

ನವದೆಹಲಿ: ರಾಜಸ್ಥಾನ ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸನ್ನು ತಿಳಿಯಾಗಿಸಲು ಕಾಂಗ್ರೆಸ್ ಹೈಕಮಾಂಡ್ ಒಂದು ಹಂತದ ಯಶಸ್ಸು ಕಂಡಿದೆ.
ಪಕ್ಷದಿಂದ ಬಂಡಾಯವೆದ್ದು ಡಿಸಿಎಂ ಸ್ಥಾನ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಂಡಿರುವ ಸಚಿನ್ ಪೈಲಟ್ ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಂಡಾಯದ ಬಳಿಕ ಇದೇ ಮೊದಲ ಬಾರಿಗೆ ಸಚಿನ್ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಪೈಲಟ್, ಬಂಡಾಯಕ್ಕೆ ಕಾರಣವಾಗಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯವಷ್ಟೇ ಎಂದು ಹೇಳಿದ್ದಾರೆ. ಬಂಡಾಯದ ಆರಂಭದಿಂದಲೂ ನಾನು ಇದನ್ನೇ ಹೇಳುತ್ತ ಬಂದಿದ್ದೆ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡೇ ಇಂಥದ್ದೊಂದು ವಿಚಾರವನ್ನು ಎತ್ತಿದ್ದೆ ಎಂದು ತಿಳಿಸಿದರು.
ಬಿಜೆಪಿ ಸೇರ್ಪಡೆ ವಿಚಾರವನ್ನು ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿದ್ದೇನೆ ಎಂದ ಸಚಿನ್ ಪೈಲಟ್, ಕೆಲವೊಂದು ವಿಚಾರಗಳಿಗೆ ಆದ್ಯತೆ ನೀಡಬೇಕಿತ್ತು. ನಾನು ಅದನ್ನೇ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ಭಿನ್ನಾಭಿಪ್ರಾಯಗಳು ತತ್ವ, ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಇದನ್ನು ಬಹಿರಂಗಗೊಳಿಸಬೇಕಾಗಿದ್ದು, ಪಕ್ಷದ ಹಿತಾಸಕ್ತಿ ಉದ್ದೇಶದಿಂದ ಮುಖ್ಯವಾಗಿತ್ತು ಎಂದು ಮೊದಲಿನಿಂದಲೂ ಭಾವಿಸಿದ್ದೆ ಎಂದು ಸಚಿನ್ ಪೈಲಟ್ ಹೇಳಿದರು.
ರಾಜ್ಯದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ನಾಯಕರೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸಚಿನ್ ಪೈಲಟ್ ವಿರುದ್ಧ ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು. ಇದು ಬಲಾಬಲ ಪರೀಕ್ಷೆಗೂ ಕಾರಣವಾಗಿತ್ತು. ಸದ್ಯ ಗೆಹ್ಲೋಟ್ ಬೆಂಬಲಿಗರು ಜೈಸಲ್ಮೇರ್ನ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದರೆ, ಪೈಲಟ್ ಬೆಂಬಲಿಗರು ಹರಿಯಾಣದ ಹೋಟೆಲ್ನಲ್ಲಿದ್ದಾರೆ. ಆಗಸ್ಟ್ 14ರಂದು ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದೆ.