚಹೊಸತು! ಹೀಗೆ ಎಂದೆಂದೂ ಹೊಚ್ಚಹೊಸ ತಾಗಿರುವ ನಿತ್ಯತತ್ತ್ವವೇ ಪ್ರಣವ. ಇದಲ್ಲದೆ ಯೋಗಶಾಸ್ತ್ರ ದೃಷ್ಟಿಯಿಂದ ಪ್ರಣವ ಎಂಬುದಕ್ಕೂ ಪ್ರಣಾಮ ಎಂಬುದಕ್ಕೂ ಹತ್ತಿರದ ನಂಟುಂಟು. ಭಕ್ತಿಯಿದ್ದೆಡೆ ಬಾಗುವುದೇ. ಪ್ರಣವವನ್ನು ಜಪಿಸಬೇಕೆಂದೂ, ಅದರ ಅರ್ಥವನ್ನು ಭಾವಿಸಬೇಕೆಂದೂ ಯೋಗಸೂತ್ರದಲ್ಲಿ ಹೇಳಿದೆ. ಪ್ರಣವ ವಾಚ್ಯನಾದ ಈಶ್ವರನಲ್ಲಿಯ ಪ್ರಣಿಧಾನದಿಂದಲೇ, ಎಂದರೆ ಭಕ್ತಿಪೂರ್ವಕ- ಸರ್ವಕರ್ವರ್ಪಣದಿಂದಲೇ, ಸಮಾಧಿಸಿದ್ಧಿಯಾಗುವುದೆಂದೂ ಅಲ್ಲೇ ಹೇಳಿದೆ.
ಪ್ರಣವಕ್ಕೆ ಪರ್ಯಾಯಪದವೊಂದುಂಟು. ಅದುವೇ ಓಂಕಾರ. ಕಾರ ಎಂಬುದನ್ನು ಸೇರಿಸಿದರೆ ಹೀಗೆಂಬ ಧ್ವನಿ ಎಂಬ ಅರ್ಥ ಬರುತ್ತದೆ. ಬಿಲ್ಲಿನ ಸದ್ದಿಗೆ ಟಂಕಾರ ಎನ್ನುತ್ತೇವೆ; ಅದಕ್ಕೆ ಟಂ - ಎಂಬ ಧ್ವನಿ ಎಂದರ್ಥ. ಹಾಗೆಯೇ ದುಂಬಿಗಳ ಝೇಂಕಾರವೆನ್ನುವಾಗಲೂ. ಅಂತೆಯೇ ಓಂಕಾರವೆಂದರೆ ಓಂ ಎಂಬ ಧ್ವನಿಯೆಂದೇ. ಈಶ್ವರತತ್ತ್ವವು ಅಮೂರ್ತವಾದದ್ದು, ಎಂದರೆ ಶರೀರವಿಲ್ಲದ್ದು. ಜ್ಯೋತೀರೂಪವಾದ ಅದು ಮೊಟ್ಟಮೊದಲು ಮೈತಾಳುವುದು ನಾದವಾಗಿ, ಶಬ್ದವಾಗಿ. ಎಂದೇ ಓಂಕಾರವನ್ನು ಈಶ್ವರನ ಶಬ್ದಮೂರ್ತಿಯೆನ್ನುವುದೂ ಉಂಟು. ಯೋಗಿಪುಂಗವರಾದ ಶ್ರೀರಂಗಮಹಾಗುರುಗಳ ಮಾತಿನಲ್ಲಿ, ಜಗತ್ತನ್ನಾಳುವ ಸ್ವರಾಟ್ ಆದ ಪ್ರಭುವಿನ ವಿಶ್ವಮೂಲಶಕ್ತಿಯ ಸದ್ದೇ ಈ ಓಂಕಾರ. ವೇದಾದಿಯಲ್ಲೇ ಪ್ರೋಕ್ತವಾದ ಸ್ವರವಿದು, ವೇದಾಂತದಲ್ಲಿಯೂ ಪ್ರತಿಷ್ಠಿತವಾದದ್ದು.
ಈ ಏಕಾಕ್ಷರಬ್ರಹ್ಮವೇ ಅಕಾರ- ಉಕಾರ- ಮಕಾರವಾಗಿ ವಿಸ್ತಾರಗೊಂಡು ಬ್ರಹ್ಮ- ವಿಷ್ಣು- ಮಹೇಶ್ವರವೆಂಬ ತ್ರಿಮೂರ್ತಿ ಗಳಾಗಿರುವುದು. ತ್ರಿದೇವಮೂಲವೆನ್ನುವಂತೆ ತ್ರಿವೇದಮೂಲವೂ ಓಂಕಾರವೇ. ಇದೆಲ್ಲವೂ ಯೋಗಿಗಳಿಗೇ ಏಕಾಂತದಲ್ಲೇ ಗೋಚರವಾಗತಕ್ಕದ್ದು. ಈಶ್ವರನನ್ನು ಹೆಸರು ಹಿಡಿದು ಓಂಕಾರದಿಂದ ಆಹ್ವಾನ ಮಾಡಿದರೆ ಆತನು ಪ್ರಸನ್ನಗೊಳ್ಳುತ್ತಾನೆ - ಎಂಬ ಯೋಗಿಯಾಜ್ಞವಲ್ಕ್ಯರ ಮಾತೂ ಇಲ್ಲಿ ಸ್ಮರಣೀಯವಲ್ಲವೇ?
(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)